ADVERTISEMENT

ಹೂವು ಅರಳುತಿದೆ..

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಹೂವು ಅರಳುತಿದೆ. ಪಾರಿಜಾತ ಘಮಘಮಿಸುತಿದೆ, ನಿಧಾನವಾಗಿ.
`ಚಿಂತೆಯಿಲ್ಲ. ನಾವು ಸಿನಿಮಾ ತೆರೆಕಾಣಿಸಿದ್ದೇ ಕಡಿಮೆ ಚಿತ್ರಮಂದಿರಗಳಲ್ಲಿ. ಸಿನಿಮಾ ನೋಡಿದವರೆಲ್ಲ ಒಳ್ಳೆಯ ಮಾತನಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಪಾರಿಜಾತ ತೆರೆಕಾಣಲಿದೆ~ ಎನ್ನುವಾಗ ನಿರ್ಮಾಪಕ ಪರಮೇಶ್ ಕಣ್ಣಲ್ಲೂ ಹೂ ಅರಳಿದ ಬೆಳಕು! ಅದೇನು ನಿಜದ ಬೆಳಕೋ, ಸಭಾಂಗಣದ ದೀಪಗಳ ಪ್ರಖರತೆಯೋ... ಕಾಲವೇ ಹೇಳಬೇಕು. ಈ ಮೊದಲು, `ಜೀವಾ~ ಎನ್ನುವ ಚಿತ್ರ ನಿರ್ಮಿಸಿ ಪರಮೇಶ್ ಕೈಸುಟ್ಟುಕೊಂಡಿದ್ದರು. ಈಗ `ಪಾರಿಜಾತ~ ಅವರ ಮುಡಿಗೇರಿದಂತಿದೆ.

ಚಿತ್ರತಂಡದ ಪ್ರಕಾರ- ನಗರ ಮತ್ತು ಪಟ್ಟಣಗಳ ಜನರೆಲ್ಲ ಚಿತ್ರವನ್ನು `ಮೋಹಿಸು~ತ್ತಿದ್ದಾರೆ. ದಿಗಂತ್ - ಐಂದ್ರಿತಾ ರೇ ಜೋಡಿ ನೋಡುಗರಿಗೆ ಖುಷಿ ಕೊಡುತ್ತಿದೆ; ಇಬ್ಬರ ನಡುವಣ ಸಿನಿಮಾ ಕೆಮಿಸ್ಟ್ರಿ ಫಲಿತಾಂಶದ ರೂಪದಲ್ಲಿ ಕಾಣಿಸುತ್ತಿದೆ. `ಮೋಹಿಸು~ ಗೀತೆ ಯುವಜನರಿಗೆ ಇಷ್ಟವಾಗಿದೆ. ಚಿತ್ರವೊಂದು ಗೆಲ್ಲಲು ಇನ್ನೇನು ಬೇಕು?

ನಿರ್ದೇಶಕ ಪ್ರಭು ಶ್ರೀನಿವಾಸ್ ಅವರಿಗೂ ತಮ್ಮ ಚಿತ್ರದ ಬಗ್ಗೆ ಬರುತ್ತಿರುವ ಪ್ರತಿಕ್ರಿಯೆಗಳು ಸಮಾಧಾನ ತಂದುಕೊಟ್ಟಿವೆ. ನಿರ್ಮಾಪಕರ ಮುಖದಲ್ಲಿನ ತೃಪ್ತಿ ನಿರ್ದೇಶಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಾಳೆಗಳು `ಪಾರಿಜಾತ~ದ ಬಗ್ಗೆ ಇನ್ನೂ ಹಸನಾಗಿರುವ ನಿರೀಕ್ಷೆ ಅವರದ್ದು.

`ಮೊದಲ ವಾರಕ್ಕಿಂತಲೂ ಎರಡನೇ ವಾರಕ್ಕೆ ಥಿಯೇಟರ್‌ಗಳ ಸಂಖ್ಯೆ ಹೆಚ್ಚಿದೆ. ಪ್ರೇಕ್ಷಕರೂ ಹೆಚ್ಚುತ್ತಿದ್ದಾರೆ~ ಎನ್ನುವುದು ದಿಗಂತ್ ಕಂಡುಕೊಂಡಿರುವ ಸತ್ಯ. `ಸಿನಿಮಾಕ್ಕೆ ಮಾಡಿರುವ ಪ್ರಚಾರ ಕಡಿಮೆಯಿದ್ದರೂ, ಗೆಲುವು ಸಂಭ್ರಮಿಸುವಂತಿದೆ~ ಎನ್ನುವ ಅನಿಸಿಕೆ ಐಂದ್ರಿತಾ ಅವರದ್ದು.

ಪಾರಿಜಾತ ಪುಷ್ಪ ಘಮಘಮಿಸುತಿದೆ ಎಂದು ಚಿತ್ರತಂಡ ಹೇಳಿಕೊಳ್ಳಲು ಏರ್ಪಡಿಸಿದ್ದ ಸಂತೋಷಕೂಟದಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ, ತಾರೆಯರಾದ ಪದ್ಮಜಾ ರಾವ್, ರಘು ಮುಖರ್ಜಿ, ರಚಿತಾ ಗೌಡ ಮುಂತಾದವರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.