ADVERTISEMENT

ಸೆಕ್ಸಿಸಮ್ ವಿರುದ್ಧ ಎಐಬಿ ವಿಡಿಯೊದಲ್ಲಿ ಕಂಗನಾ ಆಕ್ರೋಶ

ಏಜೆನ್ಸೀಸ್
Published 13 ಸೆಪ್ಟೆಂಬರ್ 2017, 11:34 IST
Last Updated 13 ಸೆಪ್ಟೆಂಬರ್ 2017, 11:34 IST
ಸೆಕ್ಸಿಸಮ್ ವಿರುದ್ಧ ಎಐಬಿ ವಿಡಿಯೊದಲ್ಲಿ ಕಂಗನಾ ಆಕ್ರೋಶ
ಸೆಕ್ಸಿಸಮ್ ವಿರುದ್ಧ ಎಐಬಿ ವಿಡಿಯೊದಲ್ಲಿ ಕಂಗನಾ ಆಕ್ರೋಶ   

ಮುಂಬೈ: ಬಾಲಿವುಡ್‌ ಸಿನಿಮಾಗಳಲ್ಲಿ ನಟಿಯರನ್ನು ಕೆಟ್ಟದಾಗಿ ಚಿತ್ರಿಸುವುದು, ಲಿಂಗ ತಾರತಮ್ಯ ಮಾಡುವುದು, ನಟ–ನಟಿಯರ ನಡುವಣ ವಯಸ್ಸಿನ ಅಂತರ, ಸ್ವಜನ ಪಕ್ಷಪಾತ ಮತ್ತಿತರ ಸಮಸ್ಯೆಗಳ ವಿರುದ್ಧ ‘ಬಾಲಿವುಡ್ ದಿವಾ ಸಾಂಗ್’ ವಿಡಿಯೊದಲ್ಲಿ ನಟಿ ಕಂಗನಾ ರನೋಟ್‌ ಧ್ವನಿಯೆತ್ತಿದ್ದಾರೆ.

ತಮ್ಮ ಹೊಸ ಸಿನಿಮಾ ಸಿಮ್ರಾನ್ ಪ್ರಚಾರಾರ್ಥ ಎಐಬಿನಲ್ಲಿ ಪ್ರಸಾರ ಮಾಡಲಾದ ವಿಡಿಯೊ ಸಾಂಗ್‌ನಲ್ಲಿ ಕಂಗನಾ ಅವರು ಪ್ರಮುಖ ನಟಿ ಪ್ರಿಯಾಳ ಪಾತ್ರ ನಿರ್ವಹಿಸಿದ್ದಾರೆ. ವಿಡಿಯೊದಲ್ಲಿ, ನಟಿಯು ಚಿತ್ರೀಕರಣಕ್ಕೆ ಸಿದ್ಧರಾಗಿ ನಿರ್ದೇಶಕರ ಬಳಿ ತೆರಳಿದಾಗ ಅವರಿಗೆ ಆಕೆಯ ಪರಿಚಯವೇ ಸಿಗುವುದಿಲ್ಲ. ಆಕೆ ಪ್ರಮುಖ ಪಾತ್ರ ಎಂಬುದನ್ನೂ ಅವರು ಗುರುತಿಸುವುದಿಲ್ಲ. ಅಲ್ಲದೆ, ಸಂಭಾಷಣೆಯೊಂದನ್ನು ಹೇಳಲಾಗದು ಎಂದು ನಟಿ ಆಕ್ಷೇಪ ವ್ಯಕ್ತಪಡಿಸಿದ್ದನ್ನೂ ನಿರ್ದೇಶಕರು ಒಪ್ಪುವುದಿಲ್ಲ. ‘ಅರೇ, ನೀನಿದನ್ನೂ ಹೇಳಲೇಬೇಕು. ಪ್ರೇಕ್ಷಕರನ್ನು ರಂಜಿಸದಿದ್ದರೆ ಹಿಟ್ ಆಗಲಾರದು’ ಎಂದು ನಿರ್ದೇಶಕರು ಹೇಳುವ ದೃಶ್ಯವೂ ವಿಡಿಯೊದಲ್ಲಿದೆ. ಆದರೆ, ನಟ ಸಂಭಾಷಣೆಯಲ್ಲಿ ಬದಲಾವಣೆ ಬಯಸಿದಾಗ ನಿರ್ದೇಶಕರು ಬೇಗನೆ ಒಪ್ಪುತ್ತಾರೆ. ನಟನನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ.

ನಂತರ ಕಂಗನಾ ನೃತ್ಯ ಆರಂಭಿಸುತ್ತಾರೆ. ಹಾಡಿನ ಸಾಹಿತ್ಯವೂ ಪರಿಣಾಮಕಾರಿಯಾಗಿದ್ದು, ಪ್ರಮುಖ ಸ್ಟಾರ್‌ಗಳನ್ನು ಲೇವಡಿ ಮಾಡಲಾಗಿದೆ. ನಟಿಯರ ಸೊಂಟ ತೋರಿಸಲು ಇರುವ ನಿರ್ದೇಶಕ ಆಸ್ಥೆಯನ್ನೂ ಛೇಡಿಸಲಾಗಿದೆ. ನಟ ಮತ್ತು ನಟಿಯರ ಮಧ್ಯೆ ವಯಸ್ಸಿನ ಅಂತರ ಇರುವ ಬಗ್ಗೆಯೂ ವಿಡಿಯೊದಲ್ಲಿ ಪ್ರಸ್ತಾಪಿಸಲಾಗಿದೆ.

ADVERTISEMENT

ವಿಡಿಯೊ ಸಾಂಗ್‌ನ ಕೊನೆಯಲ್ಲಿ 'ಸಿಮ್ರಾನ್ ಸಿನಿಮಾ ನೋಡಿ' ಎಂದು ಕೋರುವ ಕಂಗನಾ, 'ಹಾಡಿಗೆ ಸಾಹಿತ್ಯ ಬರೆದವಳು ನಾನಲ್ಲ' ಎಂದು ಸ್ಪಷ್ಟಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.