ADVERTISEMENT

ಸಿಹಿ ಸವಿ ಸೀ ಯು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

`ಯಾರೇ ನೀ ಚಿನಕುರುಳಿ.. ಎಲ್ಲಿಂದಾನೆ ಬಂದೆ..~ ಎನ್ನುವುದು `ಸೀ ಯು~ ಚಿತ್ರದ ಹಾಡು. ಈ ಹಾಡನ್ನು ಸುದ್ದಿಗಾರರಿಗೆ ತೋರಿಸಿದ ಚಿತ್ರತಂಡ, ಈಗಾಗಲೇ ಜನರು `ಸೀ ಯು~ ಗೀತೆಗಳನ್ನು ಮೆಚ್ಚಿಕೊಂಡಿರುವ ಬಗ್ಗೆ ಖುಷಿ ವ್ಯಕ್ತಪಡಿಸಿತು.

ನಿರ್ದೇಶಕ ದುರ್ಗಾ ಪಿ.ಎಸ್. ಅವರಿಗೆ ಚಿತ್ರದ ಪ್ರಥಮ ಪ್ರತಿ ನೋಡಿದ ಮೇಲೆ, ತಾವು ಹದಿನೈದು ತಿಂಗಳ ಕಾಲ ಚಿತ್ರಕ್ಕಾಗಿ ಪಟ್ಟ ಕಷ್ಟ ವ್ಯರ್ಥವಾಗಲಿಲ್ಲ ಎನಿಸಿದೆ. ಚಿತ್ರದ ಪ್ರತಿಯೊಂದು ಹಂತದಲ್ಲೂ ತಮ್ಮ ಜೊತೆಗೆ ಇದ್ದ ನಾಯಕ ವೈಭವ್ ಅವರ ಶ್ರದ್ಧೆಯನ್ನು ಮೆಚ್ಚಿಕೊಂಡ ಅವರು, `ನಮ್ಮ ಮಾತಿನ್ನು ಮುಗಿಯಿತು. ಚಿತ್ರವನ್ನು ನೋಡಿ ಪ್ರೇಕ್ಷಕರು ಮಾತನಾಡಬೇಕು~ ಎಂದರು.

ನಿರ್ಮಾಪಕ ನಾಗೇಂದ್ರ, `ತಾವು ತೆಲುಗು ನೆಲದಿಂದ ಬಂದಿರುವ ಕಾರಣ ಕನ್ನಡ ಮಾತನಾಡುವಾಗ ಸಮಸ್ಯೆ ಕಂಡುಬಂದರೆ ಕ್ಷಮಿಸಿ~ ಎಂದರು. ನೇತ್ರದಾನದ ಸಂದೇಶ ಇರುವ `ಸೀ ಯು~ ಚಿತ್ರವನ್ನು ನಿರ್ಮಿಸಲು ಅವರಿಗೆ ಕನ್ನಡದ ಮೇರುನಟ ರಾಜಕುಮಾರ್ ಪ್ರೇರಣೆಯಂತೆ.

ಮೊದಲ ಭಾಗದಲ್ಲಿ ವೇಗವಾಗಿ ಸಾಗುವ ಕತೆ ಎರಡನೇ ಭಾಗದಲ್ಲಿ ಕುತೂಹಲ ಕಾಯ್ದುಕೊಳ್ಳುತ್ತಾ ಹೋಗುತ್ತದೆ ಎನ್ನುವ ಅನಿಸಿಕೆ ನಿರ್ಮಾಪಕರದು. ಇತ್ತೀಚೆಗೆ ಸಿನಿಮಾ ವೀಕ್ಷಿಸಿರುವ ಅವರಿಗೆ ನಿರ್ದೇಶಕರ ಕೆಲಸ ಇಷ್ಟವಾಗಿದೆ. ಅಕ್ಟೋಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಮನಸ್ಸಿದೆ.

ಚಿತ್ರದ ನಾಯಕ ವೈಭವ್ ಅವರಿಗೆ ಚಿತ್ರೀಕರಣದ ಅನುಭವ ಪುನರ್ಜನ್ಮ ಪಡೆದಂತಾಗಿದೆ. `ನಾನು ಮೂರು ಸಾಹಸ ಸನ್ನಿವೇಶಗಳಲ್ಲಿ ಸಾಯಬೇಕಿತ್ತು. ಅದೃಷ್ಟವಶಾತ್ ಬಚಾವ್ ಆದೆ. ಚಿತ್ರ ಸಿದ್ಧವಾಗಿದ್ದರೂ ನಿರ್ಮಾಪಕರು `ಮೊದಲ ದಿನದ ಮೊದಲ ಶೋ ನೋಡು~ ಎಂದು ಹೇಳಿದ್ದಾರೆ. ಅವರ ಮಾತಿನಂತೆ ಬಿಡುಗಡೆ ದಿನಕ್ಕಾಗಿ ಕಾಯುತ್ತಿದ್ದೇನೆ~ ಎಂದರು.

ನಾಯಕಿ ಅರ್ಪಣಾ ಪ್ರಭು ಅವರಿಗೆ ಚಿತ್ರೀಕರಣಕ್ಕೆ ಹೋಗಿ ಬಂದಿದ್ದು ಚಾರಣದ ಅನುಭವ ನೀಡಿತಂತೆ. ಹೊಸತಂಡದ ಹೊಸ ಯತ್ನಕ್ಕೆ ಜಯ ಸಿಗಬೇಕು ಎಂಬುದು ಅವರ ಆಶಯ.

 ಸಂಗೀತ ನಿರ್ದೇಶಕ ಮಧುರ್, ಚಿತ್ರದ ಎಲ್ಲಾ ಹಾಡುಗಳಿಗೂ ಮಾಧುರ್ಯದ ಸಿಂಚನ ಇದೆ ಎಂದರು. `ಸೀಯು~ಗಿಂತ ಮುಂಚೆ ಅವರು ಸಂಗೀತ ನೀಡಿದ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.