ADVERTISEMENT

ಸಾರ್ವಜನಿಕರಿಗೂ ಸಿನಿಮಾ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ಡಿಸೆಂಬರ್ 20ರಿಂದ ಪ್ರಾರಂಭವಾಗಲಿರುವ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಪರೂಪದ ಹಾಗೂ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶ ಈ ಬಾರಿ ಪ್ರತಿನಿಧಿ ಪಾಸ್ ತೆಗೆದುಕೊಂಡವರಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಲಭ್ಯವಾಗಲಿದೆ.

ಉದ್ಘಾಟನಾ ಸಮಾರಂಭದ ಮರುದಿನ ಅಂದರೆ, ಡಿ.21ರಿಂದ ಚಿತ್ರೋತ್ಸವ ಮುಕ್ತಾಯವಾಗುವ ಡಿ. 27ರವರೆಗೂ ದಿನಕ್ಕೆ ಒಂದು ಸಿನಿಮಾವನ್ನು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದೆ.

ಯಾವುದೇ ಪಾಸ್ ಅಥವಾ ಗುರುತು ಚೀಟಿಯ ಅಗತ್ಯವಿಲ್ಲದೆ ಇಲ್ಲಿ ಜನರು ಮುಕ್ತವಾಗಿ ಸಿನಿಮಾ ವೀಕ್ಷಿಸಬಹುದು. ಚಿತ್ರೋತ್ಸವಗಳು ಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರನ್ನೂ ಚಿತ್ರೋತ್ಸವಗಳಲ್ಲಿ ಒಳಗೊಳ್ಳುವ ಈ ಬಗೆಯ ಇತ್ತೀಚಿನ ಜನಪ್ರಿಯ ಮಾದರಿಯನ್ನು ಚಿತ್ರೋತ್ಸವ ಸಮಿತಿ ಅಳವಡಿಸಿಕೊಂಡಿದೆ.

ಡಾ. ರಾಜ್‌ಕುಮಾರ್ ಅಭಿನಯದ `ಬಂಗಾರದ ಮನುಷ್ಯ' ಪ್ರಾರಂಭದ ಚಿತ್ರವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರದರ್ಶನಗೊಳ್ಳಲಿದೆ. `ಬಂಗಾರದ ಮನುಷ್ಯ' ಬಿಡುಗಡೆಯಾಗಿ 40 ವರ್ಷಗಳು ಪೂರೈಸಿದ ಕಾರಣ ಹಾಗೂ ಅದು ಬೀರಿದ ಸಾಮಾಜಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಚಿತ್ರ ಪ್ರದರ್ಶನಕ್ಕಾಗಿ ಬೃಹತ್ ಪರದೆಯನ್ನು ಅಳವಡಿಸಲಾಗಿದೆ. ಜನರಿಗೆ ಉಚಿತ ಪ್ರವೇಶವಿದೆ. ಆದರೆ ಆಸನದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ.

ಜನರದ್ದೇ ಆಯ್ಕೆ: `ಬಂಗಾರದ ಮನುಷ್ಯ' ಚಿತ್ರವನ್ನು ಹೊರತುಪಡಿಸಿ ಉಳಿದ ಆರು ಚಿತ್ರಗಳನ್ನು ವೀಕ್ಷಣೆಗೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಾರ್ವಜನಿಕರಿಗೇ ನೀಡಲಾಗಿದೆ. ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಲಿರುವ ಚಿತ್ರಗಳ ಪಟ್ಟಿಯನ್ನು ಚಿತ್ರೋತ್ಸವ ಸಮಿತಿ ತಾನೇ ಅಂತಿಮಗೊಳಿಸದೆ ಅದನ್ನು ಜನರ ಆಯ್ಕೆಗೆ ಬಿಟ್ಟುಕೊಡಲಿದೆ. ಸುಮಾರು 20 ಆಯ್ದ ಚಿತ್ರಗಳ ಪಟ್ಟಿಯನ್ನು ಶೀಘ್ರವೇ ಚಿತ್ರೋತ್ಸವದ ವೆಬ್‌ಸೈಟ್ ಡಿಡಿಡಿ.ಚಿಜ್ಛ್ಛಿಛಿ.ಜ್ಞಿ ನಲ್ಲಿ ಪ್ರಕಟಿಸಲಿದ್ದು, ಅದರಲ್ಲಿ ಜನರು ಹೆಚ್ಚು ಒಲವು ತೋರುವ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.