ADVERTISEMENT

ಸೈಕೋ ಪಾತ್ರ ಇಷ್ಟ

ಸುಮನಾ ಕೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಶೋಭಿತಾ
ಶೋಭಿತಾ   

ಜೀ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿ ನೋಡಿದವರು ಈ ಹುಡುಗಿಯ ನೆರಳು ಕಂಡರೂ ಮುಖ ಸಿಂಡರಿಸುತ್ತಾರೆ. ನೋಡೋಕೆ ಇಷ್ಟು ಮುದ್ದಾಗಿದ್ದಾಳೆ. ಇವಳು ಮಾಡಿದ ತಪ್ಪಾದ್ರೂ ಏನು ಎಂದು ಅಚ್ಚರಿಪಡಬೇಡಿ. ಜನರ ಸಿಡುಕು ಈ ಹುಡುಗಿಯ ವೈಯಕ್ತಿಕ ಬದುಕಿನ ಕುರಿತಾದ್ದಲ್ಲ. ಅದು ಪ್ರತಿದಿನ ತೆರೆಯ ಮೇಲೆ ನಿರ್ವಹಿಸುತ್ತಿರುವ ಪಾತ್ರದ ಖಳತನದ ಕುರಿತಾಗಿದ್ದು!

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ವಾರಗಿತ್ತಿಯನ್ನು ಮುಂದಿಟ್ಟುಕೊಂಡು ತನ್ನ ಕಾರ್ಯ ಸಾಧಿಸಿಕೊಳ್ಳುವ, ಗಂಡನನ್ನು ದೂರುತ್ತಲೇ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಶೋಭಿತಾ ಶಿವಣ್ಣ. ಸುಮಾರು 4–5 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಶೋಭಿತಾ ಸಕಲೇಶಪುರದವರು. ಅವರು ನಟನಾ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕವಾಗಿ. ವರ್ಷದ ಹಿಂದೆ ಅವರು ನಾಯಕಿಯಾಗಿ ನಟಿಸಿದ ‘ಎರಡೊಂದ್ಲಾ ಮೂರು’ ಅಷ್ಟೇನೂ ಯಶಸ್ಸು ತಂದುಕೊಡಲಿಲ್ಲ. ಈಗ ‘ಅಟೆಂಪ್ಟ್‌ ಟು ಮರ್ಡರ್‌’ ಹಾಗೂ ‘ವಂದನಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

* ‘ಬ್ರಹ್ಮಗಂಟು’ನಲ್ಲಿ ವಿಲನ್‌ ಆಗಿ ನಟಿಸಿದ್ದೀರಿ?
ಇದೇ ಮೊದಲ ಬಾರಿ ನೆಗೆಟೀವ್‌ ಪಾತ್ರದಲ್ಲಿ ನಟಿಸಿರುವುದು. ನಿರ್ದೇಶಕರು ಈ ಪಾತ್ರ ಮಾಡ್ತೀರಾ? ಎಂದು ಕೇಳಿದಾಗ ಒಪ್ಪಿಕೊಳ್ಳಲು ಸ್ವಲ್ಪ ಹಿಂದೆ ಮುಂದೆ ನೋಡಿದೆ. ಯಾವತ್ತೂ ಮಾಡದೇ ಇರುವ ರೀತಿಯ ಪಾತ್ರಗಳನ್ನು ಮಾಡಬೇಕಲ್ಲಾ ಅಂತ  ಆರಂಭದಲ್ಲಿ ಸ್ವಲ್ಪ ನರ್ವಸ್‌ ಆಗಿದ್ದೆ. ಆದರೆ ಭಿನ್ನ ಭಿನ್ನ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನ ಯೋಚನೆಯಾಗಿತ್ತು. ಆರಂಭದಲ್ಲಿ ಸಂಚಿಕೆ ನಿರ್ದೇಶಕರು ಹೀಗೆ ಮಾಡಿ ಮೇಡಂ ಎಂದು ಹೇಳಿಕೊಡುತ್ತಿದ್ದರು.

ADVERTISEMENT

* ಮುಂಚೆ ಅಳುಮುಂಜಿ ಪಾತ್ರ ಗಳಲ್ಲೇ ಕಾಣಿಸಿಕೊಂಡಿದ್ದಿರಲ್ಲಾ?
ನನಗೆ ಮೊದಲಿನಿಂದಲೂ ಎಲ್ಲಾ ಸಾಫ್ಟ್‌ ಪಾತ್ರಗಳೇ ಸಿಕ್ಕಿದ್ದು, ಹೀಗಾಗಿ ಅಳೋದು ರೂಢಿಯಾಯಿತು. ಅಳುವ ಪಾತ್ರ ಬಂದಾಗ ಗ್ಲಿಸರಿನ್‌ ಇಲ್ಲದೇನೆ ಅಳು ಬರುವಷ್ಟರ ಮಟ್ಟಿಗೆ ಪಳಗಿದ್ದೆ. ಜನ ಎಲ್ಲಾ ನನ್ನನ್ನು ಪಾತ್ರದ ಮೂಲಕವೇ ಗುರುತಿಸಿ, ಪಾತ್ರದ ಹಾಗೇ ನಾನು ಸರಳ, ಒಳ್ಳೆಯವಳು ಅಂತಾ ಹೋದ ಕಡೆಗಳಲ್ಲಿ ಪ್ರೀತಿ ತೋರಿಸೋರು.

* ಪತಿಯೇ ಪರದೈವ ಎಂಬ ಮನೆಯಲ್ಲಿ ಪತಿಯನ್ನು ಕಾಲ ಕಸದಂತೆ ಕಾಣುತ್ತೀರಲ್ಲ?
ಧಾರಾವಾಹಿಯಲ್ಲಿ ನನ್ನ ಪಾತ್ರ ಪಿಂಕಿಗೆ ಮೊದಲು ನಾಯಕನ ಮೇಲೆ ಪ್ರೀತಿ ಇರುತ್ತದೆ. ಆದರೆ ಆಮೇಲೆ ಅವನ ಅಣ್ಣನನ್ನು ಮದುವೆಯಾಗಬೇಕಾಗುತ್ತದೆ. ಅವನು ಪೆದ್ದು ಪೆದ್ದು. ಅವನಿಗೆ ಯಾವ ಕೆಲಸವೂ ಸರಿಯಾಗಿ ಮಾಡಕ್ಕಾಗಲ್ಲ. ಆದ್ರೆ ನಾಯಕ ಯಾವಾಗಲೂ ನಂ.1. ಅವನಿಗೆ ಮನೆಯಲ್ಲಿ ಗೌರವ. ಹೆಂಡತಿಯಾಗಿ ಅದನ್ನು ನೋಡುವಾಗ ನನಗೆ ಹೊಟ್ಟೆ ಉರಿಯಲ್ವಾ?

* ಅದ್ಹೇಗೆ ಅತ್ತೆನ ಕಂಡ್ರೆ ಆಗ್ದೇ ಇದ್ರೂ ಅವರ ಜೊತೆ ಚೆನ್ನಾಗಿರ್ತೀರಲ್ಲ?
ಹುಂ... ಅದು ನಿರ್ದೇಶಕರ ಜಾಣ್ಮೆ. ನಂಗೆ ಅತ್ತೇನಾ ಚೆನ್ನಾಗಿ ನೋಡ್ಕೊಬೇಕು ಅಂತಾನೇ ಆಸೆ. ಆದ್ರೆ ನಿರ್ದೇಶಕರಿಗೆ ನಾನು ಹಾಗಿರುವುದು ಇಷ್ಟ ಇಲ್ಲ. ಮುಂದೆ ಕಥೆ ಬದಲಾವಣೆ ಆದ್ರೆ ಅತ್ತೆಗೆ ತಕ್ಕ ಸೊಸೆ ಆಗಿರ್ತೀನಿ.

* ನಿಮ್ಮ ಮದುವೆಯಾಗುವಾಗ ಹುಡುಗ ನಿಮ್ಮ ಪಾತ್ರ ನೋಡಿ ಬೇಡ ಅಂದ್ರೆ?
ಇದೇ ರೀತಿ ನಾನು ಯೋಚನೆ ಮಾಡಿ, ನಕ್ಕಿದ್ದೀನಿ. ಯಾವಾಗಲೂ ನಿರ್ದೇಶಕರ ಹತ್ರ ‘ಸರ್‌, ಹುಡುಗ ಒಪ್ಪಿದರೂ, ಅವನ ಅಮ್ಮ ನನ್ನನ್ನು ಒಪ್ಪಿಕೊಳ್ಳಲ್ಲ. ನಂಗೆ ಮದುವೆ ಆಗಲ್ಲ ಬಿಡಿ’ ಎಂದು ಅಳಲು ತೋಡಿಕೊಳ್ಳುತ್ತಿರುತ್ತೇನೆ. ಈಗ ಕಾಲ ಬದಲಾಗಿದೆ ಬಿಡಿ. ಜನಕ್ಕೆ ನಾನು ಪಾತ್ರಧಾರಿ ಎಂಬುದು ಗೊತ್ತಿದೆ. ಆದ್ರೆ ಕೆಲವೊಮ್ಮೆ ಜನ ಸಿಕ್ಕಾಗ ಅದ್ಯಾಕೆ ವಾರಗಿತ್ತಿಗೆ ಅಷ್ಟೊಂದು ಕಾಟ ಕೊಡ್ತೀಯಾ ಅಂತಾ ಕೇಳಿದ್ದಾರೆ.

* ಮುಂದೆ ಯಾವ ರೀತಿಯ ಪಾತ್ರ ಮಾಡಲು ಇಷ್ಟ?‌
ಧಾರಾವಾಹಿಗಳಲ್ಲಿ ಸವಾಲಿನ ಪಾತ್ರ ನೋಡಿದಾಗ ಅಂತಹ ಪಾತ್ರ ನನಗೆ ಸಿಕ್ಕಲಿ ಅಂತಾ ಆಸೆ ಆಗುತ್ತೆ. ಸೈಕೋ ಪಾತ್ರ ಮಾಡಬೇಕು ಎಂಬ ಆಸೆ ಇದೆ.

* ‘ಅಟೆಂಪ್ಟ್‌ ಟು ಮರ್ಡರ್‌’, ‘ವಂದನಾ’ ಸಿನಿಮಾದ ಬಗ್ಗೆ ಹೇಳಿ...
ಎರಡೂ ಚಿತ್ರದಲ್ಲಿ ನನಗೆ ನಾಯಕಿ ಪಾತ್ರ. ಎರಡೂ ಚಿತ್ರದ ಚಿತ್ರೀಕರಣ ಮುಗಿದಿದೆ. ‘ಅಟೆಂಪ್ಟ್‌ ಟು ಮರ್ಡರ್‌’ ಚಿತ್ರದ ಆಡಿಯೊ ರಿಲೀಸ್‌ ಆಗಿದೆ. ಬಹುಶಃ ನವೆಂಬರ್‌ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಬಹುದು. ಚಿತ್ರವನ್ನು ಮೈಸೂರು, ದೊಡ್ಡಬಳ್ಳಾಪುರದಲ್ಲಿ ಚಿತ್ರೀಕರಿಸಲಾಗಿದೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಚಂದು ಗೌಡ ಈ ಚಿತ್ರದ ನಾಯಕ. ‘ವಂದನಾ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.