ADVERTISEMENT

ಶಿವ, ಪಾರ್ವತಿಯ ಭೂಲೋಕದ ಪ್ರೇಮ ಕಥೆ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST
‘ಶಿವುಪಾರು’ ಚಿತ್ರ ತಂಡ
‘ಶಿವುಪಾರು’ ಚಿತ್ರ ತಂಡ   

ಶಿವ– ಪಾರ್ವತಿ ವೇದಿಕೆಗೆ ಬಂದಾಗ ಪತ್ರಕರ್ತರಿಗೆ ಅಚ್ಚರಿ ಕಾದಿತ್ತು. ಈ ಅಚ್ಚರಿ ಬಹುಕಾಲ ಉಳಿಯಲಿಲ್ಲ. ಅಮೆರಿಕ ಸುರೇಶ್‌ ತಾವು ನಿರ್ದೇಶಿಸಿರುವ ‘ಶಿವು ಪಾರು’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಶಿವ–ಪಾರ್ವತಿ ಪಾತ್ರಧಾರಿಗಳನ್ನು ಕರೆತಂದಿದ್ದರು. ಆದರೆ, ಎರಡು ಗಂಟೆಕಾಲ ಮೇಕಪ್‌ ಹಾಕಿದ್ದ ಕಲಾವಿದರು ಸುಸ್ತಾಗಿದ್ದು ಮಾತ್ರ ಸತ್ಯ.

ಮೂರು ಟೀಸರ್, ಹಾಡುಗಳು ಮತ್ತು ಒಂದು ಟ್ರೇಲರ್ ತೋರಿಸಿದ ನಂತರ ತಂಡದೊಂದಿಗೆ ಸುರೇಶ್‌ ವೇದಿಕೆಯಲ್ಲಿ ಆಸೀನರಾದರು. ಕುರ್ಚಿ ಸಿಗದೆ ಸಹನಟಿಯರು ಗಣ್ಯರ ಹಿಂಬದಿಯಲ್ಲಿ ನಿಲ್ಲುವಂತಾಯಿತು. ‘ಶಿವು ಪಾರು’ ಚಿತ್ರ ಶಿವ– ಪಾರ್ವತಿಯ ಮತ್ತೊಂದು ಅವತಾರದ ಕಥೆ ಹೇಳುತ್ತದೆ. ಎರಡು ಜನುಮದ ಕಥೆ ಚಿತ್ರದಲ್ಲಿದೆ ಎಂದು ಸುರೇಶ್‌ ವಿವರಿಸಿದರು.

ಚಿತ್ರದಲ್ಲಿರುವ ಎಲ್ಲಾ ದೃಶ್ಯಗಳನ್ನು ತೆಗೆದುಕೊಂಡು ಟ್ರೇಲರ್, ಟೀಸರ್ ಸಿದ್ಧಪಡಿಸಲಾಗಿದೆ. ಚಿತ್ರ ಗುಣಮಟ್ಟದಿಂದ ಕೂಡಿದೆ. ದೊಡ್ಡ ಪರದೆ ಮೇಲೆ ನೋಡಿದಾಗ ಖುಷಿ ನೀಡುತ್ತದೆ. ಕಿಟ್ಟಪ್ಪ ಶಿವನನ್ನು ಏತಕ್ಕೆ ಕೊಂದ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು ಎಂದರು ಸುರೇಶ್‌.

ADVERTISEMENT

ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ಸೀಸನ್ 6 ಕಾರ್ಯಕ್ರಮಕ್ಕೆ ಹೋದಾಗ ಕಥೆ ಹೊಸ ತಿರುವು ಪಡೆಯುತ್ತದೆಯಂತೆ. ಚಿತ್ರದ ಐದು ಹಾಡುಗಳ ಪೈಕಿ ಎರಡು ಜನಪದ ಗೀತೆಗಳನ್ನು ಬಳಸಲಾಗಿದೆ. ಸಿನಿಮಾ ಬಿಡುಗಡೆ ಬಳಿಕ ಕಾದಂಬರಿ ಹೊರತರುವ ಆಲೋಚನೆಯೂ ಅವರಿಗಿದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜೊತೆಗೆ ಚಿತ್ರಕ್ಕೆ ಸುರೇಶ್‌ ಅವರೇ ಬಂಡವಾಳ ಹೂಡಿದ್ದಾರೆ. ಜೂನ್ ವೇಳೆಗೆ ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ. ನಾಯಕಿ ದಿಶಾ ಪೂವಯ್ಯ ಅವರ ಗೈರುಹಾಜರಿ ಎದ್ದುಕಾಣುತ್ತಿತ್ತು. ಐಟಂ ಸಾಂಗ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಆಲಿಶಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಾ ಶೆಣೈ, ಹೊನ್ನವಳ್ಳಿ ಕೃಷ್ಣ, ರಮೇಶ್‍ ಭಟ್, ರೋಹಿಣಿ, ತರಂಗ ವಿಶ್ವ, ಭವ್ಯಾ, ರಂಜನ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.