ADVERTISEMENT

`ಶೋಲೆ 3ಡಿ' ತಡೆಗೆ ಹೈಕೋರ್ಟ್ ನಕಾರ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST
`ಶೋಲೆ 3ಡಿ' ತಡೆಗೆ ಹೈಕೋರ್ಟ್ ನಕಾರ
`ಶೋಲೆ 3ಡಿ' ತಡೆಗೆ ಹೈಕೋರ್ಟ್ ನಕಾರ   

ಎಪ್ಪತ್ತರ ದಶಕದಲ್ಲಿ ತೆರೆಕಂಡು, ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿರುವ `ಶೋಲೆ' ಚಿತ್ರದ 3ಡಿ ಆವೃತ್ತಿಗೆ ತಡೆ ನೀಡುವಂತೆ ನಿರ್ಮಾಪಕ ರಮೇಶ್ ಸಿಪ್ಪಿ ಮಾಡಿಕೊಂಡ ಮನವಿಯನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅಷ್ಟಕ್ಕೂ ಚಿತ್ರ ನಿರ್ಮಿಸುತ್ತಿರುವುದು ಬೇರಾರೂ ಅಲ್ಲ, ಸಿಪ್ಪಿ ಅವರ ಸೋದರನ ಮಗ ಸಾಶಾ.

ಗಬ್ಬರ್ ಸಿಂಗ್ ಸಂಭಾಷಣೆ, ವೀರು-ಜೈ ಜೋಡಿಯ ನಟನೆ ಇತ್ಯಾದಿ ಇಂದಿಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಷ್ಟು ಶಕ್ತವಾಗಿವೆ. ಈ ಚಿತ್ರದ ಹಕ್ಕಿನ ಮೇಲೆ ಇಬ್ಬರೂ ಸೋದರರ ನಡುವೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಲೇ ಇದೆ. ಸಾಶಾ ಅವರು ರಮೇಶ್ ಸಿಪ್ಪಿ ಸೋದರ ವಿಜಯ್ ಅವರ ಮಗ. ಇವರು ಇತ್ತೀಚೆಗಷ್ಟೇ `ಶೋಲೆ' ಚಿತ್ರದ 3ಡಿ ಆವೃತ್ತಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಚಿತ್ರದ ವಿತರಣೆಯ ಹಕ್ಕನ್ನು ಜಯಂತಿಲಾಲ್ ಗಾಡ ಪಡೆದಿದ್ದರು. ಈ ಸಂಬಂಧ ಚಿತ್ರಕ್ಕೆ ತಡೆಯಾಜ್ಞೆ ನೀಡಬೇಕೆಂದು ಸಿಪ್ಪಿ ಹೈಕೋರ್ಟ್ ಮೊರೆಹೋಗಿದ್ದರು.

ಸಿಪ್ಪಿ ಅವರ ದೂರಿನ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್.ಜೆ. ಕೊತ್ವಾಲಾ ನೇತೃತ್ವದ ಪೀಠವು `ಈ ಹಂತದಲ್ಲಿ ಶೋಲೆ 3ಡಿ ಆವೃತ್ತಿಗೆ ತಡೆಯಾಜ್ಞೆ ನೀಡುವ ಮನವಿ ಪುರಸ್ಕರಿಸುವ ಉದ್ದೇಶ ನ್ಯಾಯಾಲಯಕ್ಕೆ ಇಲ್ಲ. ಸಾಶಾ ಆರೋಪಿಸಿರುವಂತೆ ಶೋಲೆ ಚಿತ್ರದ ಮೇಲೆ ಸಿಪ್ಪಿ ಅವರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂಬ ವಾದಕ್ಕೆ ಅವರು ಮೊದಲು ಉತ್ತರಿಸಬೇಕು' ಎಂದು ನ್ಯಾಯಾಲಯ ಹೇಳಿದೆ.

`ಈ ಮೊದಲು ಶೋಲೆ ಹಕ್ಕನ್ನು ಹಲವರು ಹಲವು ಬಾರಿ ಮುರಿದಿದ್ದಾರೆ. ಆಗ ಅದನ್ನು ವಿರೋಧಿಸದವರು ಈಗೇಕೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸಾಶಾ ಪರ ವಕೀಲರು ವಾದ ಮಂಡಿಸಿದರು. ಚಿತ್ರಕ್ಕೆ ಕೆಲಸ ಮಾಡಿದ ನಿರ್ದೇಶಕರು ನಿವೃತ್ತರಾಗಿದ್ದಾರೆ ಇಲ್ಲವೇ ಮೃತಪಟ್ಟಿದ್ದಾರೆ. ಹೀಗಾಗಿ ಚಿತ್ರದ ಹಕ್ಕು ಸಿಪ್ಪಿ ಫಿಲ್ಮ್ಸ್ ಬಳಿಯೇ ಇದೆ' ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಜತೆಗೆ 2000ನೇ ಇಸವಿಯಲ್ಲಿ ಹುಟ್ಟುಹಾಕಲಾದ ಶೋಲೆ ಮಿಡಿಯಾ ಅಂಡ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಗೆ ಸಿಪ್ಪಿ ಫಿಲ್ಮ್ಸ್ ಬಳಿ ಇದ್ದ ಚಿತ್ರದ ಹಕ್ಕನ್ನು ಉಡುಗೊರೆಯಾಗಿ ವರ್ಗಾಯಿಸಲಾಗಿದೆ ಎಂದೂ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಮೂರು ತಿಂಗಳ ಹಿಂದೆಯಷ್ಟೇ ರಮೇಶ್ ಸಿಪ್ಪಿ ಅವರು ಸಿಪ್ಪಿ ಫಿಲ್ಮ್ಸ್‌ಗೆ ರಾಜೀನಾಮೆ ಸಲ್ಲಿಸಿದ್ದು, ಇದೀಗ ಯಾವುದೇ ಹಕ್ಕಿಲ್ಲದೇ ಚಿತ್ರದ 3ಡಿ ಆವೃತ್ತಿಗೆ ತಡೆ ಕೋರಿರುವುದು ವಿವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.