ADVERTISEMENT

ಸತ್ಯ ಗೀತಾನಂದ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2011, 19:30 IST
Last Updated 25 ಆಗಸ್ಟ್ 2011, 19:30 IST
ಸತ್ಯ ಗೀತಾನಂದ
ಸತ್ಯ ಗೀತಾನಂದ   

`ಇಂಥ ವಿಭಿನ್ನ ಧಾಟಿಯ ಚಿತ್ರದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ ಎನ್ನುವುದೇ ಹಾಸ್ಯಾಸ್ಪದ~ ಎಂದು ನೊಂದುಕೊಂಡರು ಸಾಹಿತಿ ಕುಂ.ವೀರಭದ್ರಪ್ಪ. `ಸತ್ಯಾನಂದ~ ಚಿತ್ರದ ಸೀಡಿಗಳನ್ನು ಬಿಡುಗಡೆ ಮಾಡಿದ ಅವರು ಮಯೂರ ಮ್ಯೂಸಿಕ್ ಕಂಪೆನಿ ಆರಂಭಕ್ಕೂ ಸಾಕ್ಷಿಯಾದರು.

`ಮಚ್ಚು, ಲಾಂಗು ಚಿತ್ರಗಳ ನಡುವೆ ಇಂಥ ಸಿನಿಮಾಗಳ ಅಗತ್ಯ ಇದೆ. ಈ ಸಾಹಸ ಮಾಡುತ್ತಿರುವ ಮದನ್ ಪಟೇಲ್‌ಗೆ ಒಳ್ಳೆಯದಾಗಲಿ. ಭೂತಕಾಲದಲ್ಲಿ ಬದುಕುತ್ತಿರುವ ಈ ಸಮಾಜದಲ್ಲಿ ಸ್ವಾಮೀಜಿಗಳ ರೂಪದ ರಾಜಕಾರಣಿಗಳು ಆಳ್ವಿಕೆ ನಡೆಸುತ್ತಿದ್ದಾರೆ. ಇಂಥ ಕಾಲದಲ್ಲಿ ಜನಪರ ಆಶಯಗಳನ್ನು ಹೊತ್ತ ಇಂಥ ಸಿನಿಮಾಗಳು ಬರಬೇಕು. ಬಸವರಾಜ ಕಟ್ಟೀಮನಿ ಮತ್ತು ನಿರಂಜನ ಅವರಂಥ ಸಾಹಿತಿಗಳು ಸ್ವಾಮೀಜಿಗಳ ವಿರುದ್ಧ ಬರೆದಿದ್ದರು. ಅವರ‌್ಯಾರೂ ಮಾನನಷ್ಟ ಮೊಕದ್ದಮೆ ಎದುರಿಸಿರಲಿಲ್ಲ. ಮದನ್ ಅಂಥ ಮೊಕದ್ದಮೆಯನ್ನು ಎದುರಿಸಿ ನಿಂತರು. ಅವರ ನಿಲುವು ಚಿತ್ರರಂಗಕ್ಕೆ ಸ್ಫೂರ್ತಿಯಾಗಲಿ~ ಎಂದು ಆಶಿಸಿದರು. 

ಕೊಳದ ಮಠದ ಶ್ರೀಶಾಂತವೀರ ಸ್ವಾಮೀಜಿ ಮಾತನಾಡಿ, `ಮೂಡನಂಬಿಕೆ ವಿರುದ್ಧ ಇಂಥ ಸಿನಿಮಾಗಳು ಬರಲಿ~ ಎನ್ನುತ್ತಾ ಮದನ್ ಹೊಗಳಿಕೆಗೇ ಮಾತು ಮೀಸಲಿಟ್ಟರು.
`ಆರಂಭದಿಂದಲೂ ಚಿತ್ರಕ್ಕೆ ಅಡೆತಡೆಗಳು ಬಂದವು. ಚಿತ್ರ ವಿವಾದಕ್ಕೆ ಸಿಲುಕಿತು. ಆದರೂ ನಾವು ಹಗಲೂ ರಾತ್ರಿ ದುಡಿದು ಚಿತ್ರ ಮುಗಿಸಿದೆವು. ನನ್ನ ಮಗ ಮಯೂರ್ ಚಿತ್ರಕ್ಕೆ ಪ್ರತಿಭಾನ್ವಿತ ನಾಯಕಿರನ್ನು ಆಯ್ಕೆ ಮಾಡಿಕೊಟ್ಟ.
 
ಇಂದಿನಿಂದ ನಾನು ಗಾಂಧೀಜಿಯವರ ಮೂರು ಕೋತಿಗಳ ಸಂದೇಶವನ್ನು ಅನುಕರಿಸಲು ನಿರ್ಧರಿಸಿರುವೆ~- ಹೀಗೆ ನುಡಿದು ಮದನ್ ಪಟೇಲ್ ತಮ್ಮ ಚಿತ್ರಕ್ಕೆ ದುಡಿದ ತಂತ್ರಜ್ಞರಿಗೆ ಫಲಕ ನೀಡಿ ಸನ್ಮಾನಿಸಿದರು.

ಹಿರಿಯ ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ ಮಾತನಾಡಿ, `ಇಂದು ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಗುಣಮಟ್ಟ ಕಡಿಮೆಯಾಗುತ್ತಿದೆ. ಅವರ ನಡುವೆ ಮದನ್ ದಿಟ್ಟ ಹೆಜ್ಜೆ ಇಟ್ಟಿರುವುದು ಸಕಾರಾತ್ಮಕವಾಗಿದೆ~ ಎಂದು ಮದನ್ ಗುಣಗಾನ ಮಾಡಿದರು.
ನಾಯಕ ರವಿ ಚೇತನ್‌ಗೆ ಈ ಚಿತ್ರ ಮೈಲುಗಲ್ಲಾಗುವ ಸಾಧ್ಯತೆ ಇದೆ ಎನಿಸಿದೆ.

`ಆರಂಭದಲ್ಲಿ ಭಯವಾಗಿತ್ತು. ಇದೀಗ ಆತಂಕ ಇಲ್ಲ. ಆದರೆ ಇಂದಿಗೂ ಜೀವ ಬೆದರಿಕೆ ಕರೆಗಳು ನಿಂತಿಲ್ಲ. ಪಾತ್ರ ಒಪ್ಪಿಕೊಂಡ ನಂತರ ಹೋಮ್‌ವರ್ಕ್ ಮಾಡಿ ಅದಕ್ಕೆ ಹೊಂದಿಕೊಂಡೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿರುವೆ. ನಟನಾಗಿ ನನಗೆ ತೃಪ್ತಿ ಸಿಕ್ಕಿದೆ.

60 ಸಿನಿಮಾ ಖಳನಾಯಕನಾಗಿ ಮತ್ತು ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ನನಗೆ ನೆಗೆಟಿವ್ ಶೇಡ್ ಇರುವ ಈ ಪಾತ್ರ ಸವಾಲು ಎನಿಸಿತು. ಸಿನಿಮಾ ನನಗೆ ಹೆಸರು ತಂದುಕೊಡಲಿದೆ ಎಂಬ ನಂಬಿಕೆ ಇದೆ.
 
ಜೀವ ಕೈಯಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದೀವಿ. ಇದರಲ್ಲಿ ಅಶ್ಲೀಲತೆ ಇಲ್ಲ. ನಾನು ನಿತ್ಯಾನಂದ ಅವರನ್ನು ಹೋಲುವ ಏಳು ಜನರಲ್ಲಿ ಒಬ್ಬನಿರಬಹುದು ಅಲ್ಲವೇ?~ ಎಂದು ಪ್ರಶ್ನೆ ಮಾಡುತ್ತಾ ನಕ್ಕರು.

ಇಟಲಿ ನಟಿ ಅನುಕಿ ತಮ್ಮ ಅನುಭವ ಹಂಚಿಕೊಂಡರು. ಮತ್ತೊಬ್ಬ ನಾಯಕಿ ನೇಹಾ ಚಿತ್ರೀಕರಣ ನಡೆದಷ್ಟು ದಿನ ತಮ್ಮ ಮನೆಯಲ್ಲಿದ್ದಂಥ ಅನುಭವ ಸಿಕ್ಕಿತು ಎಂದು ತಂಡದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಮಯೂರ್, ಸಂಗೀತದ ಮನೆತನದಲ್ಲಿ ಹುಟ್ಟಿ ಸಂಗೀತ ಕ್ಷೇತ್ರಕ್ಕೆ ತಮ್ಮ ಕೊಡುಗೆಯಾಗಿ ಮ್ಯೂಸಿಕ್ ಕಂಪೆನಿ ನೀಡುತ್ತಿರುವುದಾಗಿ ಹೇಳಿ ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.