ADVERTISEMENT

ಸೂತಕದ ಮನೆಯಲ್ಲೂ ಕಾಮಿಡಿ!

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ನಾಗರಾಜ್‌ ಪೀಣ್ಯ
ನಾಗರಾಜ್‌ ಪೀಣ್ಯ   

ಸಾವಿನ ಮನೆಯಲ್ಲಿ ನೋವು ತುಂಬಿರುತ್ತದೆ. ಆದರೆ, ಅಲ್ಲಿಯೂ ಕಾಮಿಡಿ ಹುಡುಕಲು ಮುಂದಾಗಿದ್ದಾರೆ ನಿರ್ದೇಶಕ ನಾಗರಾಜ್‌ ಪೀಣ್ಯ. ‘ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರದ ಮೂಲಕ ಸೂತಕದ ಮನೆಯಲ್ಲಿ ನಗು ಉಕ್ಕಿಸುವುದು ಅವರ ಆಸೆ.

ಈ ಸಿನಿಮಾದಲ್ಲಿ ಕಾಮಿಡಿ ಕಲಾವಿದರ ದಂಡೇ ಇದೆ. ಸಿನಿಮಾ ರಾಜ್ಯದಾದ್ಯಂತ ಈ ವಾರ (ಮೇ 4) ತೆರೆ ಕಾಣುತ್ತಿದ್ದು, ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಬಂದಿತ್ತು.

ತಮ್ಮ ಮೊದಲ ಎರಡು ಚಿತ್ರಗಳಲ್ಲಿ ಪ್ರೀತಿ ಮತ್ತು ರೌಡಿಸಂ ಕಥನದ ಬಗ್ಗೆ ಹೇಳಿದ್ದ ನಾಗರಾಜ್, ಈ ಚಿತ್ರದ ಮೂಲಕ ಕಾಮಿಡಿಯತ್ತ ಹೊರಳಿದ್ದಾರೆ. ಈ ಚಿತ್ರದ ತಯಾರಿಗಾಗಿ ಅವರು ಐವತ್ತಕ್ಕೂ ಹೆಚ್ಚು ಸೂತಕದ ಮನೆಗಳಿಗೆ ಭೇಟಿ ನೀಡಿದ್ದರಂತೆ. ‘ಸಾವಿನ ಮನೆಯಲ್ಲಿ ರೋಚಕ ಕಥೆಗಳಿರುತ್ತವೆ. ಅವುಗಳನ್ನು ಒಳಗಣ್ಣಿನಿಂದ ನೋಡಬೇಕು. ಚಿತ್ರದಲ್ಲಿ ಯಾರೊಬ್ಬರಿಗೂ ನೋವಾಗದಂತೆ ಎಚ್ಚರವಹಿಸಿದ್ದೇವೆ’ ಎಂದರು.

ADVERTISEMENT

ಚಿಕ್ಕಣ್ಣ ಅವರದು ಅಯ್ಯು ಪಾತ್ರ. ಅವರ ಸೋದರ ಮಾವನಾಗಿ ತಬಲಾ ನಾಣಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಭೂತಯ್ಯನ ಪಾತ್ರಧಾರಿಯ ಹೆಸರು ಬಿಟ್ಟುಕೊಟ್ಟಿಲ್ಲ. ಆದರೆ, ಭೂತಯ್ಯನ ಪಾತ್ರಕ್ಕೆ ಜೀವ ತುಂಬಿದವರು ಯಾರು ಎಂಬುದು ಶುಕ್ರವಾರ ಗೊತ್ತಾಗೇ ಆಗುತ್ತದೆ!

‘ನಾನು ಚಿಕ್ಕಣ್ಣನ ಮಾವ. ನನ್ನಕ್ಕನ ಸಲಹೆಯಂತೆ ಅವನಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸುವುದೇ ನನ್ನ ಜೀವನದ ಧ್ಯೇಯ. ನನಗೆ ಹೆಣ್ಣು ಸಿಕ್ಕಿದರೂ ಅವನಿಗೆ ಸಿಗುವುದಿಲ್ಲ. ತೊಂಬತ್ತೊಂಬತ್ತನೇ ಮನೆಯ ಬಳಿಕ ನೂರನೇ ಮನೆಗೆ ಹೆಣ್ಣು ನೋಡಲು ಹೋಗುತ್ತೇವೆ. ಮದುವೆ ಹೆಣ್ಣು ನನ್ನ ಹಳೆಯ ಪ್ರೇಯಸಿಯ ಪುತ್ರಿ ಎನ್ನುವುದು ಗೊತ್ತಾಗುತ್ತದೆ’ ಎಂದು ನಕ್ಕರು ನಟ ತಬಲಾ ನಾಣಿ.

‘ಈ ಹಿಂದೆ ಊರಲ್ಲಿ ಯಾರಾದರೂ ಮೃತಪಟ್ಟರೆ ಜನ ಅಡುಗೆ ಮಾಡುತ್ತಿರಲಿಲ್ಲ. ಈಗ ಪಕ್ಕದ ಮನೆಯಲ್ಲಿ ಯಾರಾದರೂ ಸತ್ತರೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಬಿರಿಯಾನಿ ತಿನ್ನುವ ಜನರೂ ಇದ್ದಾರೆ. ಸಾವಿನ ಮನೆಯಲ್ಲಿ ನಗು ತರಿಸಲು ಹೊರಟಿರುವ ನಿರ್ದೇಶಕರ ಪ್ರಯತ್ನ ಶ್ಲಾಘನೀಯ’ ಎಂದರು.

ಇದು ಹೊನ್ನವಳ್ಳಿ ಕೃಷ್ಣ ನಟನೆಯ ಒಂದು ಸಾವಿರದ ಚಿತ್ರ. ನಂದಕುಮಾರ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಬುಲೆಟ್‌ ಪ್ರಕಾಶ್‌, ಶ್ರುತಿ ಹರಿಹರನ್, ಗಿರಿಜಾ ಲೋಕೇಶ್‌, ರಾಕ್‌ಲೈನ್‌ ಸುಧಾಕರ್‌ ತಾರಾಗಣದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.