ADVERTISEMENT

ಸಿನಿಮಾದಲ್ಲಿ ರಾಜಕೀಯ ಬೆರೆಸಬಾರದು...

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:30 IST
Last Updated 21 ಏಪ್ರಿಲ್ 2011, 19:30 IST
ಸಿನಿಮಾದಲ್ಲಿ ರಾಜಕೀಯ ಬೆರೆಸಬಾರದು...
ಸಿನಿಮಾದಲ್ಲಿ ರಾಜಕೀಯ ಬೆರೆಸಬಾರದು...   

ನಾಯಕ ನಟ ಜಗ್ಗೇಶ್ ನಿರ್ಮಾಪಕರ ಸಂಘದ ಅಧ್ಯಕ್ಷರಾಗುತ್ತಾರಾ? ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿರುವ ಈ ಪ್ರಶ್ನೆಯನ್ನು ನೇರವಾಗಿ ಜಗ್ಗೇಶ್ ಅವರಿಗೇ ಕೇಳಿದಾಗ ಅವರು ಸ್ಪಷ್ಟವಾಗಿ ಹೇಳಿದ್ದು-

‘ನನ್ನ ಅಗತ್ಯ ಇದೆಯೆಂದು ನಿರ್ಮಾಪಕರ ಸಂಘಕ್ಕೆ ಅನ್ನಿಸಿದರೆ ಅಧ್ಯಕ್ಷನಾಗಲು ನನ್ನದೇನೂ ಅಭ್ಯಂತರವಿಲ್ಲ’.
ಜಗ್ಗೇಶ್‌ರ ಅರೆಮನಸಿನ ಮಾತಿನ ಹಿಂದೊಂದು ಸೂಕ್ಷ್ಮವಿದೆ. ಅದೆಂದರೆ- ಅವರು ನಿರ್ಮಾಪಕರ ಸಂಘದ ಸದಸ್ಯರಲ್ಲ, ಸದಸ್ಯರಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಹಾಗೆಂದು ಸಂಘದ ಸಂವಿಧಾನ ಹೇಳುತ್ತದಂತೆ. ಈ ತಾಂತ್ರಿಕ ತೊಡಕಿನ ಕಾರಣದಿಂದಾಗಿಯೇ ಜಗ್ಗೇಶ್ ತಮ್ಮ ಆಯ್ಕೆಯನ್ನು ಸಂಘದ ಸದಸ್ಯರ ಮರ್ಜಿಗೇ ಬಿಡುವ ಮರ್ಜಿಯ ಮಾತನಾಡುತ್ತಿದ್ದಾರೆ.

ತಾವು ನಿರ್ಮಾಪಕರ ಸಂಘದ ಅಧ್ಯಕ್ಷರಾಗುವುದೋ ಬಿಡುವುದೋ ಬೇರೆಯ ಮಾತು. ಆದರೆ, ಜಗ್ಗೇಶ್ ಅಧ್ಯಕ್ಷರಾಗುವುದರಿಂದ ಸಂಘದಲ್ಲಿ ಪಕ್ಷ ರಾಜಕಾರಣಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಕೆಲವರು ಮಾತನಾಡುತ್ತಿದ್ದಾರಂತೆ. ಇಂಥ ಮಾತು - ಸುದ್ದಿಗಳ ಬಗ್ಗೆ ಜಗ್ಗೇಶರಿಗೆ ಬೇಜಾರಿದೆ.

‘ಸಿನಿಮಾದಲ್ಲಿ ಜಾತಿ ಇಲ್ಲ, ರಾಜಕೀಯವೂ ಇಲ್ಲ.ಕಲಾವಿದನಾದ ನಾನು ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಬೆರೆಸುತ್ತೇನೆ ಎನ್ನುವುದೇ ಸರಿಯಲ್ಲ’ ಎನ್ನುತ್ತಾರೆ ಜಗ್ಗೇಶ್.
ಅವರ ಮಾತು ಮುಂದುವರಿಯುತ್ತದೆ-
‘ಸಿನಿಮಾರಂಗಕ್ಕೆ ತನ್ನದೇ ಆದ ಘನತೆಯಿದೆ. ಜನತೆಯ ಮನಸ್ಸಿಗೆ ಸಂತೋಷ ಕೊಡುವ ಕ್ಷೇತ್ರವಿದು. ದೇಶ ಸ್ವತಂತ್ರಗೊಳ್ಳುವುದಕ್ಕೆ ಮೊದಲೇ ಇಲ್ಲಿ ಸಿನಿಮಾ ಇತ್ತು. ಈ ರಂಗದಲ್ಲಿ ರಾಜಕುಮಾರರಂಥ ಮೇರು ವ್ಯಕ್ತಿತ್ವದವರೂ ಇದ್ದರು. ಅವರೆಲ್ಲ ಈ ಕ್ಷೇತ್ರವನ್ನು ಸ್ವಚ್ಛವಾಗಿ ಉಳಿಸಿಕೊಂಡಿದ್ದರು. ಜನರಂಜನೆಯ ಈ ಮಾಧ್ಯಮದಲ್ಲಿ ರಾಜಕೀಯ ಇರಬಾರದು, ಬೆರೆಸಬಾರದು. ಇದು ನನ್ನಾಸೆ ಕೂಡ’.

ಸದ್ಯಕ್ಕೆ, ನಿರ್ಮಾಪಕರ ಸಂಘದ ಅಧ್ಯಕ್ಷಸ್ಥಾನಕ್ಕಿಂತಲೂ ಜಗ್ಗೇಶರನ್ನು ಹೆಚ್ಚು ಕಾಡುತ್ತಿರುವುದು ‘ಡಬ್ಬಲ್ ಡೆಕ್ಕರ್’ ಸಿನಿಮಾ. ಅವರು ನಿರ್ಮಿಸಿ, ನಟಿಸಿರುವ ಈ ಚಿತ್ರ ಇಂದು ತೆರೆಕಾಣುತ್ತಿದೆ. ಮನರಂಜನೆಯನ್ನೇ ಧ್ಯೇಯವಾಗಿಸಿಕೊಂಡಿರುವ ಈ ಚಿತ್ರದಲ್ಲಿ ಜಗ್ಗೇಶರ ಎಲ್ಲ ವರಸೆಗಳೂ ಇವೆಯಂತೆ. ಬಹಳ ದಿನಗಳ ನಂತರ ಬಿಡುಗಡೆಯಾಗುತ್ತಿರುವ ತಮ್ಮ ಅಭಿನಯದ ‘ಡಬ್ಬಲ್ ಡೆಕ್ಕರ್’ ಪ್ರೇಕ್ಷಕರಿಗೆ ಇಷ್ಟವಾಗುವ ನಿರೀಕ್ಷೆ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.