ADVERTISEMENT

‘ಚೈತ್ರ’ ಚಿತ್ರ ಚಿತ್ತಾರ

ಡಿ.ಎಂ.ಕುರ್ಕೆ ಪ್ರಶಾಂತ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

‘ನಿಮಗೆ ನಮ್ಮ ಚಿತ್ರದಲ್ಲಿ ಅವಕಾಶ ಕೊಡ್ತೇನೆ, ನಟಿಸ್ತೀರ ಅಂತ ನಿರ್ದೇಶಕರು ಫೋನ್ ಮಾಡಿ ಕೇಳಿದ್ರು. ಇಲ್ಲ, ನನಗೆ ನಟನೆ ಬರೊಲ್ಲ ಅಂತ ಹೇಳ್ದೆ. ನಿಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವ ಪಾತ್ರ ಕೊಡುತ್ತೇನೆ, ಒಮ್ಮೆ ಚಿತ್ರದ ಕಥೆ ಕೇಳಿ ಅಂದರು. ಸ್ಟೋರಿ ಕೇಳಿದ ಮೇಲೆ ಒಪ್ಪಿಕೊಂಡೆ. ನಾನು ನಡೆಸಿಕೊಡುವ ಕಾರ್ಯಕ್ರಮ ನೋಡಿಯೇ ನಿರ್ದೇಶಕರು ಫೋನ್ ಮಾಡಿದ್ದು...’ ನಗುವರಳಿಸಿಕೊಂಡು ಮೊದಲ ಚಿತ್ರಕ್ಕೆ ಸಿಕ್ಕ ಅವಕಾಶದ ಬಗ್ಗೆ ಹೇಳಿದರು ಚೈತ್ರಾ ಷಣ್ಮುಖ.

ಯು2 ಕನ್ನಡ ವಾಹಿನಿಯ ‘ಬ್ರೇಕ್‌ಫಾಸ್ಟ್ ಬಾತ್’ ಕಾರ್ಯಕ್ರಮದ ನಿರೂಪಕಿ ಚೈತ್ರಾ, ‘13 ಡೇಸ್ ಆಫ್ಟರ್‌ ಡೆತ್’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ನಟಿಯಾಗುವೆ ಎಂದುಕೊಳ್ಳದಿದ್ದ ಅವರು ಆ ಪೋಷಾಕು ತೊಟ್ಟಿದ್ದು ಆಕಸ್ಮಿಕವಾಗಿ. ಅವರಿಗೆ ನಿರ್ದೇಶಕ ಉಮೇಶ್ ಬೀದರ್ ತಮ್ಮ ‘13 ಡೇಸ್ ಆಫ್ಟರ್‌ ಡೆತ್’ ಚಿತ್ರದ ಮೂಲಕ ಬಣ್ಣದ ಸಖ್ಯ ದೊರೆಕಿಸಿಕೊಟ್ಟವರು. 

ಸದ್ಯ ಅರ್ಥಶಾಸ್ತ್ರ ವಿಷಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಚೈತ್ರಾ, ಮೂಲತಃ ಸಕಲೇಶಪುರದವರು. ಅಲ್ಲಿಯೇ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಸಂಗ ನಡೆದಿದ್ದು. ನಂತರದ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದ ಅವರಿಗೆ ಬಾಲ್ಯದ ಕನಸು ಕೈಗೂಡಿದ್ದು ಬಿ.ಎ. ವ್ಯಾಸಂಗದ ಸಂದರ್ಭದಲ್ಲಿ. ‘ನಾನು ತುಂಬಾ ಮಾತನಾಡುವ ಹುಡುಗಿ, ನಿರೂಪಕಿಯಾಗುವ ಆಸೆ ಬಾಲ್ಯದಿಂದಲೇ ಇತ್ತು. ಬಿ.ಎ. ಅಂತಿಮ ಹಂತದಲ್ಲಿರುವಾಗ ಯು2 ವಾಹಿನಿ ಸೇರಿದೆ.

ಖಂಡಿತಾ ಚಿತ್ರರಂಗದಲ್ಲಿ ತೊಡಗುವ ಮನಸ್ಸು, ಆಲೋಚನೆ ಇರಲಿಲ್ಲ’ ಎಂದು ಚಿತ್ರರಂಗ ಪ್ರವೇಶಕ್ಕೂ ಹಿಂದಿನ ಬದುಕಿನಲ್ಲಿ ತಾವು ನಿರ್ವಹಿಸುತ್ತಿದ್ದ ಪಾತ್ರಗಳನ್ನು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಈ ಮೊದಲು ‘ತರ್‍ಲೆ ನನ್ಮಕ್ಕಳು’ ಚಿತ್ರಕ್ಕೆ ಅವಕಾಶ ಬಂದಿತ್ತಂತೆ, ಆದರೆ ಶಿಕ್ಷಣದ ಕಾರಣ ಆ ಅವಕಾಶವನ್ನು ನಿರಾಕರಿಸಿದ್ದರಂತೆ. ತಮ್ಮ ವ್ಯಕ್ತಿತ್ವಕ್ಕೂ ಮತ್ತು ‘13 ಡೇಸ್ ಆಫ್ಟರ್‌ ಡೆತ್’ ಚಿತ್ರದಲ್ಲಿನ ಪಾತ್ರಕ್ಕೂ ಪೂರ್ಣ ವ್ಯತ್ಯಾಸವಿದೆ ಎನ್ನುವುದು ಅವರ ಮಾತು.

ಚಿತ್ರದಲ್ಲಿ ಅವರದ್ದು ಮಧ್ಯಮ ವರ್ಗದ ಪಕ್ಕಾ ಸಾಂಪ್ರದಾಯಿಕ ಬೀದರ್ ಹುಡುಗಿಯ ಪಾತ್ರ. ನಿರೂಪಕಿಯಾಗಿ ಬಬ್ಲಿ ನಡೆಯಿಂದ ಗಮನಸೆಳೆದಿರುವ ಅವರ ನೈಜ ವ್ಯಕ್ತಿತ್ವವೂ ಬಬ್ಲಿಯಾಗಿ ಇದೆಯಂತೆ. ‘ಮೊದಲ ನಟನೆಯಲ್ಲಿಯೇ ಸವಾಲಿನ ಪಾತ್ರ ಸಿಕ್ಕಿದೆ. ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರವಿದು. ಈ ಪಾತ್ರವನ್ನು ನಟನೆಯ ವೃತ್ತಿ ಜೀವನಕ್ಕೆ ಸಮರ್ಥವಾಗಿ ಬಳಸುವೆ’ ಎಂದು ಚಿತ್ರಜಗತ್ತಿನ ಆಸೆಯನ್ನು ಮನದುಂಬಿ ಹೇಳುತ್ತಾರೆ. 

ವಿದ್ಯಾರ್ಥಿಯಾಗಿರುವ ಅವರು ಚಿತ್ರರಂಗದಲ್ಲಿ ಕಲಿಯುವ ಆಸೆಯ ಜೊತೆಗೆ ಅವಕಾಶ ಮತ್ತು ಸಮಯ ಸಿಕ್ಕರೆ ಥಿಯೇಟರ್‌ನಲ್ಲೂ ಕೆಲಸ  ಮಾಡುವ ಆಸೆಯುಳ್ಳವರು. ‘ವಿದ್ಯಾಭ್ಯಾಸದಲ್ಲಿ ನಾನು ಬ್ರಿಲಿಯಂಟ್ ಸ್ಟೂಡೆಂಡ್ ಅಲ್ಲ, ಆದರೆ ಫಸ್ಟ್ ಕ್ಲಾಸ್‌ಗೆ ಮೋಸವಿಲ್ಲ’. ಅರ್ಥಶಾಸ್ತ್ರ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಅವರು ಈಗಾಗಲೇ ಸ್ವ ಉದ್ಯಮದಲ್ಲೂ ತೊಡಗಿದ್ದಾರೆ. ವಿಜಯನಗರದಲ್ಲಿ ಬುಟಿಕ್ ಒಂದನ್ನು (ಬಟ್ಟೆ ಡಿಸೈನ್ ಮಾಡುವುದು) ನಡೆಸುತ್ತಿದ್ದಾರೆ. ನನ್ನ ಕಾರ್ಯಕ್ರಮಕ್ಕೆ ಜನರಿಂದ ಒಳ್ಳೆಯ ಪ್ರಶಂಸೆ ಸಿಕ್ಕಿದೆ. ನಿರೂಪಣೆಯಿಂದಲೇ ಭಾಷೆಯ ಮೇಲೆ ಹಿಡಿತ ಸಿಕ್ಕಿದ್ದು’ ಎಂದು ನಿರೂಪಕಿಯಾಗಿ ಕಲಿತದ್ದನ್ನು ನೆನೆಯುತ್ತಾರೆ. ಚಿತ್ರರಂಗದಲ್ಲೂ ಭವಿಷ್ಯ ಕಂಡುಕೊಳ್ಳುವ ವಿಶ್ವಾಸದ ಮಾತನ್ನಾಡುತ್ತಾರೆ. 

  ‘ಸಾವಿನ ನಂತರದ 13 ದಿನಗಳಲ್ಲಿ ನಡೆಯುವ ಘಟನೆಯೇ ಚಿತ್ರದ ಕಥೆ. 13ನೇ ದಿನಕ್ಕೆ ಕ್ಲೈಮ್ಯಾಕ್ಸ್. ದೇಹದೊಳಗೆ ಒಂದು ಶಕ್ತಿ (ಆತ್ಮ) ಇದ್ದು, ಆ ಶಕ್ತಿ ದೇಹದಿಂದ ಬೇರ್ಪಟ್ಟರೆ ಮತ್ತೊಂದು ದೇಹ ಸೇರಬೇಕು. ಇಲ್ಲವಾದರೆ ಪ್ರೇತಾತ್ಮವಾಗುತ್ತದೆ. ಈ ಆತ್ಮ–ಪರಮಾತ್ಮ– ಪ್ರೇತಾತ್ಮನ ಸುತ್ತ ಸುತ್ತುವ ಕಥೆ ಇದೆ. ಜನವರಿಯಿಂದ ಚಿತ್ರೀಕರಣ ಆರಂಭ. ನನ್ನ ನಟನೆಯ ಬಗ್ಗೆ ನಾನು ಸ್ವವಿಮರ್ಶೆ ಮಾಡಿಕೊಳ್ಳಲು ಚಿತ್ರ ಅವಕಾಶ ಮಾಡಿಕೊಟ್ಟಿದೆ.

ಮೊದಲ ಚಿತ್ರದಲ್ಲಿನ ನಟನೆ ನನಗೆ ತೃಪ್ತಿ ಕೊಟ್ಟರೆ ಮಾತ್ರ ನಾನು ನಟನೆಯಲ್ಲಿ ಮುಂದುವರೆಯುತ್ತೇನೆ. ನಿರ್ದೇಶಕ ಉಮೇಶ್ ಮೂಲತಃ ಆಯುರ್ವೇದ ವೈದ್ಯರಾಗಿದ್ದು ಚಿತ್ರಕೌಶಲಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಾಗುವ ನಿರ್ದೇಶಕರ ನಿರೀಕ್ಷೆಗೂ ಮೀರಿ ಅಭಿನಯ ಕಲೆಯನ್ನು ಆವಾಹಿಸಿಕೊಳ್ಳುತ್ತೇನೆ’ ಎಂದು ಚಿತ್ರ–ಪಾತ್ರ ಮತ್ತು ನಿರ್ದೇಶಕರನ್ನು ಮೆಚ್ಚುತ್ತಾರೆ ಚೈತ್ರಾ.

ADVERTISEMENT

–ಡಿ.ಎಂ.ಕುರ್ಕೆ ಪ್ರಶಾಂತ
ಚಿತ್ರ: ಕೆ.ಎನ್‌. ನಾಗೇಶ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.