ADVERTISEMENT

ಚುಟುಚುಟು ನಟಿ ಆಶಿಕಾಗೆ ಕುದುರಿದ ಬೇಡಿಕೆ

ಕೆ.ಎಂ.ಸಂತೋಷ್‌ ಕುಮಾರ್‌
Published 9 ಮಾರ್ಚ್ 2020, 19:30 IST
Last Updated 9 ಮಾರ್ಚ್ 2020, 19:30 IST
ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌   
""

ಆಶಿಕಾ ರಂಗನಾಥ್‌ ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿರುವ ನಟಿಯರಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಿದ್ದಾರೆ. ನಟ ಶರಣ್‌ ಜತೆಗೆ ರ್‍ಯಾಂಬೊ 2 ಚಿತ್ರದಲ್ಲಿ ‘ಚುಟುಚುಟು’ ಹಾಡಿಗೆ ಭರ್ಜರಿ ಸ್ಟೆಪ್‌ ಹಾಕಿ, ಸಿನಿ ರಸಿಕರ ಮನ ಸೆಳೆದಿದ್ದ ಈ ನಟಿಗೆಆ ನಂತರದಲ್ಲಿ ಅವಕಾಶಗಳು ಹೆಚ್ಚುತ್ತಿವೆ. 2020 ವರ್ಷವಂತೂಆಶಿಕಾ ಪಾಲಿಗೆಭರಪೂರ ಫಸಲು ತಂದುಕೊಡುವ ನಿರೀಕ್ಷೆ ಮೂಡಿಸಿದೆ.

ಶರಣ್‌ ಜತೆಗೆ ‘ಅವತಾರ ಪುರುಷ’ ಮತ್ತು ಹೊಸ ನಟ ಇಶಾನ್‌ ಜತೆಗೆ ‘ರೇಮೊ’ ಚಿತ್ರಗಳಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರಗಳು ಬಹುತೇಕ ಪೂರ್ಣಗೊಂಡಿವೆ. ಒಂದೆರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಶರಣ್‌– ಆಶಿಕಾ ಜೋಡಿ‘ರ‍್ಯಾಂಬೊ2’ರಲ್ಲಿ ಮಾಡಿದ ಮೋಡಿಯನ್ನು ‘ಅವತಾರಪುರುಷ’ದಲ್ಲಿ ಮುಂದುವರಿಸುವ ನಿರೀಕ್ಷೆ ಹುಟ್ಟುಹಾಕಿದೆ.

ಇನ್ನು ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರದ ಹಾಡೊಂದಕ್ಕೆಆಶಿಕಾ ಭರ್ಜರಿ ಸ್ಟೆಪ್‌ ಹಾಕಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಭರಾಟೆ’ಯ ಯಶಸ್ಸಿನ ಅಲೆಯಲ್ಲಿರುವ ನಟ ಶ್ರೀಮುರಳಿ ಅವರ ಮುಂದಿನ ಚಿತ್ರ ‘ಮದಗಜ’ದಲ್ಲೂ ಆಶಿಕಾನೇ ನಾಯಕಿ.

ADVERTISEMENT

ಎಸ್‌. ಮಹೇಶ್‌ ಕುಮಾರ್‌ ನಿರ್ದೇಶಿಸುತ್ತಿರುವ ‘ಮದಗಜ’ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೇ ಎನ್ನುವ ಕುತೂಹಲವನ್ನು ಚಿತ್ರತಂಡ ಮೊದಲಿನಿಂದಲೂ ಕಾಯ್ದುಕೊಂಡಿತ್ತು. ಆರಂಭದಲ್ಲಿ ರಚಿತಾರಾಮ್‌, ಅನುಪಮಾ ಪರಮೇಶ್ವರನ್‌, ಶ್ರೀನಿಧಿ ಶೆಟ್ಟಿ, ಆಶಿಕಾ ರಂಗನಾಥ್‌ ಅವರ ಹೆಸರು ಚರ್ಚೆಯ ಮುನ್ನೆಲೆಯಲ್ಲಿದ್ದವು. ಪೋಸ್ಟರ್‌ ನೋಡಿನಾಯಕಿ ಯಾರೆನ್ನುವುದನ್ನುಊಹಿಸಲು ಅವಕಾಶವನ್ನು ಅಭಿಮಾನಿಗಳಿಗೆ ನೀಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದರು.ಅಂತಿಮವಾಗಿ ‘ಮದಗಜ’ನಿಗೆ ಮದನಿಕೆಯಾಗುವ ಅವಕಾಶಆಶಿಕಾಗೆ ದಕ್ಕಿತು. ಈ ಚಿತ್ರದ ಚಿತ್ರೀಕರಣ ಇದೇ ತಿಂಗಳ ಕೊನೆಯಲ್ಲಿ ಶುರುವಾಗಲಿದೆ. ‘ಲಾಂಗ್‌ ಶೆಡ್ಯೂಲ್‌ ಚಿತ್ರೀಕರಣಕ್ಕೆ ನಾನು ಅಣಿಯಾಗಬೇಕಿದೆ’ ಎನ್ನುತ್ತಾರೆ ಆಶಿಕಾ ಕೂಡ.

ಇದಲ್ಲದೇ ‘ಗರುಡ’ ಮತ್ತು ‘ರಂಗಮಂದಿರ’ ಚಿತ್ರಗಳಲ್ಲೂ ಆಶಿಕಾ ನಟಿಸುತ್ತಿದ್ದಾರೆ. ‘ಈ ಎರಡು ಸಿನಿಮಾಗಳು ನಾನು ಈ ಹಿಂದೆಯೇ ಅಂದರೆ, ಮೂರು ವರ್ಷಗಳ ಹಿಂದೆಯೇ ಒಪ್ಪಿಕೊಂಡಿದ್ದೆ. ‘ಗರುಡ’ದಲ್ಲಿ ಪುಟ್ಟ ಪಾತ್ರವಾದರೂ ಸಾಕಷ್ಟು ಪರಿಣಾಮ ಬೀರುವ ಮತ್ತು ತುಂಬಾ ಮಹತ್ವವಿರುವ ಪಾತ್ರ. ಹಾಗೆಯೇ ‘ರಂಗಮಂದಿರ’ದಲ್ಲೂ ಒಳ್ಳೆಯ ಸ್ಕೋಪ್‌ ಇರುವ ಪಾತ್ರ. ಇಷ್ಟೊತ್ತಿಗೆ ಆ ಎರಡು ಸಿನಿಮಾಗಳು ಪೂರ್ಣವಾಗಬೇಕಿತ್ತು. ಚಿತ್ರಗಳನ್ನು ನಿರ್ದೇಶಕರು ಮತ್ತು ನಿರ್ಮಾಪಕರು ಇನ್ನೂ ಕೈಗೆತ್ತಿಕೊಂಡಿಲ್ಲ. ಆದರೆ, ಅವರು ಈ ವರ್ಷವೇ ಈ ಚಿತ್ರಗಳನ್ನು ಪೂರ್ಣಗೊಳಿಸಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಯಾವುದಕ್ಕೂ ಕಾದು ನೋಡಬೇಕು’ ಎನ್ನುತ್ತಾರೆ ಆಶಿಕಾ.

‘ನಾನು ನಟಿಸುತ್ತಿರುವ ಐದು ಚಿತ್ರಗಳಲ್ಲಿ ರೇಮೊ, ಅವತಾರಪುರುಷ ಹಾಗೂ ಕೋಟಿಗೊಬ್ಬ3 ಚಿತ್ರಗಳು ಈ ವರ್ಷವೇ ತೆರೆಕಾಣುವುದು ಖಚಿತ. ತೆಲುಗಿನಿಂದಲೂ ಸ್ಕ್ರಿ‍ಪ್ಟ್‌ಗಳು ಬರುತ್ತಿವೆ. ಒಳ್ಳೆಯ ನಿರ್ದೇಶಕರು ಮತ್ತು ನಿರ್ಮಾಪಕರು ಹಾಗೂಒಳ್ಳೆಯ ಪ್ರೊಡಕ್ಷನ್ನಿನ ಬ್ಯಾನರ್‌ಗಳಿಂದ ದೊಡ್ಡ ಬಜೆಟ್‌ ಚಿತ್ರಗಳ ಅವಕಾಶ ಬಂದರೆ ಮಾತ್ರ ಒಪ್ಪಿಕೊಳ್ಳಲಿದ್ದೇನೆ. ಸದ್ಯಕ್ಕೆ ಬೇರೆ ಭಾಷೆಗಳಿಗೆ ಹಾರುವ ಆಸೆಗಳು ಇಲ್ಲ. ಬಾಲಿವುಡ್‌ಗೆ ಹೋಗುವ ಆಸೆಯಂತೂ ಇಲ್ಲವೇ ಇಲ್ಲ. ಕನ್ನಡದಲ್ಲೇ ನೆಲೆಕಂಡುಕೊಳ್ಳುವ ಗುರಿ ನನ್ನದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.