ಅದೊಂದು ಬೆಳಗ್ಗೆ ಮಗನನ್ನು ಎಬ್ಬಿಸಲೆಂದು ಅಪ್ಪ ಪಂಕಜ್ ಕಪೂರ್ ಕೋಣೆಯ ಕದವನ್ನು ಮೆಲ್ಲಗೆ ತಟ್ಟಿದರು. ಕದ ತೆರೆದುಕೊಂಡಿತ್ತು. ಸಾಮಾನ್ಯವಾಗಿ ಬಾಗಿಲು ಮುಚ್ಚಿಕೊಂಡು ಮಲಗುವ ಮಗ ಅಂದು ಕದವಿಕ್ಕಿಕೊಳ್ಳದೇ ಇದ್ದದ್ದೇ ಅಪ್ಪನಿಗೆ ಅಚ್ಚರಿಯಾಗಿ ಕಂಡಿತ್ತು. ರಾತ್ರಿ ಎಷ್ಟು ಹೊತ್ತಿಗೆ ಕೋಣೆ ಹೊಕ್ಕಿದ್ದನೋ ಮಗ ಎಂಬುದು ಕೂಡ ಅವರಿಗೆ ಗೊತ್ತಿರಲಿಲ್ಲ. ಮಂಚದ ಪಕ್ಕ ಇದ್ದ ಸಣ್ಣ ಟೀಪಾಯಿಯ ಮೇಲೆ ಕೆಲವು ಸೀಡಿಗಳಿದ್ದವು. ಯಾವುದೋ ಒಂದು ಸ್ಕ್ರಿಪ್ಟನ್ನು ಅರ್ಧ ಓದಿಟ್ಟಿದ್ದ ಕುರುಹೂ ಇತ್ತು. ಅಪ್ಪನ ಉಸಿರು ತಾಕಿದ್ದೇ ಮಗ ಮೆಲ್ಲಗೆ ಕಣ್ಣುಬಿಟ್ಟ. `ಅಪ್ಪ ನಾನು ನಟನಾಗುತ್ತೇನೆ~ ಎಂದು ಬೇರೆ ರೀತಿ ಗುಡ್ ಮಾರ್ನಿಂಗ್ ಹೇಳಿದ. ಶಾಹಿದ್ ಕಪೂರ್ ಹೀಗೆ ಅಪ್ಪನಲ್ಲಿ ನಟನಾಗುವ ಇಂಗಿತ ವ್ಯಕ್ತಪಡಿಸಿ ಎಂಟು ವಸಂತಗಳಾಗಿವೆ. ಅವರ ಬಯಕೆಗಳು ಮಾತ್ರ ವಸಂತದಿಂದ ವಸಂತಕ್ಕೆ ಬದಲಾಗುತ್ತಲೇ ಇವೆ.
ಎಲ್ಲರೂ ಏನು ಮಾಡುತ್ತಾರೋ ಅದನ್ನು ತಾವು ಮಾಡಬಾರದೆಂಬುದು ಮೊದಲಿನಿಂದಲೂ ಶಾಹಿದ್ ಜಾಯಮಾನ. ಪಂಕಜ್ ಕಪೂರ್ ಕೂಡ ಅದನ್ನು ಒಪ್ಪುತ್ತಾರೆ.
`ನನ್ನಲ್ಲೂ ಮೊದಲು ಆ ಗುಣ ಇತ್ತಂತೆ. ಒಂದು ರೀತಿ ನಮ್ಮನ್ನು ನಾವು ಮೀರುತ್ತಾ ಹೊಸತಿಗಾಗಿ ಹಂಬಲಿಸಲು ಅಂಥ ಗುಣದ ಅಗತ್ಯವಿದೆ ಎಂದೇ ನನ್ನ ಭಾವನೆ~ ಎನ್ನುವ ಅವರು ಮಗ ನಟನಾಗುವ ಬಯಕೆ ಹೊರಹಾಕಿದ್ದಾಗ, ಒಂದು ತಾಸು ಕ್ಲಾಸ್ ತೆಗೆದುಕೊಂಡಿದ್ದರು. ನಟಿಸುವುದು ಬೇಡ ಎಂದೇನೂ ಅವರು ಹೇಳಲಿಲ್ಲ. ಆದರೆ ಎಂಥ ನಟನಾಗಬೇಕು ಎಂದು ಕಿವಿಮಾತು ಹೇಳಿದ್ದರು.
ಅಪ್ಪನ ಮಾತನ್ನು ಕಿವಿಯಾಳಕ್ಕೆ ಇಳಿಸಿಕೊಂಡ ಶಾಹಿದ್ `ಜಬ್ ವಿ ಮೆಟ್~ ಚಿತ್ರದ ಯಶಸ್ಸಿನ ನಂತರ `ಕಮೀನೆ~ಯಂಥ ಅಪರೂಪದ ಚಿತ್ರ ಒಪ್ಪಿಕೊಂಡರು. ದ್ವಿಪಾತ್ರವಿದ್ದ ಆ ಚಿತ್ರಕ್ಕೆ ಮೈಮನವನ್ನು ಅವರು ಸಜ್ಜುಗೊಳಿಸಿಕೊಂಡ ರೀತಿಯೇ ಅದ್ಭುತ. ವಿಶಾಲ್ ಭಾರದ್ವಾಜ್ ನಿರ್ದೇಶನದ ರುಜುವಿದ್ದ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿಯಾಯಿತು.
`ಹೃತಿಕ್, ಅಭಿಷೇಕ್ ಬಚ್ಚನ್ ಚಿತ್ರರಂಗಕ್ಕೆ ಬಂದು ವರ್ಷಗಳಾದ ಮೇಲೆ ಬಂದವನು ನಾನು. ರಣಬೀರ್, ಇಮ್ರಾನ್ ಖಾನ್‌ಗಿಂತ ಮೂರು ವರ್ಷ ಮುಂಚಿತವಾಗಿ ಕಾಲಿಟ್ಟವನು. ಆದರೆ ಎಂದೂ ಅವರೆಲ್ಲ ನನ್ನ ಸ್ಪರ್ಧಿಗಳು ಎಂದು ಭಾವಿಸಿಯೇ ಇಲ್ಲ. ನನಗೆ ನಾನೇ ಸ್ಪರ್ಧಿ. ಜನ ನನಗೆ ಇಮೇಜಿನ ಚೌಕಟ್ಟು ಹಾಕಲು ಹೆಣಗಾಡಬೇಕು. ಅದೇ ನನ್ನ ಗುರಿ. ವರ್ಷಗಟ್ಟಲೆ ಚಿತ್ರೋದ್ಯಮದಲ್ಲಿ ತೊಡಗಿಕೊಳ್ಳುವ ಮಹತ್ವಾಕಾಂಕ್ಷೆ ನನ್ನದು. ಇಲ್ಲಿ ನಾನು ಸೂಪರ್‌ಸ್ಟಾರ್ ಆಗಬೇಕು. ನನ್ನಷ್ಟು ಪಾತ್ರವೈವಿಧ್ಯದ ಇನ್ನೊಬ್ಬ ಸೂಪರ್‌ಸ್ಟಾರ್ ಇರಲಾರ. ಪ್ರತಿ ಬೆಳಗ್ಗೆ ಹೀಗಂದುಕೊಳ್ಳುತ್ತಲೇ ನಾನು ಸ್ಕ್ರಿಪ್ಟ್ ಓದುತ್ತೇನೆ~ ಅಂತಾರೆ ಶಾಹಿದ್.
ಶಾಹಿದ್ ಬಳಿಗೆ ಸ್ಕ್ರಿಪ್ಟ್ ತೆಗೆದುಕೊಂಡು ಹೋಗುವವರು ಒಂದು ಅಳುಕಿನಿಂದಲೇ ಇರುತ್ತಾರಂತೆ. `ಬೋರ್ ಹೊಡೆಸುವ ಸಿನಿಮಾಗಳನ್ನು ಮಾಡಕೂಡದು. ಕಮರ್ಷಿಯಲ್, ಕಲಾತ್ಮಕ ಎಂಬ ಗೆರೆಯೂ ಅಳಿಸಿಹೋಗಿದೆ. ಎಲ್ಲಾ ಚಿತ್ರಗಳೂ ಕಮರ್ಷಿಯಲ್ಲೇ. ಹಣ ಹಾಕುವುದು, ಪಡೆಯುವುದು ಎಲ್ಲಾ ರೀತಿಯ ಸಿನಿಮಾ ನಿರ್ಮಾಪಕರ ಉಮೇದು. ವಿನಿಯೋಗವಾಗುವ, ಮರಳಿ ಪಡೆಯುವ ಹಣದ ಪ್ರಮಾಣದಲ್ಲಿ ವ್ಯತ್ಯಾಸವಿದೆ, ಅಷ್ಟೇ. ಯಾರೋ ಬಂದು ಸ್ಕ್ರಿಪ್ಟ್ ಓದಿದಾಗ ನನಗೆ ಥ್ರಿಲ್ ಆಗಬೇಕು. ಇಲ್ಲದಿದ್ದರೆ ಅಂಥ ಚಿತ್ರಕಥೆಯ ಬಗ್ಗೆ ಚರ್ಚೆ ಮುಂದುವರಿಸುವ ಅಗತ್ಯವೇ ಇಲ್ಲ. ಎಷ್ಟೋ ಸಲ ನಾನು ಒಂದೇ ಪುಟ ಓದಿ, ದಯವಿಟ್ಟು ಬೇರೇನಾದರೂ ಮಾಡಿ ಎಂದು ಸ್ಕ್ರಿಪ್ಟ್ ಬರೆದುಕೊಂಡು ಬಂದವರಿಗೆ ಬುದ್ಧಿ ಹೇಳಿ ಕಳುಹಿಸಿದ್ದೇನೆ~- ಶಾಹಿದ್‌ರ ಈ ಅಭಿಪ್ರಾಯ ಐದು ವರ್ಷಗಳಿಂದ ಬದಲಾಗಿಲ್ಲವಂತೆ.
ಈಗ ಕುನಾಲ್ ಕೊಹ್ಲಿ ನಿರ್ದೇಶನದಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಿರುವ `ತೇರಿ ಮೇರಿ ಕಹಾನಿ~ ಚಿತ್ರದ ಮೇಲೆ ಶಾಹಿದ್ ಭರವಸೆ ಇಟ್ಟುಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಶಾಹಿದ್, ಆಕೆಯನ್ನು ತಮ್ಮ ಬಾಯ್‌ಫ್ರೆಂಡ್ ಎಂದೇ ಭಾವಿಸಿದ್ದಾರೆ. ಪ್ರಿಯಾಂಕಾ ಚಿಂತನೆ ಪುರುಷರಂತೆ ಇದೆ ಎಂಬುದೇ ಅವರ ಈ ಭಾವನೆಗೆ ಕಾರಣ.
ಮದುವೆ ಯಾವಾಗ ಅಂತ ಯಾರೇ ಕೇಳಿದರೂ ಶಾಹಿದ್ ಕೊಡುವ ಉತ್ತರ- `ಸೂಪರ್‌ಸ್ಟಾರ್ ಆದಮೇಲೆ~.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.