ADVERTISEMENT

ರೀಮೇಕ್ ಜಿದ್ದಾಜಿದ್ದಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST
ರೀಮೇಕ್ ಜಿದ್ದಾಜಿದ್ದಿ
ರೀಮೇಕ್ ಜಿದ್ದಾಜಿದ್ದಿ   

ತನ್ನತ್ತ ನುಗ್ಗಿ ಬರುತ್ತಿದ್ದ ರೌಡಿಗಳನ್ನು ಹೊಡೆದು ಉರುಳಿಸುತ್ತಿದ್ದರು ಪ್ರಜ್ವಲ್ ದೇವರಾಜ್. ಕೆಲವೇ ಅಂತರದಲ್ಲಿ ಬೆದರಿದ ಹರಿಣಿಯಂತೆ ನಿಂತಿದ್ದರು ಐಂದ್ರಿತಾ ರೇ. `ಕಟ್~ ಎಂದು ಬ್ರೇಕ್ ಹಾಕಿದ ಸಾಹಸ ನಿರ್ದೇಶಕ ರವಿವರ್ಮ, ಪೆಟ್ಟು ತಿನ್ನುವ ರೌಡಿಗೆ ಹೇಗೆ ಉರುಳಿ ಬೀಳಬೇಕೆಂಬ ಪಾಠ ಹೇಳಿಕೊಟ್ಟರು.

ಬೆಂಗಳೂರಿನ ಬಿಜಿಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ `ಜಿದ್ದಿ~ ಚಿತ್ರದ ಹೊಡೆದಾಟ ಸನ್ನಿವೇಶದ ಚಿತ್ರೀಕರಣ ಸಂದರ್ಭವದು. ಕಾಲೇಜಿನಲ್ಲಿ ನಡೆಯುವ ಸಾಹಸ ದೃಶ್ಯಗಳನ್ನು ಛಾಯಾಗ್ರಾಹಕ ನಿರಂಜನ್ ಬಾಬು ಸೆರೆಹಿಡಿಯುತ್ತಿದ್ದರು. ಬಳಿಕ ಚಿತ್ರತಂಡ ಸುದ್ದಿಗೋಷ್ಠಿಗಾಗಿ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಪಡೆಯಿತು.

`ಜಿದ್ದಿ~ ಮಲಯಾಳಂ ನ `ಪುದಿಯೋಗಂ~ ಚಿತ್ರದ ರೀಮೇಕ್. ನಾಯಕ ಹಳ್ಳಿ ಹೈದ. ಓದಲು ನಗರಕ್ಕೆ ಬರುವ ಆತನಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೊತೆ ವೈಷಮ್ಯ ಬೆಳೆಯುತ್ತದೆ. ನಾಯಕಿ ಸಹ ಅದೇ ಕಾಲೇಜಿಗೆ ಸೇರಿಕೊಂಡಿರುತ್ತಾಳೆ.

ನಾಯಕಿಗೆ ನಾಯಕನ ಮೇಲೆ ಪ್ರೀತಿ. ಖಳನಾಯಕನಿಗೆ ನಾಯಕಿ ಮೇಲೆ ಪ್ರೀತಿ. ಇಬ್ಬರ ನಡುವೆ ಸೂಕ್ಷ್ಮ ಮನಸ್ಸಿನ ನಾಯಕನ ಮೇಲೆ ಏನೆಲ್ಲಾ ಪರಿಣಾಮವಾಗುತ್ತದೆ ಎಂಬುದು ಚಿತ್ರದ ಕಥೆ.

`ಜಿದ್ದಿ~ ಎಂದರೆ ಹಠಮಾರಿ, ಸೇಡು ಎಂದರ್ಥ ಎಂದು ವಿವರಿಸಿದರು ನಿರ್ದೇಶಕ ಅನಂತ ರಾಜು. ಹಳ್ಳಿಯ ಸನ್ನಿವೇಶಗಳಿಗಾಗಿ ಚಿತ್ರತಂಡ ಚೆನ್ನಪಟ್ಟಣ, ಅರಸೀಕೆರೆ ಮತ್ತು ಮೇಲುಕೋಟೆಗಳಿಗೆ ತೆರಳಲಿದೆ. ಉಳಿದಂತೆ ಇತರ ಭಾಗವೆಲ್ಲಾ ಬೆಂಗಳೂರಿನಲ್ಲಿಯೇ ನಡೆಯಲಿದೆ.

ಯೋಗರಾಜ್ ಭಟ್ ಬರೆದ ಹಾಡೊಂದನ್ನು ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದೆ. ಅದು ಭಟ್ಟರ ಟಿಪಿಕಲ್ ಶೈಲಿಯಲ್ಲಿ ಮೂಡಿಬಂದ ಹಾಡು. ಹೀಗಾಗಿ ಆ ಹಾಡು ಹಿಟ್ ಆಗಲಿದೆ ಎಂಬ ಭರವಸೆ ನಾಯಕ ನಟ ಪ್ರಜ್ವಲ್ ದೇವರಾಜ್ ಅವರದು.

ನಟಿ ಐಂದ್ರಿತಾ ರೇ ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರತಂಡವೂ ಚೆನ್ನಾಗಿದೆ. ಒಳ್ಳೆ ಸಿನಿಮಾ ಮಾಡುತ್ತಿರುವ ಖುಷಿ ಇದೆ ಎಂದು ಕೆಲವೇ ಪದಗಳಿಗೆ ಮಾತು ಮುಗಿಸಿದರು.

ಚಿತ್ರದಲ್ಲಿ ಖಳನಾಯಕ ಹಾಗೂ ನಾಯಕಿಯ ಕುಟುಂಬಗಳು ಉತ್ತಮ ಬಾಂಧವ್ಯ ಹೊಂದಿರುತ್ತವೆ. ಖಳನಾಯಕನ ಪಾತ್ರಧಾರಿ ತಿಲಕ್ ತಮ್ಮದು ಎಕ್ಸೈಟಿಂಗ್ ಪಾತ್ರ ಎಂದರು. ಮಾಮೂಲಿ ಖಳನಾಯಕರಂತೆ ಆರ್ಭಟಿಸಿ ಹೋಗುವ ಪಾತ್ರವಲ್ಲ. ಸಾಕಷ್ಟು ವೈವಿಧ್ಯಮಯವಾಗಿದೆ ಎಂದರು.

ವಿಜಯ್ ಸುರಾನಾ ಹಾಗೂ ಅಮರ್‌ಚಂದ್ ಜೈನ್ ಜೋಡಿ ಒಟ್ಟಾಗಿ ಸೇರಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು. ಗಿರಿಧರ್ ದಿವಾನ್ ಸಂಗೀತ ಹೊಸೆಯುವ ಹೊಣೆ ಹೊತ್ತಿದ್ದಾರೆ. ಅಕ್ಟೋಬರ್ ಒಳಗೆ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ಅನಂತ ರಾಜು ಅವರದು.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.