ADVERTISEMENT

ರ‍್ಯಾಂಕ್ ರಾಜು ಮತ್ತು ನರೇಶ್ ನೆನಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2015, 16:14 IST
Last Updated 17 ಜುಲೈ 2015, 16:14 IST

*ಚಿತ್ರರಂಗಕ್ಕೆ ಬಂದಿದ್ದು ಯಾವಾಗ? ಎಲ್ಲೆಲ್ಲಿ ಕೆಲಸ ಮಾಡಿದ್ದೀರಿ?
ಕನ್ನದ ಚಿತ್ರೋದ್ಯಮಕ್ಕೆ ಏಳು ವರ್ಷಗಳ ಹಿಂದೆ ಕಾಲಿಟ್ಟೆ. ರಮೇಶ್ ಅರವಿಂದ್, ಪಿ.ಎಚ್. ವಿಶ್ವನಾಥ ಅಂಥವರ ಜತೆ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಅದಕ್ಕೂ ಮುನ್ನ ಡಿಪ್ಲೊಮಾ ಇನ್ ಫಿಲ್ಮ್‌ ಡೈರೆಕ್ಟರ್‌ ಕೋರ್ಸ್ ಮಾಡಿದ್ದೆ. ಅದು ಮುಗಿಯುತ್ತಲೇ ‘ಸೈಬರ್ ಯುಗದೊಳ್ ಮಧುರ ಪ್ರೇಮ ಕಾವ್ಯಂ’ ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಈಗ ಸ್ವತಂತ್ರ ನಿರ್ದೇಶನ ಮಾಡುವ ಹಂಬಲದ ಫಲ ‘ಫಸ್ಟ್ ರ್‍ಯಾಂಕ್ ರಾಜು’.

* ‘...ರ‍್ಯಾಂಕ್ ರಾಜು’ ಟ್ರೇಲರ್‌ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈ ಕಥೆಗೆ ಸ್ಫೂರ್ತಿ ಏನು?
ನನ್ನ ಸುತ್ತಲೂ ನಡೆದ ಘಟನೆಗಳೇ! ನಾನು ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕಂಪೆನಿಯೊಂದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಈ ಥರದ ಸಾಕಷ್ಟು ಜನರನ್ನು ನೋಡುತ್ತಿದ್ದೆ. ಎಷ್ಟೋ ವಿದ್ಯಾವಂತರಿಗೆ ಹೊರಜಗತ್ತಿನ ಬಗ್ಗೆ ಏನೇನೂ ಗೊತ್ತಿರುವುದೇ ಇಲ್ಲವಲ್ಲ ಅಂತ ಅಚ್ಚರಿಯಾಗುತ್ತಿತ್ತು. ಇನ್ನು ರ‍್ಯಾಂಕ್‌ ಪಡೆಯುತ್ತ ಬಂದವರು ಯಾವುದೋ ಪರೀಕ್ಷೆಯಲ್ಲಿ ಒಂದೆರಡು ಮಾರ್ಕ್ಸ್‌ ಕಡಿಮೆಯಾದರೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೆ. ವಿದ್ಯಾವಂತರು ಸಣ್ಣ ನೋವು ಅಥವಾ ಹಿನ್ನಡೆ ಎದುರಾದರೆ, ಬದುಕನ್ನೇ ಅಂತ್ಯ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿ, ಸಮಾಜಕ್ಕೆ ಏನಾದರೂ ಹೇಳುವ ಆಸೆಯಿಂದ ಈ ಸಿನಿಮಾ ಮಾಡಲು ಮುಂದಾದೆ.

*ಹಾಗಾದರೆ ಈ ಸಿನಿಮಾದ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ?
‘ವಿದ್ಯೆ 100%, ಬುದ್ಧಿ 0%’ ಅಂತ ನಮ್ಮ ಚಿತ್ರದ ಶೀರ್ಷಿಕೆಯೇ ಹೇಳುತ್ತದೆ! ಬರೀ ವಿದ್ಯೆ ಇದ್ದರೆ ಸಾಲದು; ಜತೆಗೆ ಬುದ್ಧಿಯೂ ಬೇಕು ಅನ್ನುವುದನ್ನು ಈ ಸಿನಿಮಾದ ಮೂಲಕ ಹೇಳಲಿದ್ದೇನೆ. ಹಾಗೆಂದು ರ‍್ಯಾಂಕ್ ಪಡೆದವರನ್ನು ಮೂದಲಿಸುವುದು ನಮ್ಮ ಉದ್ದೇಶವಲ್ಲ. ಎಲ್ಲ ರ‍್ಯಾಂಕ್ ವಿಜೇತರೂ ಹೀಗೆಯೇ ಅಂತ ನಾವು ಹೇಳುವುದಿಲ್ಲ. ಇಲ್ಲಿ ಅದು ಒಂದು ಪಾತ್ರ ಅಷ್ಟೇ. ರ‍್ಯಾಂಕ್ ಪಡೆದು ಜೀವನದಲ್ಲಿ ಮುಂದೆ ಬಂದಿರುವವರು ತುಂಬ ಜನರಿದ್ದಾರೆ; ರ‍್ಯಾಂಕ್ ಪಡೆಯದೇ ಇರುವವರೂ ಮುಂದೆ ಬಂದಿದ್ದಾರೆ. ಇದೊಂದು ಬರೀ ಕಾಲ್ಪನಿಕ ಕಥೆ. ಒಬ್ಬ ಜಾಣ ವಿದ್ಯಾರ್ಥಿಗೆ ಬುದ್ಧಿ ಮಾತ್ರ ಕಡಿಮೆ. ಅಭ್ಯಾಸಕ್ಕೆ ಸಂಬಂಧಿಸಿದಂತೆ ಏನು ಕೇಳಿದರೂ ತಕ್ಷಣ ಉತ್ತರ ಕೊಡುತ್ತಾನೆ. ಆದರೆ ಪ್ರಪಂಚ ಜ್ಞಾನವೇ ಇರುವುದಿಲ್ಲ! ಇಂಥ ಹುಡುಗ ಹೊರಪ್ರಪಂಚದಲ್ಲಿ ಹೇಗೆ ಬದುಕುತ್ತಾನೆ? ಹೇಗೆ ಜೀವನ ನಡೆಸುತ್ತಾನೆ? ಎಂಬಿತ್ಯಾದಿ ಹಿನ್ನೆಲೆಯಲ್ಲಿ ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಮಾಡಿದ್ದೇನೆ.

*ಈಗ ಬರುತ್ತಿರುವ ಕಮರ್ಷಿಯಲ್ ಸೂತ್ರದ ಸಿನಿಮಾಗಳ ಮಧ್ಯೆ ನಿಮ್ಮ ವಿಭಿನ್ನ ಕಥೆ ಪ್ರೇಕ್ಷಕರನ್ನು ಹೇಗೆ ಸೆಳೆಯಬಲ್ಲದು?
ಹತ್ತು ಸಿನಿಮಾಗಳು ಹೀರೊಯಿಸಂ ವೈಭವೀಕರಿಸಿದಾಗ, ಆ ಅವಧಿಯಲ್ಲಿ  ಬರುವ ಇಂಥ ಸಿನಿಮಾಗಳು ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚು. ಸಾಕಷ್ಟು ಸಲ ಜನರು ಕೂಡ ಇಂಥ ಸಿನಿಮಾಗಳನ್ನು ಮೆಚ್ಚಿಸಿ, ಗೆಲ್ಲಿಸಿದ ಉದಾಹರಣೆಗಳು ಇವೆ. ಹಾಗೆಂದು ನಮ್ಮದು ಕಮರ್ಷಿಯಲ್ ಚೌಕಟ್ಟಿನಾಚೆ ಇರುವ ಚಿತ್ರವೂ ಅಲ್ಲ. ನಾಲ್ಕು ಹಾಡುಗಳಿಗೆ ಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ಅವು ಈಗಾಗಲೇ ಯೂಟ್ಯೂಬಿನಲ್ಲಿ ಹಿಟ್ ಆಗಿವೆ. ಇನ್ನು ಕ್ಯಾಮೆರಾ ಹಿಡಿದಿರುವವರು ಪ್ರವೀಣ್. ಅವರಿಗೆ ಈಗ ಬರೀ 24 ವರ್ಷ.

*ನಿಮ್ಮ ಪ್ರಕಾರ ಚಿತ್ರದಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು?
ನನ್ನ ಮಟ್ಟಿಗೆ ಕಥೆಯೇ ಮುಖ್ಯ. ಅದು ಬುನಾದಿ ಇದ್ದಂತೆ. ಕಥೆ ಗಟ್ಟಿಯಾಗಿದ್ದರೆ ಅದರ ಮೇಲೆ ತಯಾರಾಗುವ ಸಿನಿಮಾ ಗಟ್ಟಿಯಾಗಿರುತ್ತದೆ. ನಮ್ಮ ‘ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾದಲ್ಲಿ ಹೀರೊ, ಹೀರೊಯಿಸಂ ಅಂತೇನೂ ಇಲ್ಲ. ರಾಜು ಎಂಬುದೊಂದು ಪಾತ್ರ ಅಷ್ಟೇ. ನಗೆಯನ್ನು ಚಿಮ್ಮಿಸುವ ಆ ಪಾತ್ರವನ್ನು ಗುರುನಂದನ್ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.