ADVERTISEMENT

`ಸಲ್ಮಾನ್ ಎಂದರೆ ಮೋಹ'

ಪವಿತ್ರ ಶೆಟ್ಟಿ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST
`ಸಲ್ಮಾನ್ ಎಂದರೆ ಮೋಹ'
`ಸಲ್ಮಾನ್ ಎಂದರೆ ಮೋಹ'   

ಮುಂಬೈ ಮೂಲದ ಶಾರ್ಲೆಟ್ ಕ್ಲೇರ್ ರೂಪದರ್ಶಿ, ನಟಿ ಜತೆಗೆ ಒಳ್ಳೆಯ ನೃತ್ಯಗಾರ್ತಿ ಕೂಡ. ನಟ ಸಲ್ಮಾನ್ ಖಾನ್ ಎಂದರೆ ಇಷ್ಟಪಡುವ ಈಕೆ ಅವರೊಂದಿಗೆ ನಟಿಸುವ ಕನಸು ಕಟ್ಟಿಕೊಂಡಿದ್ದಾರೆ.

ಕುಟುಂಬ ಮತ್ತು ಓದಿನ ಬಗ್ಗೆ ಹೇಳಿ?
ನನ್ನೂರು ಮುಂಬೈ. ಶಾಲೆ ಎಂದಾಕ್ಷಣ ನನಗೆ ಬಾಲ್ಯ ನೆನಪಿಗೆ ಬರುತ್ತದೆ. ತುಂಟಾಟದ ಆ ಕ್ಷಣಗಳು ಮನಸ್ಸಿನ ಪುಟದಲ್ಲಿ ಆಗಾಗ ಕಚಗುಳಿ ಇಡುತ್ತಲೇ ಇರುತ್ತವೆ.

ಮಾಡೆಲಿಂಗ್ ಕ್ಷೇತ್ರ ನಿಮಗೆ ಇಷ್ಟವಾಗಿದ್ದು ಯಾಕೆ? ಹಣಕ್ಕಾಗಿಯೋ, ಗ್ಲಾಮರ್‌ಗಾಗಿಯೋ?
ಕಷ್ಟಪಟ್ಟು ದುಡಿದರೆ ಹಣ ಬಂದೇ ಬರುತ್ತದೆ. ಅದಕ್ಕೆ ಮಾಡೆಲಿಂಗ್ ಕ್ಷೇತ್ರವೇ ಆಗಬೇಕೆಂದೇನಿಲ್ಲ. ರೂಪದರ್ಶಿಯಾಗಬೇಕು, ಊರೂರು ಸುತ್ತಬೇಕು ಎಂಬುದು ಬಾಲ್ಯದಿಂದಲೂ ಇದ್ದ ಕನಸು.

ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು?
ಮಾಡುವ ಕೆಲಸದ ಮೇಲೆ ನನಗೆ ಪ್ರೀತಿ ಇತ್ತು. ಜತೆಗೆ ಮನೆಯವರ ಬೆಂಬಲವಿತ್ತು. ಮನೆಯವರ ಪ್ರೋತ್ಸಾಹ ನನ್ನ ಯಶಸ್ಟಿನ ಗುಟ್ಟು.

ಮೊದಲು ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟಿದ್ದು ಯಾವಾಗ?
ಯಾವ ಬ್ರಾಂಡ್‌ನ ಶೋನಲ್ಲಿ ಭಾಗವಹಿಸಿದೆ ಎಂದು ಸರಿಯಾಗಿ ನೆನಪಿಲ್ಲ. ಆದರೆ ಮೊದಲ ದಿನದ ಶೋ ಕಚಗುಳಿ ಇಟ್ಟ ಅನುಭವ ನೀಡಿತ್ತು. ಖುಷಿ, ಭಯ ಎರಡೂ ಇದ್ದ ಕ್ಷಣವದು. ಈಗಲೂ ಆ ಕ್ಷಣ ನೆನಪು ಮನದಲ್ಲಿ ಸದಾ ಹಸಿರು.

ನಿಮಗೆ ಖುಷಿಕೊಟ್ಟ ನಿಮ್ಮ ಸಾಧನೆ ಯಾವುದು?
`ಗ್ಲ್ಯಾಡರ‌್ಯಾಗ್ಸ್ ಮೆಗಾ ಮಾಡೆಲ್ 2013' ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದು ನನ್ನ ಸಾಧನೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ನಿಮಗೆ ಇಷ್ಟವಾಗುವ ರೂಪದರ್ಶಿಗಳು ಯಾರು?
ನಾನು ಎಲ್ಲರ ಜತೆಗೂ ಫ್ರೆಂಡ್ಲಿ ಆಗಿರುತ್ತೇನೆ. ಹಾಗಾಗಿ ನನಗೆ ಎಲ್ಲರೂ ಇಷ್ಟವಾಗುತ್ತಾರೆ. ಯಾರನ್ನೂ ಹೋಲಿಕೆ ಮಾಡುವುದಕ್ಕೆ ಹೋಗುವುದಿಲ್ಲ.

ಬೇರೆ ದೇಶದ ರೂಪದರ್ಶಿಯರಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಂಭಾವನೆ ಕಡಿಮೆ. ಇದು ನಿಜವೇ?
ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ. ಹೋಲಿಕೆ ಮಾಡಿಕೊಂಡು ಬೇಸರ ಪಡುವುದಕ್ಕಿಂತ ಇರುವುದರಲ್ಲಿಯೇ ಖುಷಿಯಾಗಿರುವುದು ಒಳ್ಳೆಯದು.

ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿ? ಯಾವ ರೀತಿಯ ಸಂಗೀತವನ್ನು ಮೆಚ್ಚುತ್ತೀರಿ?
ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಜತೆಯೂ ಬೆರೆಯುತ್ತೇನೆ. ಹಿಂದಿ, ಇಂಗ್ಲಿಷ್ ಪಾಪ್ ಸಂಗೀತ ಇಷ್ಟವಾಗುತ್ತದೆ.

ನಿಮ್ಮ ಫಿಟ್‌ನೆಸ್ ಮತ್ತು ಸೌಂದರ್ಯದ ಗುಟ್ಟೇನು?
ಪ್ರತಿದಿನ ವರ್ಕ್‌ಔಟ್ ಮಾಡುತ್ತೇನೆ. ಚೆನ್ನಾಗಿ ನೀರು ಕುಡಿಯುತ್ತೇನೆ. ಎಂಟು ಗಂಟೆ ನಿದ್ದೆ ಮಾಡುತ್ತೇನೆ. ಇದೇ ನನ್ನ ಸೌಂದರ್ಯದ ಗುಟ್ಟು.

ನಿಮ್ಮಿಷ್ಟದ ಆಹಾರ ಯಾವುದು?
ಗ್ರಿಲ್ಡ್ ಫಿಶ್ ತುಂಬಾ ಇಷ್ಟ.

ನಿಮ್ಮ ಪ್ರಕಾರ ಶಿಕ್ಷಣ ಹೆಣ್ಣುಮಕ್ಕಳಿಗೆ ಎಷ್ಟು ಅವಶ್ಯಕ?
ಶಿಕ್ಷಣ ಎಲ್ಲರಿಗೂ ತುಂಬಾ ಮಹತ್ವವಾದದ್ದು. ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯ ಹೆಚ್ಚು. ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ.

ಉದ್ಯಾನನಗರಿಯ ಬಗ್ಗೆ ನಿಮ್ಮ ಅಭಿಪ್ರಾಯ?
ಇಲ್ಲಿಯ ವಾತಾವರಣ ಚೆನ್ನಾಗಿದೆ. ಜನ ತುಂಬಾ ಒಳ್ಳೆಯವರು. ಈ ನಗರ ನನಗೆ ತುಂಬಾ ಹಿಡಿಸಿದೆ.

ನಿಮ್ಮ ಮೊದಲ ಹಿಂದಿ ಚಿತ್ರ `ಜೈ ಹಿಂದ್'ನ ಅನುಭವಗಳೇನು?
ಆ ಪಾತ್ರ ತುಂಬಾ ಚೆನ್ನಾಗಿತ್ತು. ಹಲವು ಆಯಾಮಗಳನ್ನು ತನ್ನೊಳಗೆ ಇಟ್ಟುಕೊಂಡಿದ್ದ ಪಾತ್ರವದು. ಆ ಚಿತ್ರದ ವಸ್ತುವೂ ಪ್ರಸ್ತುತವಾಗಿದ್ದು, ನಟಿಯಾಗಿ ಆ ಪಾತ್ರ ನಿಭಾಯಿಸುವುದು ಸವಾಲಾಗಿತ್ತು. ಈ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ತುಂಬಾ ಖುಷಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.