ADVERTISEMENT

‘ಟೀ ಅಂಗಡಿ’ಯಲ್ಲಿ ತಾರಾಮೇಳ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಶ್ರೀನಗರ ಕಿಟ್ಟಿ, ಅಜಯ್‌ರಾವ್‌, ನೆನಪಿರಲಿ ಪ್ರೇಮ್‌, ಯೋಗೇಶ್‌, ಪ್ರಜ್ವಲ್‌ ದೇವರಾಜ್‌, ಹೀಗೆ ಸ್ಯಾಂಡಲ್‌ವುಡ್‌ನ ಐವರು ನಾಯಕ ನಟರು ‘ಮಾಮು ಟೀ ಅಂಗಡಿ’ಯ ಅತಿಥಿಗಳು. ಈ ಅತಿಥಿಗಳು ಈಗಾಗಲೇ ಟೀ ಅಂಗಡಿಯಲ್ಲಿ ಕುಳಿತು ಮಾತನಾಡಿದ್ದಾರೆ.

ಹಾಡನ್ನೂ ಹಾಡಿದ್ದಾರೆ. ಬಾಲಿವುಡ್‌ನಲ್ಲಿ ಮನೆಮಾತಾದ ಕನ್ನಡ ಮೂಲದ ನೃತ್ಯ ಸಂಯೋಜಕ ಟೆರೆನ್ಸ್‌ ಲೂಯಿಸ್‌ ಸಹ ಒಂದು ದಿನದ ಮಟ್ಟಿಗೆ ಅಂಗಡಿಗೆ ಭೇಟಿ ನೀಡಿದ್ದರು. ಇಷ್ಟಕ್ಕೇ ಟೀ ಅಂಗಡಿಯ ಮಾಲೀಕರು ತೃಪ್ತರಾಗಿಲ್ಲ. ಅತಿಥಿಗಳ ಪಟ್ಟಿ ಬೆಳೆಸುವ ಇರಾದೆ ಅವರದು. ಅವರ ಅಂಗಡಿಗೆ ದೂರದ ಬಾಲಿವುಡ್‌ನಿಂದಲೂ ಅತಿಥಿಗಳು ಬರಲಿದ್ದಾರೆ. ಕಾಜೋಲ್‌ ಅಥವಾ ಬಿಪಾಶಾ ಬಸು, ಇಬ್ಬರಲ್ಲಿ ಯಾರು ‘ಮಾಮು ಟೀ ಅಂಗಡಿ’ಯಲ್ಲಿ ಕುಳಿತು ಟೀ ಹೀರಲಿದ್ದಾರೋ ನೋಡಬೇಕು.

ನಿರ್ದೇಶಕ ಪರಮೇಶ್‌ ತಮ್ಮ ಚೊಚ್ಚಿಲ ಚಿತ್ರದಲ್ಲಿ ತಾರಾಬಳಗಕ್ಕಿಂತಲೂ ಅತಿಥಿ ಕಲಾವಿದರನ್ನೇ ಹೆಚ್ಚು ತೆರೆ ಮೇಲೆ ತರುವ ಉತ್ಸಾಹ ಹೊಂದಿದವರಂತೆ ಕಂಡುಬಂದರು. ವರುಣ್‌, ರಿತೇಶ್‌, ಮಹೇಶ್‌ ಮತ್ತು ವಿಶ್ವ ಎಂಬ ನಾಲ್ವರು ಹೊಸ ಹುಡುಗರಿಗೆ ನಾಯಕರ ಪಟ್ಟ ನೀಡಿರುವ ಪರಮೇಶ್‌, ಟೀ ಅಂಗಡಿಯೊಂದರಲ್ಲಿ ಕಾಲಕಳೆಯುವ ಹುಡುಗರ ಬದುಕು, ಪ್ರೀತಿಯನ್ನು ಚಿತ್ರದಲ್ಲಿ ಹೊಸೆದಿದ್ದಾರಂತೆ. ನಾಯಕ ನಟರಲ್ಲಿ ಒಬ್ಬರಾದ ವರುಣ್‌ಗೆ ನೃತ್ಯ ಗುರುವಾಗಿರುವ ಟೆರೆನ್ಸ್‌ ಲೂಯಿಸ್‌ ಅವರ ಗುಣಗಾನಕ್ಕೇ ಸುದ್ದಿಗೋಷ್ಠಿಯ ಹೆಚ್ಚು ಸಮಯ ಮೀಸಲಾಗಿತ್ತು.

ಅತಿಥಿ ಪಾತ್ರಗಳು ಕೆಲವು ಸನ್ನಿವೇಶಗಳಿಗೆ ಬಂದು ಹೋದರೆ ಶ್ರೀನಗರ ಕಿಟ್ಟಿ ಚಿತ್ರದುದ್ದಕ್ಕೂ ಇರಲಿದ್ದಾರೆ. ಕಥೆಯನ್ನು ನಿರೂಪಿಸುವ ಹೊಣೆಗಾರಿಕೆಯನ್ನು ಕಿಟ್ಟಿ ನಿರ್ವಹಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದಕ್ಕೆ ಬಾಲಿವುಡ್‌ನ ನಟಿಯೇ ಆಗಬೇಕು.

ಹೀಗಾಗಿ ಕಾಜೋಲ್‌ ಅಥವಾ ಬಿಪಾಶಾ ಬಸು ಅವರನ್ನು ಕರೆತರುವ ಗುರಿ ನಮ್ಮದು ಎಂದರು ಪರಮೇಶ್‌. ವಿಶೇಷವೆಂದರೆ, ಈ ಕಲಾವಿದರೆಲ್ಲರೂ ಚಿಕ್ಕಾಸೂ ಸಂಭಾವನೆಯಿಲ್ಲದೆ ನಟಿಸುತ್ತಿದ್ದಾರೆ. ಅಂದಹಾಗೆ, ಟೀ ಅಂಗಡಿಯ ಮಾಲೀಕ ‘ಮಾಮು’ ಹೊನ್ನವಳ್ಳಿ ಕೃಷ್ಣ.

ಮಂಗಳೂರು ಮೂಲದವರಾದರೂ ಮುಂಬೈನಲ್ಲಿ ಹುಟ್ಟಿ ಬೆಳೆದ ಟೆರೆನ್ಸ್‌ ‘ಲಗಾನ್‌’ ಸೇರಿದಂತೆ ಹಲವು ಚಿತ್ರಗಳಿಗೆ ನೃತ್ಯ ಸಂಯೋಜಿಸಿದವರು. ಹಿಂದಿ ಚಿತ್ರರಂಗಕ್ಕೂ ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಒಂದು ದಿನದಲ್ಲಿ ಹಲವು ಸನ್ನಿವೇಶ ಚಿತ್ರೀಕರಿಸಿದರೆ, ಅಲ್ಲಿ ಒಂದು ದಿನದಲ್ಲಿ ಒಂದು ದೃಶ್ಯ ಸೆರೆ ಹಿಡಿದರೆ ಹೆಚ್ಚು. ನಿಜಕ್ಕೂ ಬಾಲಿವುಡ್‌ ಇಲ್ಲಿನ ಸಿನಿಮಾ ಮಂದಿಯ ಬದ್ಧತೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದರು ಅವರು.

ನಟಿ ಸಂಗೀತಾ ಭಟ್‌, ಛಾಯಾಗ್ರಾಹಕ ನಂದಕುಮಾರ್‌, ನೃತ್ಯ ಸಂಯೋಜಕ ಮಹೇಶ್‌, ಕಾರ್ಯಕಾರಿ ನಿರ್ಮಾಪಕ ರಘುನಾಥ್‌ ಟೀ ಅಂಗಡಿಯ ಅನುಭವಗಳನ್ನು ಮೆಲುಕು ಹಾಕಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.