ADVERTISEMENT

ಹೊಸ ಪ್ರೇಮದ ಪರಿಯ...

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST
ಹೊಸ ಪ್ರೇಮದ ಪರಿಯ...
ಹೊಸ ಪ್ರೇಮದ ಪರಿಯ...   

`ಪರಿ~ಗೆ ಪರಿಕರಗಳು ಹೇಗಿರಬೇಕು ಅಂತ ಎಂ.ಎಸ್.ಸತ್ಯು ಎ-ಫೋರ್ ಷೀಟ್‌ನಲ್ಲಿ ಸ್ಕೆಚ್ ಹಾಕ್ತಾ ತೋರಿಸ್ತಾ ಇದ್ರು. ಅಲ್ಲೆಲ್ಲೋ ಬೆಟ್ಟದ ಮಡಿಲಿನೊಳಗೆ ನಾಯಕ ನಾಯಕಿ ರಮಿಸುತ್ತಿದ್ದರು. ಡೊಳ್ಳು ಕಟ್ಟಿಕೊಂಡ ನರ್ತಕರು ಅಲ್ಲಲ್ಲಿ ಹೆಜ್ಜೆ ಹಾಕುತ್ತಿದ್ದರು.
ಇತ್ತ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಿದ್ದರು.... ಖಾಲಿ ತಟ್ಟೆ ತಿನ್ನುತ್ತಿದ್ದೀರಾ? ಇನ್ನೊಂಚೂರು ಹಾಕಿಸ್ಕೊಳ್ಳಿ ಅಂತ ಅಲ್ಯಾರೋ ಊಟಕ್ಕೆ ಒತ್ತಾಯಿಸಿದ್ದರು. ಪಾತ್ರಧಾರಿಯೊಬ್ಬರಿಗೆ ಗಡ್ಡ ಅಂಟಿಸುತ್ತಿದ್ದ ಮೇಕಪ್‌ಮ್ಯಾನ್...~-  ಹೀಗೆ, `ಪರಿ~ ಚಿತ್ರದ ಚಿತ್ರೀಕರಣದ ತುಣುಕುಗಳನ್ನು ಚಿತ್ರತಂಡ ತೆರೆಯ ಮೇಲೆ ತೋರಿಸಿತು, ಸುದ್ದಿಗೋಷ್ಠಿಯ ಕೊನೆಯಲ್ಲಿ.

ಆರಂಭದಲ್ಲಿ ಗಾಯಕಿ ಸಮನ್ವಿತಾ ಮತ್ತು ಸಂಗೀತ ನಿರ್ದೇಶಕ ವೀರಸಮರ್ಥ, `ಮಿನುಗುತಿವೆ ಎದೆಯೊಳಗೆ~ ಅಂತ ಸುಶ್ರಾವ್ಯವಾಗಿ ಹಾಡಿ ಉಳಿದವರ ಮಾತಿಗೆ ಅನುವು ಮಾಡಿಕೊಟ್ಟರು.
 
`2006ರಲ್ಲಿ `ಅಕ್ಕ~ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಕಾದಂಬರಿ ಸ್ಪರ್ಧೆಯಲ್ಲಿ  ಪ್ರಶಸ್ತಿ ಪಡೆದ `ಭಾರದ್ವಾಜ್~ ಕಾದಂಬರಿಯೇ ಈ `ಪರಿ `. ಈ ಕಾದಂಬರಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದು ಬಹಳವೇ ಕಷ್ಟವಾಗಿತ್ತು.

ಕೊನೆಗೂ ಚಿತ್ರೀಕರಣ ಮುಗಿದು ಈಗ ಎಡಿಟಿಂಗ್ ಹಂತಕ್ಕೆ ಬಂದಿದೆ. ಹಾಡುಗಳನ್ನು ನಾನೇ ಬರೆದಿದ್ದೇನೆ. ಸಂಗೀತ ನಿರ್ದೇಶನವೂ ಚೆನ್ನಾಗಿ ಮೂಡಿ ಬಂದಿದೆ. ಐದು ಪ್ರಕಾರದ ಸಂಗೀತಗಳನ್ನು ಅಳವಡಿಸಲಾಗಿದೆ. ಒಂದು ಹಾಡು ಕ್ಲಾಸಿಕಲ್‌ನಲ್ಲಿದೆ~ ಎಂದು ಚುಟುಕು ಮಾಹಿತಿ ಕೊಟ್ಟ ನಿರ್ದೇಶಕ ಸುಧೀರ್ ಅತ್ತಾವರ ಹೆಚ್ಚಿನ ಮಾಹಿತಿಗೆ ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರಿಗೆ ಮೈಕು ವರ್ಗಾಯಿಸಿದರು.

`ಲಂಬಾಣಿಯವರು ಸಂಕ್ರಾಂತಿ ದಿನ ಹಾಡುವ ಹಾಡುಗಳನ್ನೇ ಒಂದು ಹಾಡಿನಲ್ಲಿ ಬಳಸಿಕೊಂಡಿದ್ದೇವೆ. ಲಂಬಾಣಿ ತಂಡವನ್ನು ಸ್ಟುಡಿಯೋಗೆ ಕರೆಸಿ ಸಂಕ್ರಾಂತಿಯಂದು ಹಾಡುವ ಎಲ್ಲಾ ಹಾಡುಗಳನ್ನು ಹಾಡಿ ಎಂದು ಹಾಡಿಸಿದೆವು. ಅವರು ಲೋ ಪಿಚ್‌ನಲ್ಲಿ ಹಾಡುತ್ತಾರಾದ್ದರಿಂದ ಅವುಗಳಲ್ಲಿ ಆಯ್ದ ಹಾಡಿನ ಧಾಟಿಯೊಂದನ್ನು ಅನುಕರಿಸಿ ಬೇರೆ ಗಾಯಕರಿಂದ ಹಾಡಿಸಿದೆವು. ಮತ್ತೆ ಇನ್ನೊಂದು ಹಾಡು `ಮುಗಿಲಿನ ಮಾತು ಮುಸಲಧಾರೆ~ ಕ್ಲಾಸಿಕಲ್‌ನಲ್ಲಿದೆ~ ಎಂದರು.

ಹಾಡಿ ತೋರಿಸಬಹುದೇ? ಎಂದಿದ್ದಕ್ಕೆ ಹಾಡಿಯೂ ತೋರಿಸಿದರು. ಇದು ಭಾವಗೀತೆ ಧಾಟಿಯಲ್ಲಿ ಇರುವುದಲ್ಲವೇ? ಎಂದಿದ್ದಕ್ಕೆ- ಇಲ್ಲಾ, ಇದು ಫ್ಯೂಶನ್ ಎಂದರು. ಹೀಗೆ.. ಇದಲ್ಲ ಅದು. ಅದಲ್ಲ ಇದು.. ಅದು ಕೂಡ. ಇದು ಕೂಡ. ಒಟ್ಟಿನಲ್ಲಿ ವೀರಸಮರ್ಥರ ಮಾತಿನ ಫ್ಯೂಶನ್ ಮುಗಿಯಿತು.

ನಿರ್ದೇಶಕ ಅತ್ತಾವರ ತಮ್ಮ ಚೊಚ್ಚಲ ಸಿನೆಮಾ ಯಾವ ನೆಲೆಯಲ್ಲಿ ನಿಲ್ಲುತ್ತದೆ ಎನ್ನುವುದನ್ನು ಬಿಟ್ಟುಕೊಡಲೇ ಇಲ್ಲ. ಕಲಾತ್ಮಕ/ ಕಮರ್ಷಿಯಲ್? ಎಂದು ಕೇಳಿದ್ದಕ್ಕೆ ಟೈಟಾನಿಕ್ ಇತ್ಯಾದಿ ಇಂಗ್ಲಿಷ್ ಚಿತ್ರಗಳ ದೃಶ್ಯಗಳನ್ನು ಉದಾಹರಿಸುತ್ತಾ `ಕಲಾತ್ಮಕವೂ ಕಮರ್ಷಿಯಲ್ಲೂ...~ ಹೌದು/ ಅಲ್ಲ, ಅಲ್ಲ/ ಹೌದು ಅಂತ ಹೇಳುತ್ತಲೇ ಇದ್ದರು.

ನಿರ್ಮಾಪಕರಲ್ಲೊಬ್ಬರಾದ ಎಂ. ಚಂದ್ರ, `ನಾವು ನಾಲ್ಕೂ ಜನ ನಿರ್ಮಾಪಕರು ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಹದಿನೆಂಟು ವರ್ಷಗಳ ನಮ್ಮ ಸ್ನೇಹವನ್ನು ಈ ಚಿತ್ರದ ಮೂಲಕ ಪ್ರೂವ್ ಮಾಡ್ತಿದ್ದೇವೆ. ಆಫೀಸ್ ಕೆಲಸದೊಂದಿಗೆ `ಪರಿ~ ನಿರ್ಮಾಣದಲ್ಲಿ ಇಂಚಿಂಚಾಗಿ ತೊಡಗಿಕೊಂಡಿದ್ದೇವೆ~ ಎಂದು ಸಂತೋಷ ಹಂಚಿಕೊಂಡರು.

ನಾಯಕಿ ಸ್ಮಿತಾ, `ಇಡೀ ಚಿತ್ರದ ಶೂಟಿಂಗ್ ಒಂದು ಕವಿತೆಯ ಹರಿವಿನಂತಿತ್ತು~ ಎಂದು ಕೊಂಡಾಡಿದರು. ನಾಯಕ ನಾಗಕಿರಣ್, ಇನ್ನೊಬ್ಬ ನಾಯಕಿ ಹರ್ಷಿಕಾ ಪೂಣಚ್ಚ, ಛಾಯಾಗ್ರಾಹಕ ಅನಂತ್ ಅರಸ್, ನಿರ್ಮಾಪಕರಾದ ತ್ರಿವಿಕ್ರಮ್ ಬೆಳ್ತಂಗಡಿ, ದಿವಿಜಾ, ಮೋಗನ್, ನಿತ್ಯಾ, ಸಂಕಲನಕಾರ ವಿದ್ಯಾಧರ್ ಶೆಟ್ಟಿ ಅಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.