ADVERTISEMENT

ಶಿವಣ್ಣನ ಜೊತೆ ನಟಿಸುವಾಸೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 19:30 IST
Last Updated 30 ನವೆಂಬರ್ 2017, 19:30 IST
ಅಮೃತಾ ರಾವ್
ಅಮೃತಾ ರಾವ್   

ಅಮೃತಾ ರಾವ್ ಅಭಿನಯಿಸಿರುವ ‘ಡ್ರೀಂ ಗರ್ಲ್’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಅಮೃತಾ ಅಭಿನಯಿಸಿರುವ ಮೂರನೆಯ ಚಿತ್ರ ಇದು. ‘ಮಂಡ್ಯ ಟು ಮುಂಬೈ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅಮೃತಾ ವೃತ್ತಿ ಬದುಕಿನ ಬಗ್ಗೆ ಒಂದೆರಡು ಮಾತು ಗಳನ್ನು ‘ಚಂದನವನ’ದ ಜೊತೆ ಹಂಚಿಕೊಂಡಿದ್ದಾರೆ.

ಅಮೃತಾ ಅಭಿನಯಿಸಿರುವ ‘ನನ್ ಮಗಳೇ ಹೀರೊಯಿನ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೇ ತೆರೆಕಂಡಿತ್ತು.

‘ವಿ. ನಾಗೇಂದ್ರಪ್ರಸಾದ್ ಜೊತೆ ನಾನು ಅಭಿನಯಿಸಿರುವ ‘ಗೂಗಲ್‌’ ಸಿನಿಮಾ ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಅದರಲ್ಲಿ ನಾನೊಂದು ಮುಖ್ಯ ಪಾತ್ರ ನಿಭಾಯಿಸಿದ್ದೇನೆ. ‘ಮಾಲ್ಗುಡಿ ಸ್ಟೇಷನ್’ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದೇನೆ. ಇನ್ನೂ ಒಂದು ಸಿನಿಮಾ ಕೈಯಲ್ಲಿ ಇದೆ’ ಎಂದರು ಅಮೃತಾ.

ADVERTISEMENT

ಅಂದಹಾಗೆ, ಅಮೃತಾ ಅವರು ಸಿನಿಮಾ ಕ್ಷೇತ್ರ ಪ್ರವೇಶಿಸಬೇಕು ಎಂಬ ಆಸೆಯನ್ನು ಎಂದೂ ಇಟ್ಟುಕೊಂಡಿರಲಿಲ್ಲವಂತೆ. ಸಿನಿಮಾ ಅವಕಾಶ ಸಿಕ್ಕಿದ್ದು ಒಂದರ್ಥದಲ್ಲಿ ‘ಹಾಗೇ ದಕ್ಕಿದ್ದು’ ಎನ್ನುತ್ತಾರೆ ಅವರು. ‘ನಾನು ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಒಂದು ದಿನ ಬೆಂಗಳೂರಿನ ವಿಜಯನಗರದಲ್ಲಿರುವ ದೇವಸ್ಥಾನವೊಂದಕ್ಕೆ ಪೂಜೆಗೆ ಹೋಗಿದ್ದೆ. ಆಗ ನಮಗೆ ಪರಿಚಿತರಾಗಿರುವ ಒಬ್ಬರು, ‘ಮಂಡ್ಯ ಟು ಮುಂಬೈ’ ಸಿನಿಮಾ ನಿರ್ದೇಶಕ ಜೋಸೆಫ್ ಅವರಿಗೆ ಪರಿಚಯ ಮಾಡಿಕೊಟ್ಟರು’ ಎಂದು ತಮಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ದೊರೆತ ಸಂದರ್ಭದ ನೆನಪು ಮಾಡಿಕೊಳ್ಳುತ್ತಾರೆ ಅಮೃತಾ.

‘ಜೋಸೆಫ್ ಅವರು ತಮ್ಮ ಸಿನಿಮಾಕ್ಕಾಗಿ ನೂರಾರು ಯುವತಿಯರ ಆಡಿಷನ್ ಮಾಡಿದ್ದರಂತೆ. ಹೀಗಿದ್ದರೂ, ಅವರು ಸೃಷ್ಟಿಸಿದ ಪಾತ್ರಕ್ಕೆ ಸರಿಹೊಂದುವಂತಹ ನಟಿ ಸಿಕ್ಕಿರಲಿಲ್ಲವಂತೆ. ಆದರೆ, ನನ್ನನ್ನು ನೋಡಿದ ತಕ್ಷಣ, ಆ ಪಾತ್ರಕ್ಕೆ ನಾನೇ ಸರಿ ಅಂತ ಅವರಿಗೆ ಅನ್ನಿಸಿತಂತೆ. ಇದನ್ನು ಅವರೇ ನನಗೆ ಹೇಳಿದರು. ತಮ್ಮ ಸಿನಿಮಾದಲ್ಲಿ ಅಭಿನಯಿಸಬಹುದೇ ಎಂದು ಕೇಳಿದರು. ನಾನು ಅವರ ಸ್ಟುಡಿಯೊಗೆ ಹೋಗಿ ಕಥೆ ಕೇಳಿದೆ. ಅದು ಚೆನ್ನಾಗಿದ್ದ ಕಾರಣ ಒಪ್ಪಿಕೊಂಡೆ’ ಎಂದರು.

ಅಮೃತಾ ಭರತನಾಟ್ಯ ಕಲಾವಿದೆಯೂ ಹೌದು. ‘ನಾನು ಕಲಾವಿದೆಯಾಗಿರುವ ಕಾರಣ ನನಗೆ ಬೇರೆ ಬೇರೆ ಕಲಾ ಪ್ರಕಾರಗಳಲ್ಲೂ ಆಸಕ್ತಿ ಇತ್ತು. ಸಿನಿಮಾದಲ್ಲಿ ನಟಿಸುವ ಅವಕಾಶ ಅದಾಗಿಯೇ ಬಂದಿದ್ದ ಕಾರಣ ಖುಷಿಯಿಂದ ಒಪ್ಪಿಕೊಂಡೆ. ಸಿನಿಮಾದಲ್ಲಿ ಅಭಿನಯಿಸಿದೆ. ನಾನು ಈ ರಂಗಕ್ಕೆ ಬಂದು ಎರಡು ವರ್ಷ ಕಳೆದಿವೆ. ಈವರೆಗೆ ಆರು ಸಿನಿಮಾಗಳಲ್ಲಿ ನಟಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಅಮೃತಾ ಅವರ ತಂದೆ–ತಾಯಿ ಉಡುಪಿ ಜಿಲ್ಲೆಯವರು. ಆದರೆ ಅಮೃತಾ ಹುಟ್ಟಿದ್ದು, ಓದಿದ್ದು ಬೆಂಗಳೂರಿನಲ್ಲಿ.

ಮಹಿಳಾ ಕೇಂದ್ರಿತ ಪಾತ್ರ: ತನಗೆ ಇಂಥದ್ದೇ ಪಾತ್ರ ಬೇಕು ಎಂಬ ಪಟ್ಟಿಯನ್ನು ಇವರು ಸಿದ್ಧಪಡಿಸಿಲ್ಲ. ಆದರೆ, ನಾಯಕಿಯೇ ಪ್ರಧಾನವಾಗಿರುವ ಸಿನಿಮಾದಲ್ಲಿ ನಾಯಕಿಯ ಪಾತ್ರ ನಿಭಾಯಿಸಬೇಕು ಎಂಬುದು ಅವರ ಆಸೆ. ‘ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಮಾಡುವ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯೂ ಇದೆ. ಇಂಥ ಪಾತ್ರ ನಾನು ಮಾಡಬಾರದು ಅಂತ ವರ್ಗೀಕರಣ ಮಾಡಿಟ್ಟಿಲ್ಲ. ಹೀಗಿದ್ದರೂ, ಕುಟುಂಬದ ಜೊತೆ ಸಿನಿಮಾ ವೀಕ್ಷಿಸುವವರಿಗೆ ಇಷ್ಟವಾಗುವ ಪಾತ್ರಗಳೇ ನನಗೆ ಇಷ್ಟ. ಅತಿಯಾದ ಗ್ಲಾಮರ್ ಖಂಡಿತ ಇಷ್ಟವಿಲ್ಲ’ ಎಂದು ತಮ್ಮ ಇಷ್ಟಗಳ ಬಗ್ಗೆ ಹೇಳುತ್ತಾರೆ.

‘ಗ್ಲಾಮರ್ ಪಾತ್ರಗಳು ಏಕೆ ಬೇಡ’ ಎಂದು ಪ್ರಶ್ನಿಸಿದರೆ, ‘ನನ್ನ ಅಪ್ಪ ಮತ್ತು ಅಣ್ಣ ನನ್ನ ಮೊದಲ ಸಿನಿಮಾ ನೋಡಿ, ನನ್ನ ಪಾತ್ರ ಡೀಸೆಂಟ್ ಆಗಿದೆ ಎಂದು ಒಪ್ಪಿಕೊಂಡರು. ಡೀಸೆಂಟ್ ಆಗಿದ್ದರೆ ಮಾತ್ರ ಸಿನಿಮಾ ಮಾಡಬಹುದು ಎಂದು ನನಗೆ ಮನೆಯಲ್ಲಿ ಹೇಳಿದ್ದಾರೆ. ಡೀಸೆಂಟ್ ಅಲ್ಲದ ರೀತಿಯಲ್ಲಿ ಕಾಣಿಸಿಕೊಳ್ಳಬಾರದು ಎಂದೂ ಹೇಳಿದ್ದಾರೆ. ಬೇರೆಯವರು ಕೆಟ್ಟದ್ದಾಗಿ ಮಾತನಾಡುವಂತೆ ಮಾಡಬಾರದು ಎಂದಿದ್ದಾರೆ’ ಎಂದು ನಗುತ್ತ ಹೇಳಿದರು.

ಶಿವಣ್ಣನ ಜೊತೆ: ಅಮೃತಾ ಅವರಿಗೆ ಪುನೀತ್ ರಾಜ್‌ಕುಮಾರ್‌ ಮತ್ತು ಶಿವರಾಜ್‌ ಕುಮಾರ್‌ ಅಂದರೆ ಬಹಳ ಇಷ್ಟವಂತೆ. ‘ಶಿವಣ್ಣನ ಜೊತೆ ಅಭಿನಯಿಸಬೇಕು ಎಂಬ ಆಸೆಯಿದೆ. ಶಿವಣ್ಣನ ಜೊತೆ ಹೀರೊಯಿನ್ ಆಗಿ ನಟಿಸಲು ಆಗದಿದ್ದರೆ, ಅವರ ತಂಗಿಯಾಗಿ ಆದರೂ ಅಭಿನಯಿಸಬೇಕು ಎಂಬುದು ನನ್ನಾಸೆ. ಈ ಮಾತನ್ನು ಅವರ ಬಳಿ ಹೇಳಿಯಾಗಿದೆ. ಅಂಥದ್ದೊಂದು ಅವಕಾಶ ಸಿಗಬಹುದು ಎಂಬ ಭರವಸೆ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಅಮೃತಾ. ಯೋಗರಾಜ ಭಟ್, ಎ.ಪಿ. ಅರ್ಜುನ್ ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯೂ ಇವರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.