ADVERTISEMENT

ರುದ್ರಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 13:10 IST
Last Updated 6 ಜನವರಿ 2011, 13:10 IST
ರುದ್ರಲಕ್ಷ್ಮಿ
ರುದ್ರಲಕ್ಷ್ಮಿ   

ಕಂದು ಬಣ್ಣದ ಗುಂಗುರು ಕೂದಲು; ಬೆಳ್ಳಿ ಬಣ್ಣದ ಮುಖವಾಡ; ಕೆಂಡದ ಉಂಡೆಗಳಂಥ ಕಣ್ಣುಗಳು.‘ಲಕ್ಷ್ಮಿ’ ಹೆಸರಿನ ಸಿನಿಮಾದಲ್ಲಿ ನಾಯಕ ಶಿವರಾಜ್‌ಕುಮಾರ್ ಗೆಟಪ್ ಇದು. ಸಿನಿಮಾ ಹೆಸರಿಗೂ, ಈ ಪಾತ್ರಕ್ಕೂ ಹೊಂದಿಕೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಚಿತ್ರತಂಡ ಕೊಟ್ಟ ಉತ್ತರ- ‘ವಿಭಿನ್ನ’.

ಈ ಮೊದಲು ‘ಸತ್ಯ ಇನ್ ಲವ್’ ನಿರ್ದೇಶಿಸಿದ್ದ ರಾಘವ ಲೋಕಿ ‘ಲಕ್ಷ್ಮಿ’ಯ ರೂವಾರಿ. ಮಾತಿಗೆ ಕುಳಿತ ನಿರ್ದೇಶಕರು- ಇದು ಶಿವರಾಜ್‌ಕುಮಾರ್ ಅವರ 101ನೇ ಚಿತ್ರ. ನೂರು ಸಿನಿಮಾಗಳ ಮೂಲಕ ಅವರು ನಡೆದುಬಂದ ಹಾದಿಯನ್ನು ಚಿತ್ರದಲ್ಲಿ ಮೆಲುಕು ಹಾಕಲಾಗುತ್ತದೆ. ಅದಕ್ಕೆ ಗುರುಕಿರಣ್ ಹಾಡುಗಳಿಂದ ಸಾಥ್ ನೀಡಲಿದ್ದಾರೆ ಎಂದರು.

ಮಾತು ಮುಂದುವರಿಸಿದ ಲೋಕಿ- ‘ಇದು ಕೌಟುಂಬಿಕ ಚಿತ್ರ. ಚಿತ್ರದಲ್ಲಿ ಬೇರೆ ರೀತಿಯ ಶಿವಣ್ಣನನ್ನು ನೋಡಲಿದ್ದೀರಿ. ಹೊಸ ಶೈಲಿಯ ಸಂಭಾಷಣೆ ಮತ್ತು ಮೇಕಿಂಗ್ ಸ್ಟೈಲ್ ಇರುತ್ತದೆ. ನಾಯಕನ ಹೆಸರು ಲಕ್ಷ್ಮೀನಾರಾಯಣ. ಆದ್ದರಿಂದ ಚಿತ್ರಕ್ಕೆ ಲಕ್ಷ್ಮಿ ಎಂದು ಹೆಸರು ಇಟ್ಟಿದ್ದೇವೆ’ ಎಂದು ಹೇಳಿದರು.

ಸಿನಿಮಾ ಹೆಸರು ಸೌಮ್ಯಭಾವವನ್ನು ವ್ಯಕ್ತಪಡಿಸಿದರೂ, ಆಂತರಿಕವಾಗಿ ಭಯೋತ್ಪಾದನೆಯ ಅಂಶವೂ ಇದೆ ಎಂದು ಮಧ್ಯದಲ್ಲಿ ಮಾತು ಸೇರಿಸಿದರು ಶಿವರಾಜ್. ‘ಸಮಾಜದಲ್ಲಿ ಹಣ ಮುಖ್ಯ. ಆದರೆ ಅದು ಸುಲಭವಾಗಿ ಸಿಗುವುದಿಲ್ಲ’ ಎಂಬುದನ್ನೂ ಚಿತ್ರ ಸಾರುವುದಾಗಿ ಹೇಳಿದ ಶಿವರಾಜ್ ಕುಮಾರ್, ತಮ್ಮ ಪಾತ್ರಕ್ಕೆ ಮೂರು-ನಾಲ್ಕು ಆಯಾಮ ಇರುತ್ತದೆಂದು ತಿಳಿಸಿದರು.

ರಾಜ್ ಕುಟುಂಬ ಬೆಂಬಲಕ್ಕೆ ನಿಂತಿರುವುದರಿಂದ ಚಿತ್ರ ನಿರ್ಮಿಸುವ ಧೈರ್ಯ ಮಾಡಿರುವುದಾಗಿ ಹೇಳಿಕೊಂಡವರು ನಿರ್ಮಾಪಕ ರವಿ ಭಾಸ್ಕರ್. ಸಂದರ್ಭಕ್ಕೆ ತಕ್ಕಂತೆ ಎಂ.ಎಸ್.ರಮೇಶ್ ಪಂಚಿಂಗ್ ಸಂಭಾಷಣೆ ಬರೆದಿದ್ದಾರೆ ಎಂದ ನಿರ್ದೇಶಕರು, ‘ಭಯೋತ್ಪಾದನೆ ಅಂಶ ಎಂದಾಕ್ಷಣ ರಕ್ತಪಾತವನ್ನು ನಿರೀಕ್ಷಿಸಬೇಕಿಲ್ಲ. ಜನರ ನೋವುಗಳನ್ನು ಭಾವನೆಗಳ ಮೂಲಕ ತೋರಿಸುವ ಪ್ರಯತ್ನ ಇಲ್ಲಿದೆ’ ಎಂದು ಮಾತು ಮುಗಿಸಿದರು.

ಪತ್ರಿಕಾಗೋಷ್ಠಿಗೆ ಬಾರದ ನಾಯಕಿ ಪ್ರಿಯಾಮಣಿ ನಂತರ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದರು.  ಪ್ರೊಮೊ ಗೆಟಪ್ ತೋರಿಸಲು ಬಂದ ಶಿವರಾಜ್ ಶಾಕ್ ಕೊಟ್ಟರು. ಭಾವಚಿತ್ರದಲ್ಲಿ ‘ಕ್ರಿಶ್’ ಚಿತ್ರದಂಥ ಮುಖವಾಡ ತೊಟ್ಟಿದ್ದ ಶಿವರಾಜ್; ಎದುರಲ್ಲಿ ಕಪ್ಪು ನಿಲುವಂಗಿ ತೊಟ್ಟ ಶಿವರಾಜ್! 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.