ಜಾಹೀರಾತಿಗಾಗಿ ಹದಿನಾಲ್ಕನೇ ವಯಸ್ಸಿಗೆ ಬಣ್ಣ ಹಚ್ಚಿದ ಚೆಲುವೆ ಪ್ರಜ್ವಲ್ ಪೂವಯ್ಯ. ಜಾಹೀರಾತಿಗೆ ಪೋಸ್ ನೀಡುತ್ತಲೇ ನಟನೆಯ ಸೆಳೆತಕ್ಕೂ ಒಳಗಾದ ಪ್ರಜ್ವಲ್ – ಕೆಲವು ಕಾಲ ಮಾಡೆಲಿಂಗ್ ಮತ್ತು ನಟನೆ ಎರಡನ್ನೂ ತೂಗಿಸಿಕೊಂಡು ಬಂದವರು. ಅವರೀಗ ಪೂರ್ಣವಾಗಿ ಸಿನಿಮಾಗಳಲ್ಲಿ ಆಸಕ್ತರು.
ಮೂಲತಃ ಕೊಡಗಿನ ಶ್ರೀಮಂಗಲದವರಾದ ಪ್ರಜ್ವಲ್‌ಗೆ ಮಂಗಳೂರಿನ ನಂಟು ಹೆಚ್ಚು. ಮಿಲಿಟರಿಯಲ್ಲಿದ್ದ ತಂದೆ ಮಂಗಳೂರಿನಲ್ಲಿ ಉದ್ದಿಮೆ ಆರಂಭಿಸಿ ಅಲ್ಲೇ ನೆಲೆಸಿದರು. ಹಾಗಾಗಿ ಪ್ರಜ್ವಲ್ ಬೆಳೆದು ಓದಿದ್ದೆಲ್ಲ ಅಲ್ಲಿಯೇ.
‘ಒಂಬತ್ತನೇ ತರಗತಿಯಿಂದ ಎಂಜಿನಿಯರಿಂಗ್‌ವರೆಗೆ ಮುದ್ರಣ ಮಾಧ್ಯಮದ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. ಕಾಲೇಜಿನಲ್ಲಿ ಎಲ್ಲರೂ ನನ್ನನ್ನು ಸೆಲೆಬ್ರಿಟಿಯಂತೆ ನೋಡುತ್ತಿದ್ದರು. ಇದೊಂದು ರೀತಿ ಮುಜುಗರ ಎನಿಸಿದರೂ, ಒಳಗೊಂದು ರೀತಿಯಲ್ಲಿ ಖುಷಿಯಾಗುತ್ತಿತ್ತು. ಕಾಲೇಜಿನಲ್ಲಿ ಕೆಲವರು, ನೋಡಲು ಹಿರೋಯಿನ್ ಥರ ಕಾಣಿಸ್ತೀಯಾ. ನೀನ್ಯಾಕೆ ಸಿನಿಮಾಗಳಿಗೆ ಪ್ರಯತ್ನಿಸಬಾರದು ಎಂದು ಹೇಳುತ್ತಿದ್ದರು’ ಎಂದು ಪ್ರಜ್ವಲ್ ತಮ್ಮ ಗೆಳೆಯರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ.
ಸಿನಿಮಾದಲ್ಲೂ ನಟಿಸುವ ಆಸೆಯಿದ್ದರೂ, ಅದಕ್ಕಾಗಿ ಕುಟುಂಬದವರನ್ನು ಒಪ್ಪಿಸುವುದು ಸವಾಲಾಗಿತ್ತು. ‘ನಮ್ಮ ಕುಟುಂಬದ ಯಾರೊಬ್ಬರೂ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಇಲ್ಲ. ಆಳುಕಿನಿಂದಲೇ ಅಪ್ಪ–ಅಮ್ಮನಲ್ಲಿ ನನ್ನ ಆಸೆ ಹೇಳಿಕೊಂಡೆ. ಇಬ್ಬರೂ ಒಪ್ಪಿಕೊಂಡರು. ಬೆಂಗಳೂರಿಗೆ ಬಂದು ನೆಲೆಸಿದರು ಕೂಡ’ ಎಂದು ಕುಟುಂಬದಿಂದ ಒಪ್ಪಿಗೆ ಪಡೆದ ರೀತಿಯನ್ನು ಹೇಳುತ್ತಾರೆ.
ಕಲಿಯುತ್ತ ಕಲಿಯುತ್ತ ನಟನೆ
ವಿದ್ಯಾಭ್ಯಾಸದ ಮಧ್ಯೆಯೇ ಮುಂಬೈಗೆ ತೆರಳಿದ ಪ್ರಜ್ವಲ್, ನಟನೆಯ ತರಬೇತಿ ಪಡೆದರು. ಚಿಕ್ಕಂದಿನಿಂದಲೇ ಭರತನಾಟ್ಯ ಗೊತ್ತಿತ್ತು. ಅದರೊಂದಿಗೆ ವೆಸ್ಟರ್ನ್ ಮತ್ತು ಫಿಲ್ಮಿ ಡ್ಯಾನ್ಸ್ ಕಲಿತರು. ಮುಂಬೈನಿಂದ ವಾಪಸಾದ ಅವರಿಗೆ ಮೊದಲು ಅವಕಾಶ ಸಿಕ್ಕಿದ್ದು ‘ಪಾತರಗಿತ್ತಿ’ ಚಿತ್ರದಲ್ಲಿ. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡರೂ, ಪ್ರೇಕ್ಷಕರ ಮನದಲ್ಲಿ ಉಳಿಯಲಿಲ್ಲ. ನಂತರ, ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ದಲ್ಲಿ ನಟಿಸಿದರು.
ಹಾಸ್ಯಭರಿತ ಈ ಚಿತ್ರ ಕರಾವಳಿ ಭಾಗದಲ್ಲಿ ಶತದಿನ ಪೂರೈಸುವ ಜತೆಗೆ, ಹೆಸರನ್ನೂ ತಂದುಕೊಟ್ಟಿತು. ಅದಾದ ಬಳಿಕ ‘ಆದರ್ಶ’ ಮತ್ತು ‘ಅಸ್ತಿತ್ವ’ ಚಿತ್ರಗಳಲ್ಲಿ ಅವಕಾಶ ದೊರೆಯಿತು. ಈ ಪೈಕಿ ‘ಅಸ್ತಿತ್ವ’ ಇಂದು ಬಿಡುಗಡೆಯಾಗುತ್ತದೆ.
ಬದುಕಿಗೆ ಹತ್ತಿರವಾದ ‘ಅಸ್ತಿತ್ವ’
‘ಅಸ್ತಿತ್ವ’ ಪ್ರಜ್ವಲ್ ನಟನೆಯ ಮೂರನೇ ಸಿನಿಮಾ. ಮುಗ್ಧ ಕಾಲೇಜು ಹುಡುಗಿಯಾಗಿ ಈ ಚಿತ್ರದಲ್ಲವರು ಕಾಣಿಸಿಕೊಂಡಿದ್ದಾರೆ. ‘ಮನುಷ್ಯನ ನಿಜ ವ್ಯಕ್ತಿತ್ವ ಚಿತ್ರದಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪ್ರೀತಿಸುವ ಹುಡುಗ ಮತ್ತು ಪ್ರಾಣಸ್ನೇಹಿತ ಇವರಿಬ್ಬರಲ್ಲಿ ಯಾರು ಹೆಚ್ಚು ಎನ್ನುವುದು ಕಥೆಯ ತಿರುಳು’ ಎಂದು ತಮ್ಮ ಪಾತ್ರದ ಕುರಿತು ಹೇಳುತ್ತಾರೆ.
‘ಪ್ರತಿಯೊಬ್ಬರೂ ತಮ್ಮನ್ನು ಸಾಚಾ ಎಂದು ತೋರಿಸಿಕೊಳ್ಳುತ್ತಾರೆ. ಆದರೆ, ಅವರ ನಿಜಮುಖ ಬೇರೆಯೇ ಇರುತ್ತದೆ. ಇವೆರಡೂ ಮುಖಗಳ ಅಸ್ತಿತ್ವ ಉಳಿಸಿಕೊಳ್ಳಲು ಮನುಷ್ಯರು ಒಂದಲ್ಲ ಒಂದು ರೀತಿ ಹೋರಾಡುತ್ತಿರುತ್ತಾರೆ. ಇಂತಹದ್ದೊಂದು ಎಳೆ ಇಟ್ಟುಕೊಂಡು ನಮ್ಮ ಚಿತ್ರ ಸಾಗುತ್ತದೆ. ಮೊದಲಿನಿಂದ ಕಡೆಯವರೆಗೆ ಕುರ್ಚಿ ಬಿಟ್ಟು ಅಲುಗಾಡದಂತೆ ನೋಡಿಸಿಕೊಳ್ಳುವ ಚಿತ್ರ ಇದು’ ಎಂದು ಪ್ರಜ್ವಲ್ ಹೇಳುತ್ತಾರೆ.
ಪ್ರಜ್ವಲ್ ‘ಅಸ್ತಿತ್ವ’ ಚಿತ್ರದ ನಾಯಕಿಯಾಗಿ ಆಯ್ಕೆಯಾದ ಬಗೆಯೂ ಆಸಕ್ತಿಕರವಾಗಿದೆ. ‘ಆಡಿಷನ್‌ನ್‌ಗೆಂದು ಹೋದಾಗ ನಿರ್ದೇಶಕರು ಡೈಲಾಗ್ ಕೊಟ್ಟು ಹೀಗೆ ಅಭಿನಯಿಸಿ ಎಂದು ಕೇಳಲಿಲ್ಲ. ಬದಲಿಗೆ ಪಾತ್ರಕ್ಕೆ ಬೇಕಾದ ಕಾಸ್ಟ್ಯೂಮ್ ಮತ್ತು ಮೇಕಪ್ ಹಾಕಿಸಿ ಎರಡು ಪುಟಗಳ ಡೈಲಾಗ್ ಕೊಟ್ಟು ಹೇಳಿಸಿದರು. ವಾರದ ಬಳಿಕ ನಿರ್ದೇಶಕರು ನೀವು ನಾಯಕಿಯಾಗಿ ಆಯ್ಕೆಯಾಗಿದ್ದೀರಿ ಎಂದು ಹೇಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ’ ಎಂದವರು ನೆನಪಿಸಿಕೊಳ್ಳುತ್ತಾರೆ.
ರಾಣಿ ಪಾತ್ರದ ಕನಸು
ಪ್ರಜ್ವಲ್‌ಗೆ ರಾಣಿಯ ಪಾತ್ರದಲ್ಲಿ ನಟಿಸುವುದು ಬಲು ಇಷ್ಟವಂತೆ. ‘ರಾಣಿಯ ಪಾತ್ರವೊಂದು ಸಿಕ್ಕರೆ ಖಂಡಿತಾ ಬಿಡಲಾರೆ. ಜತೆಗೆ, ಹುಚ್ಚಿಯಂತಹ ಸವಾಲಿನ ಪಾತ್ರವನ್ನೂ ಮಾಡಬೇಕು’ ಎನ್ನುತ್ತಾರೆ.
ಅಗತ್ಯ ಬಿದ್ದರೆ ಮಸಾಲೆ ಪಾತ್ರಗಳಲ್ಲೂ ನಟಿಸಲು ಸೈ ಎನ್ನುವ ಅವರು, ತಮಗೇ ತಾವೇ ಒಂದು ಲಕ್ಷ್ಮಣರೇಖೆಯನ್ನೂ ಹಾಕಿಕೊಂಡಿದ್ದಾರೆ. ‘ಮಸಾಲೆ ಪಾತ್ರಗಳಲ್ಲಿ ವಲ್ಗಾರಿಟಿ ಹೆಚ್ಚಾಗಿರಬಾರದು. ನೋಡುಗರಿಗೆ ಮುಜುಗರ ತರಬಾರದು. ಹಾಗಿದ್ದರೆ ಮಾತ್ರ ನಟಿಸುವೆ’ ಎನ್ನುವ ಚೌಕಟ್ಟದು.
‘ತಿಂಗಳುಗಟ್ಟಲೆ ಕಷ್ಟಪಟ್ಟು ಕೆಲವೇ ದಿನ ಮಿಂಚುವ ಅಥವಾ ವಾಶ್ ಔಟ್ ಆಗುವ ಕ್ಷೇತ್ರ ಇದು. ಇಲ್ಲಿ ಪ್ರತಿಭೆ ಮತ್ತು ಶ್ರಮದ ಜತೆಗೆ ಅದೃಷ್ಟವೂ ಇರಬೇಕು’ ಎಂದು ಚಿತ್ರರಂಗವನ್ನು ಬಣ್ಣಿಸುವ ಅವರು, ಪ್ರಸ್ತುತ ಗಡ್ಡ ವಿಜಿಯ ‘ವಾಜಿ’ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.