ADVERTISEMENT

ಸಪ್ತ ತಂತ್ರಜ್ಞಾನದ ಟೀವಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಸುಧಾರಿತ (ಎಡ್ವಾನ್ಸಡ್) ಟೀವಿ ಆಪರೇಟಿಂಗ್ ವ್ಯವಸ್ಥೆ ಮುಂಬೈನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿದೆ. `ಡಿಡಿಬಿ~ ಫೌಂಡೇಷನ್ 7 ತಾಂತ್ರಿಕ ಸಂಸ್ಥೆಗಳ ನೆರವಿನೊಂದಿಗೆ `ಡಿಜಿಟಲ್ ಡೈರೆಕ್ಟ್ ಬ್ರಾಡ್‌ಕಾಸ್ಟ್~ ತಂತ್ರಜ್ಞಾನವನ್ನು ರೂಪಿಸಿದೆ. ಈ ತಂತ್ರಜ್ಞಾನದ ಮೂಲಕ ಒಂದೇ ಟೀವಿಯಲ್ಲಿ ಬಹು ಬಗೆಯ ತಾಂತ್ರಿಕ ಅವಕಾಶಗಳನ್ನು ಬಳಸಿಕೊಳ್ಳಬಹುದು.

ಎಸ್‌ಟಿ ಮೈಕ್ರೊಎಲೆಕ್ಟ್ರಾನಿಕ್ಸ್, ಇರ್ಡೆಟೊ, ನಿವಿಯೊ, ಫರೋದ್ಜಾ, ಸ್ಟ್ರಾಟ, ವಿಡಿಯೊಕಾನ್ ಡಿಟಿಎಚ್, ಫಿಲಿಪ್ಸ್ 7 ಕಂಪೆನಿಗಳು ಈ ತಂತ್ರಜ್ಞಾನವನ್ನು ರೂಪಿಸಿವೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಡಿಡಿಬಿ ಸಂಶೋಧನಾ ಫೌಂಡೇಷನ್ ಘೋಷಿಸಿದೆ.

ಡಿಡಿಬಿ ತಂತ್ರಜ್ಞಾನದ ಟೀವಿಯನ್ನು ಬಿಡುಗಡೆ ಮಾಡಿ ಮಾತನಾಡಿದ ನಟಿ ಚೋಪ್ರಾ, ಗೃಹ ಮನರಂಜನೆಯ ನೂತನ ಕಲ್ಪನೆಯನ್ನು ಈ ತಂತ್ರಜ್ಞಾನದ ಮೂಲಕ ವಿಸ್ತೃತವಾಗಿ ಕಂಡುಕೊಳ್ಳಬಹುದು. ಈ ಟೀವಿ ಕೇವಲ ಮನರಂಜನೆಯನ್ನಷ್ಟೇ ನೀಡದೆ 3ಡಿ, ಡೈರೆಕ್ಟ್ ಡಿಜಿಟಲ್ ಟೀವಿ, ಇಂಟರ್ನೆಟ್ ಸಂಪರ್ಕ, ಮೋಡದ ಲೆಕ್ಕಾಚಾರವನ್ನೂ ನೀಡುತ್ತದೆ. ಇವೆಲ್ಲವೂ ಒಂದೇ ವೇದಿಕೆಯಲ್ಲಿ. ಉತ್ತಮ ಗುಣಮಟ್ಟದ ದೃಶ್ಯ ಹಾಗೂ ಶ್ರವಣ ಅನುಭವ ಇದರಲ್ಲಿ ಸಿಗಲಿದೆ ಎಂದರು.

ಡಿಡಿಬಿ ತಂತ್ರಜ್ಞಾನ ಹೊಂದಿರುವ ಟೀವಿಗೆ ಸೆಟ್ ಟಾಪ್ ಬಾಕ್ಸ್‌ನ ಅಗತ್ಯವೇ ಇಲ್ಲ. ಅಂತರ್ಜಾಲದ ಮೂಲಕವೂ ಇದರಲ್ಲಿ ಕೆಲಸ ಮಾಡಬಹುದು. 2 ಡಿ ಚಾನೆಲ್‌ಗಳನ್ನು 3 ಡಿ ಗುಣಮಟ್ಟಕ್ಕೂ ಬದಲಾಯಿಸಬಹುದು. ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್ ಸಂಪರ್ಕಗಳೂ ಇದರಲ್ಲಿ ಲಭ್ಯ.

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಆಂಡ್ರಾಯ್ಡ ಸಾಫ್ಟ್‌ವೇರ್ ಮಾಡಿರುವ ಕೌತುಕಗಳನ್ನು ಡಿಡಿಬಿ ತಂತ್ರಜ್ಞಾನ ಮಾಡುತ್ತದೆ. ಅನೇಕ ಕಂಪೆನಿಗಳು ಡಿಡಿಬಿ ತಂತ್ರಜ್ಞಾನ ಹೊಂದಿರುವ ಸಾಧನಗಳ ಬಿಡುಗಡೆಗೆ ಆಸಕ್ತಿ ತೋರುತ್ತಿವೆ. 2015ರ ವೇಳೆಗೆ ಶೇ 50ರಷ್ಟು ಟೀವಿಗಳು ಇದೇ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸಲಿವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲ ಮೊಬೈಲ್ ಫೋನ್‌ಗಳು ಕ್ಯಾಮೆರಾ, ಆಲ್ಬಂ, ಕ್ಯಾಲೆಂಡರ್‌ಗಳನ್ನು ಹೊಂದಿವೆ. ಅದೇ ಸಾಲಿಗೆ ಈ ಟೀವಿಯೂ ಸೇರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಇದು ಒಂದು ಕ್ರಾಂತಿಕಾರಕ ಹೆಜ್ಜೆ ಎಂದು ಪ್ರಿಯಾಂಕ ಚೋಪ್ರಾ ಶ್ಲಾಘಿಸಿದರು.

ಈ ತಂತ್ರಜ್ಞಾನ ಹೊಂದಿರುವ ಟೀವಿ ಡ್ಯುಯಲ್ ಕೋರ್ ಪ್ರೊಸೆಸರ್, 14 ಬಿಟ್ ವಿಡಿಯೊ ಪ್ರೊಸೆಸರ್, ಎಂಇಎಂಸಿ, 3ಡಿ ತಂತ್ರಜ್ಞಾನಗಳನ್ನು ಹೊಂದಿರುವುದರಿಂದ ದೃಶ್ಯಗಳು ಉತ್ತಮವಾಗಿ ಕಾಣುತ್ತವೆ ಎಂದು ಕಂಪೆನಿ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.