`ಒರಿಯರ್ದೊರಿ ಅಸಲ್~ ತುಳು ಚಿತ್ರದ ಯಶಸ್ಸು ನಿರ್ದೇಶಕ ಹ.ಸೂ. ರಾಜಶೇಖರ್ ಅವರಿಗೆ ಮತ್ತೊಂದು ಅವಕಾಶವನ್ನು ತಂದಿತ್ತಿದೆ. ಪ್ರವೀಣ್ ಕುಮಾರ್ ಕೊಂಚಾಡಿ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ತುಳು ಭಾಷೆಯ `ರಿಕ್ಷಾ ಡ್ರೈವರ್~ ಚಿತ್ರದ ಹೊಣೆ ಅವರದಾಗಿದೆ.
`ಆಟೊ ಚಾಲಕರು ಪ್ರಯಾಣಿಕರೊಂದಿಗೆ ಯಾವ ರೀತಿಯ ಸೌಹಾರ್ದ ಕಾಯ್ದುಕೊಳ್ಳಬೇಕು ಎಂಬುದು ಚಿತ್ರದ ಕಥೆ. ಪ್ರಯಾಣಿಕರ ಉಪಯೋಗಕ್ಕೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪತ್ರಿಕೆಗಳು, ನೀರು ಇಟ್ಟುಕೊಂಡ ಆ `ಆಟೊ~ ನನ್ನ ಚಿತ್ರದ ನಾಯಕ. ಇದರ ಜೊತೆಯಲ್ಲಿ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಗೆಳೆಯರ ಕತೆಯೂ ಅಡಗಿದೆ~ ಎಂದು ರಾಜಶೇಖರ್ ಹೇಳಿದರು.
ನ.12ರಂದು ಮಂಗಳೂರಿನ ಮಂಗಳಾದೇವಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ. ಮಂಗಳೂರು, ಮಡಿಕೇರಿ, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ನಿರ್ಮಾಪಕರಿಗೆ ಚಿತ್ರದ ಕತೆಗೆ ಗೆಲುವು ಸಿಕ್ಕೇ ಸಿಗುವ ಭರವಸೆ ಇದೆ.
`ಇದು ಮತ್ತೊಂದು `ಒರಿಯರ್ದೊರಿ ಅಸಲ್~ ಆಗುವುದು ಖಂಡಿತ. ಅನ್ಯಾಯಕ್ಕೆ ಒಳಗಾಗುವ ನಾಯಕನ ನೆರವಿಗೆ ಅವನ ಅನ್ಯಧರ್ಮೀಯ ಗೆಳೆಯರು ಹೇಗೆ ಬರುತ್ತಾರೆ ಎಂಬುದು ಚಿತ್ರದ ಹೈಲೈಟ್~ ಎಂದ ಅವರು, ನಿರ್ದೇಶಕರ ಮೇಲೆ ಪೂರ್ಣ ಭರವಸೆ ಇಟ್ಟಿದ್ದಾರೆ.
ಚಿತ್ರದ ನಾಯಕ ಕಾರ್ತಿಕ್ ಅತ್ತಾವರ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜನಿಯರ್. ಖಾಕಿ ಅಂಗಿ ತೊಟ್ಟು ಪತ್ರಿಕಾಗೋಷ್ಠಿಗೆ ಬಂದಿದ್ದ ಅವರು ಚಿತ್ರದ ಪಾತ್ರಕ್ಕೆ ಜೀವ ತುಂಬುವ ಭರವಸೆ ನೀಡಿದರು. ನಾಯಕಿ ರೂಪಿಕಾ ಅವರಿಗೆ ಚಿತ್ರದಲ್ಲಿ ವಕೀಲೆಯ ಪಾತ್ರವಂತೆ. ಇದೇ ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ ಅವರು ನಾದಮಯ ಎನಿಸುವ ತುಳು ಭಾಷೆಯ ಮೇಲೆ ಪ್ರೀತಿ ವ್ಯಕ್ತಪಡಿಸಿದರು.
ಸಂಗೀತ ನಿರ್ದೇಶಕ ವಹಾಬ್ ಸಲೀಂ ಪುತ್ತೂರು ಚಿತ್ರಕ್ಕೆ ಸಾಹಿತ್ಯ ಒದಗಿಸಿ, ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಸಿದ್ಧವಾಗಿದ್ದು, ಸದ್ಯದಲ್ಲೇ ಬಾಲಿವುಡ್ ಗಾಯಕರಿಂದ ಹಾಡಿಸುವುದಾಗಿ ಹೇಳಿಕೊಂಡರು.
ನಟ ಸುರೇಶ್ ಮಂಗಳೂರು, ಸಾಹಸ ನಿರ್ದೇಶಕ ಕೌರವ ವೆಂಕಟೇಶ್, ಛಾಯಾಗ್ರಾಹಕ ನಿರಂಜನ ಬಾಬು, ನಟ ಸುಭಾಷ್ ಶೆಟ್ಟಿ ಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.