ADVERTISEMENT

ಸಿಹಿಕಹಿ ಭೋಜನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

`ಅಡುಗೆ ಮಾಡುತ್ತಾ, ಅದರ ಬಗ್ಗೆ ವಿವರಣೆ ನೀಡುತ್ತಾ, ಮಾಡಿದ ಅಡುಗೆ ರುಚಿ ನೋಡುತ್ತಾ ಕನ್ನಡದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಏಕೈಕ ವ್ಯಕ್ತಿ ನಾನೇ~ ಎಂದರು ಸಿಹಿಕಹಿ ಚಂದ್ರು. ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ.
 
ಸುವರ್ಣ ವಾಹಿನಿಯಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿರುವ `ಬೊಂಬಾಟ್ ಭೋಜನ~ ಕಾರ್ಯಕ್ರಮ 500 ಕಂತು ದಾಟಿದ ಸಂದರ್ಭದಲ್ಲಿ ತಮ್ಮ `ಬೊಂಬಾಟ್ ಭೋಜನ~ ಪುಸ್ತಕದ 3ನೇ ಭಾಗ ಬಿಡುಗಡೆ ಮಾಡಲು ಕಾರ್ಯಕ್ರಮ ಆಯೋಜಿಸಿದ್ದರು ಚಂದ್ರು. ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿರುವ ತಮ್ಮ ಕಾರ್ಯಕ್ರಮ ಮತ್ತು ಅದಕ್ಕೆ ಸಿಗುತ್ತಿರುವ ಅಪಾರ ಮೆಚ್ಚುಗೆಯನ್ನು  ವಿವರಿಸಿ ಪುಸ್ತಕ ಬಿಡುಗಡೆ ಮಾಡಿದರು.

ಮಂಗರಸನ `ಸೂಪಶಾಸ್ತ್ರ~ ಆರು ಸಂಪುಟದಲ್ಲಿ ಮುದ್ರಣವಾಗಿರುವಂತೆ ತಮ್ಮ ಬೊಂಬಾಟ್ ಭೋಜನ ಪುಸ್ತಕಗಳ ಸರಣಿಯನ್ನು ಆರು ಸಂಪುಟದಲ್ಲಿ ಹೊರತರುವಾಸೆಯನ್ನು ವ್ಯಕ್ತಪಡಿಸಿದ ಅವರು, 15 ವರ್ಷಗಳ ಹಿಂದೆ ಉದಯಟೀವಿಗೆ `ನಳಪಾಕ~ ಮತ್ತು `ರಸಪಾಕ~ ಕಾರ್ಯಕ್ರಮಗಳನ್ನು ಮಾಡಿದ್ದನ್ನು ನೆನಪಿಸಿಕೊಂಡರು.

ಅಡುಗೆ ಕಾರ್ಯಕ್ರಮ ಹೊರತುಪಡಿಸಿ ನಟನಾಗಿಯೇ ತಮ್ಮನ್ನು ಜನ ಗುರುತಿಸಿಬೇಕು ಎಂದು ಹೇಳಿಕೊಳ್ಳುವ ಚಂದ್ರು, ಮಾಂಸಾಹಾರ ಯಾಕೆ ಮಾಡುವುದಿಲ್ಲ? ಎಂಬ ಆಕ್ಷೇಪವನ್ನೂ ಎದುರಿಸಿದ್ದಾರೆ.
 
`ನಾನು ಮೂಲತಃ ಸಸ್ಯಾಹಾರಿ. ಈ ವಯಸ್ಸಿನಲ್ಲಿ ಮಾಂಸಾಹಾರ ಕಲಿತು ರುಚಿ ನೋಡಲು ಸಾಧ್ಯವಿಲ್ಲ. ಅದರಲ್ಲೂ ಇಂದು ಸಾಕಷ್ಟು ಮಾಂಸಾಹಾರಿಗಳೇ ಸಸ್ಯಾಹಾರಿಗಳಾಗಿ ಬದಲಾಗುತ್ತಿದ್ದಾರೆ. ಅದರಿಂದ ನಾನೂ ಸಸ್ಯಾಹಾರಿಯಾಗಿಯೇ ಮುಂದುವರಿಯಲು ಇಷ್ಟಪಡುವೆ~ ಎನ್ನುತ್ತಾರೆ. ಅವರು ಎದುರಿಸಿದ ಮತ್ತೊಂದು ಆಕ್ಷೇಪ ಹೆಚ್ಚು ತುಪ್ಪ, ಗೋಡಂಬಿ ಬಳಕೆ ಬಗ್ಗೆ. ಅದಕ್ಕೂ ಉತ್ತರ ನೀಡಿದ ಚಂದ್ರು, `ಹೌದು ತುಂಬಾ ಜನ ನೀವು ಶ್ರೀಮಂತರ ಅಡುಗೆ ತೋರಿಸುವಿರಿ ಎಂದಿದ್ದಾರೆ. ತುಪ್ಪದ ಬದಲು ಎಣ್ಣೆ ಬಳಸಿ. ನನ್ನ ಅಭ್ಯಂತರವಿಲ್ಲ. ಆದರೆ ತುಪ್ಪ ಹಾಕಿದರೆ ಹೆಚ್ಚು ರುಚಿ ಇರುತ್ತದೆ ಎಂಬ ಕಾರಣದಿಂದ ನಾನು ಬಳಸುವೆ~ ಎನ್ನುತ್ತಾ ತುಂಬುಗೆನ್ನೆ ತುಳುಕಿಸಿದರು.

ತಮ್ಮ ಮೊದಲ ಮತ್ತು ಎರಡನೇ ಭಾಗದ ಪುಸ್ತಕಗಳು ಒಂದು ವಾರದಲ್ಲಿಯೇ 11ಸಾವಿರ ಪ್ರತಿಗಳು ಖರ್ಚಾಗಿದ್ದು ಅವರ ಸಂತಸಕ್ಕೆ ಮತ್ತೊಂದು ಕಾರಣವಾಗಿತ್ತು. ಅದರ ಉತ್ತೇಜನದಿಂದಲೇ ಮೂರನೇ ಭಾಗವನ್ನು ಹೊರತಂದಿರುವ ಚಂದ್ರು ತಮ್ಮ ಪ್ರತೀ ಪುಸ್ತಕದಲ್ಲಿಯೂ ನೂರು ರೆಸಿಪಿ ಬರೆದಿದ್ದಾರೆ. 

ಕಾರ್ಯಕ್ರಮದಲ್ಲಿ `ನಮ್ಮೂರ ಊಟ~ ಎಂಬ ಹೊಸ ಭಾಗವನ್ನು ಸೇರಿಸಿದ್ದು, ಡಯಟ್ ಸಪ್ತಾಹ, ಮಧುಮೇಹ ಸಪ್ತಾಹಗಳನ್ನು ಆಧರಿಸಿ ಅಡುಗೆ ಮಾಡುವ ಆಲೋಚನೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.