ADVERTISEMENT

‘ಲೂಸಿಯಾ’ ತುಲಾಭಾರ!

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST
ನೀನಾಸಂ ಸತೀಶ್
ನೀನಾಸಂ ಸತೀಶ್   

ದು ನಿಜವಾದ ಅಗ್ನಿಪರೀಕ್ಷೆ ಎಂಬ ಭಾವದೊಂದಿಗೆ ಎದುರಾಯಿತು ‘ಲೂಸಿಯಾ’ ಚಿತ್ರತಂಡ. ಬಿಡುಗಡೆಗೂ ಮುನ್ನವೇ ಹಲವು ಬಗೆಯಲ್ಲಿ ಚಿತ್ರಕ್ಕೆ ಗೆಲುವು ದಕ್ಕಿದೆ. ಪ್ರೇಕ್ಷಕರೇ ನಿರ್ಮಾಪಕರಾಗುವ ಹೊಸ ಪ್ರಯೋಗಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿ ‘ಲೂಸಿಯಾ’ ಸೃಷ್ಟಿಯಾದರೆ, ಲಂಡನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಿಟ್ಟಿಸಿದ್ದು ಮತ್ತೊಂದು ದೊಡ್ಡ ಗೆಲುವು. ವಿಶ್ವದ ಗಮನವನ್ನು ಕನ್ನಡ ಚಿತ್ರರಂಗದತ್ತ ಸೆಳೆದ ಖ್ಯಾತಿಯೂ ಚಿತ್ರದ ಹೆಗಲೇರಿದೆ.

ಈಗಾಗಲೇ ‘ಲೂಸಿಯಾ’ ಸಿನಿಮಾ ಪ್ರಸಾರದ ಸ್ಯಾಟಲೈಟ್ ಹಕ್ಕುಗಳೂ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ಕರ್ನಾಟಕವಲ್ಲದೆ, ದೇಶದ ವಿವಿಧ ರಾಜ್ಯಗಳಲ್ಲಿ ಚಿತ್ರ ತೆರೆಕಾಣುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಿಂದ ರೀಮೇಕ್ ಹಕ್ಕಿಗೆ ಬೇಡಿಕೆಯೂ ಬಂದಿದೆ. ಆದರೆ ಇದಾವುದೂ ಗೆಲುವಲ್ಲ. ಕನ್ನಡ ಪ್ರೇಕ್ಷಕ ಸಿನಿಮಾವನ್ನು ಪ್ರೀತಿಯಿಂದ ಸ್ವೀಕರಿಸಿದರೆ ಮಾತ್ರ ಅದು ಚಿತ್ರಕ್ಕೆ ಸಿಗುವ ನಿಜವಾದ ಗೆಲುವು ಎನ್ನುತ್ತಿದೆ ಚಿತ್ರತಂಡ.

ಕನ್ನಡ ಸಿನಿಮಾಗಳೆಂದರೆ ಮೂಗುಮುರಿಯುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ‘ಲೂಸಿಯಾ’ಕ್ಕೆ ಬಹು ಬೇಡಿಕೆ ಬಂದಿದೆ ಎಂಬುದು ಚಿತ್ರತಂಡದ ಹೆಮ್ಮೆ. ಪಿವಿಆರ್ ಕರ್ನಾಟಕ ಮಾತ್ರವಲ್ಲ, ಬಾಂಬೆ, ಹೈದರಾಬಾದ್, ದೆಹಲಿ, ಅಹಮದಾಬಾದ್, ಕೊಚ್ಚಿನ್, ಸೂರತ್ ಸೇರಿದಂತೆ ಸುಮಾರು ಹತ್ತು ನಗರಗಳಲ್ಲಿ ಚಿತ್ರವನ್ನು ತೆರೆಗಾಣಿಸುತ್ತಿದೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಗಿಟ್ಟಿಸಿರುವ ಚಿತ್ರ, 70--80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ವಿವಿಧ ದೇಶಗಳ ಚಿತ್ರೋತ್ಸವಗಳಿಂದ ಆಹ್ವಾನ ಬರುತ್ತಿದ್ದರೂ ನಿರ್ದೇಶಕ ಪವನ್, ಚಿತ್ರವನ್ನು ಬಿಡುಗಡೆ ಮಾಡಿದ ಬಳಿಕವಷ್ಟೇ ಅತ್ತ ತಲೆ ಹಾಕಲು ನಿರ್ಧರಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರೂ ಇದು ಅಪ್ಪಟ ಕನ್ನಡ ಚಿತ್ರ ಎನ್ನುತ್ತಾರೆ ಪವನ್. ಬಹುತೇಕ ತಾಂತ್ರಿಕ ಕೆಲಸಗಳಿಗೆ ಚೆನ್ನೈಗೆ ತೆರಳುವ ಅನಿವಾರ್ಯತೆ ಚಿತ್ರರಂಗದ್ದು. ಆದರೂ ಡಿಟಿಎಸ್, ಡಿಐನಂಥ ಪ್ರಮುಖ ಕಾರ್ಯಗಳನ್ನು ಬೆಂಗಳೂರಿನಲ್ಲಿಯೇ ಮಾಡಲಾಗಿದೆ. ಸಕಲವೂ ಬೆಂಗಳೂರಿನಲ್ಲಿಯೇ ತಯಾರಾಗುವ ನಿಟ್ಟಿನಲ್ಲಿ ಸುಧಾರಣೆ ಆಗಬೇಕು ಎನ್ನುವುದು ಅವರ ಆಸೆ.

ಛಾಯಾಗ್ರಹಣ, ಸಂಗೀತ, ಗಾಯನ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಥಳೀಯ ಹೊಸ ಪ್ರತಿಭೆಗಳನ್ನು ಬಳಸಿಕೊಂಡಿದ್ದಾರೆ ಅವರು. ‘ಲೂಸಿಯಾ’ ಇತಿಹಾಸ ಸೃಷ್ಟಿಸುತ್ತದೆ ಎಂಬ ಅತಿ ಆತ್ಮವಿಶ್ವಾಸವಿಲ್ಲ. ಆದರೆ ಒಳ್ಳೆ ಸಿನಿಮಾ ಎಂದು ಜನ ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ನಟ ನೀನಾಸಂ ಸತೀಶ್ ಅವರದು.

ಹಾಡುಗಳ ಗೆಲುವಿನ ಖುಷಿಯಲ್ಲಿದ್ದರು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ಪವನ್ ಹೊರತಾಗಿ ಚಿತ್ರತಂಡದಲ್ಲಿ ಸಿನಿಮಾ ನೋಡಿದ ಏಕೈಕ ವ್ಯಕ್ತಿಯಾದ ಅವರಿಗೆ ಕನ್ನಡದಲ್ಲಿ ಇಂಥ ಪ್ರಯೋಗ ಕನ್ನಡದಲ್ಲಿ ಇದೇ ಮೊದಲು ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.