2009ರಲ್ಲಿ ಬಿಡುಗಡೆಯಾದ ‘3 ಈಡಿಯಟ್ಸ್’ ಚಿತ್ರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ನಟಿಸಿದ್ದ ಅಮೀರ್ ಖಾನ್ ಅವರು ಮೊನ್ನೆಯಷ್ಟೇ 49ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಅರ್ಧ ವಯಸ್ಸಿನ ನಟರಿಗೂ ಇಲ್ಲದಷ್ಟು ಬೇಡಿಕೆ ಅವರಿಗಿದೆ. ಇಷ್ಟೆಲ್ಲಾ ಅವಕಾಶಗಳು ಬರಲು ಅಭಿನಯ, ಪ್ರತಿಭೆಯ ಜತೆಗೆ ಅಮೀರ್ ಅವರ ರೂಪದ ಪಾತ್ರ ದೊಡ್ಡದು.
ಐವತ್ತಕ್ಕೆ ಕಾಲಿಟ್ಟರೂ ತಮ್ಮ ಆರೋಗ್ಯದ ಗುಟ್ಟಿನ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ನಾನು ಏನು ಹೇಳಲಿ. ನನ್ನ ವಂಶವಾಹಿಯಲ್ಲೇ ಇದಕ್ಕೆ ಬೇಕಾದ ಸಾಕಷ್ಟು ಪೂರಕ ಅಂಶಗಳಿವೆ. ಉಳಿದಂತೆ ನನ್ನ ದೇಹಕ್ಕೆ ಒಗ್ಗುವ ಹಾಗೂ ಉತ್ತಮ ಆಹಾರವನ್ನು ಮಾತ್ರ ಸೇವಿಸುತ್ತೇನೆ. ನಾನೇನು ತಿನ್ನುತ್ತೇನೆ ಎಂಬುದರ ಅರಿವು ಸದಾ ನನಗಿರುತ್ತದೆ’ ಎಂದು ಉತ್ತರಿಸಿದ್ದಾರೆ.
ಒಪ್ಪಿಕೊಳ್ಳುವ ಪ್ರತಿಯೊಂದು ಪಾತ್ರಕ್ಕೂ ಹೊಂದಿಕೊಳ್ಳಬೇಕೆಂಬ ಮನೋಭಾವ ಹೊಂದಿರುವ ಅಮೀರ್ ಖಾನ್, ಅದಕ್ಕಾಗಿ ಸಾಕಷ್ಟು ಕಷ್ಟಪಡುತ್ತಾರಂತೆ. 2008ರಲ್ಲಿ ಬಿಡುಗಡೆಯಾದ ‘ಘಜಿನಿ’ ಚಿತ್ರಕ್ಕಾಗಿ ಅವರು ‘8 ಪ್ಯಾಕ್ ಆ್ಯಬ್ಸ್’ ದೇಹವನ್ನು ರೂಪಿಸಿಕೊಂಡಿದ್ದರು. ‘ಧೂಮ್ 3’ ಚಿತ್ರಕ್ಕಾಗಿಯೂ ಅವರು ಅದೇ ರೀತಿಯಲ್ಲಿ ಜಿಮ್‌ನಲ್ಲಿ ಬೆವರು ಹರಿಸಿದ್ದು ಸುದ್ದಿಯಾಗಿತ್ತು.
ಕಳೆದ 25 ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ನಿರಂತರವಾಗಿ ಮನರಂಜಿಸುತ್ತಿರುವ ಅಮೀರ್, ದಿನಗಳೆದಂತೆ ದೇಹಾಕಾರವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂಬ ಗುಣವಿಶೇಷ ಪಡೆದಿರುವ ಅಮೀರ್ ಖಾನ್, ತಾವು ನಿರ್ವಹಿಸುವ ಪಾತ್ರ, ತಾವು ಮಾಡುವ ಕೆಲಸದಂತೆಯೇ ತಮ್ಮ ಫಿಟ್‌ನೆಸ್ ಕುರಿತೂ ಶಿಸ್ತನ್ನು ಬಿಟ್ಟುಕೊಟ್ಟವರಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.