ADVERTISEMENT

ನಾಳೆ ಬೆಂಗಳೂರಿನಲ್ಲಿ ಕನ್ನಡ ಸೇರಿ ವಿವಿಧ ಭಾಷೆಗಳ 45 ಸಿನಿಮಾಗಳು ಬಿಡುಗಡೆ!

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 13:55 IST
Last Updated 28 ನವೆಂಬರ್ 2019, 13:55 IST
‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್‌
‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್‌   

ಬೆಂಗಳೂರು:ಕನ್ನಡದ 9 ಸಿನಿಮಾಗಳು ಸೇರಿದಂತೆ ಪರಭಾಷೆಯ ಒಟ್ಟು 45 ಸಿನಿಮಾಗಳು ಶುಕ್ರವಾರ ಬೆಂಗಳೂರಿನಲ್ಲಿ ತೆರೆ ಕಾಣುತ್ತಿವೆ. ಒಂದೇ ವಾರದಲ್ಲಿ ಹತ್ತು ಭಾಷೆಯಲ್ಲಿ ಇಷ್ಟು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಇದೇ ಮೊದಲು.

ಪ್ರಸ್ತುತ ಬೆಂಗಳೂರಿನಲ್ಲಿ 100 ಚಿತ್ರಮಂದಿರಗಳು ಹಾಗೂ 40 ಮಲ್ಟಿಫ್ಲೆಕ್ಸ್‌ಗಳಿವೆ. ‘ಬ್ರಹ್ಮಚಾರಿ’, ‘ದಮಯಂತಿ’, ‘ಮೂಕಜ್ಜಿಯ ಕನಸುಗಳು’, ‘ಮುಂದಿನ ನಿಲ್ದಾಣ’, ‘ರಣಹೇಡಿ’, ‘ರಿವಿಲ್‌’, ‘ಕಿರು ಮಿನ್ಕಣಜ’, ‘ಮಾರ್ಗರೇಟ್‌’ ಹಾಗೂ ‘ನಾನೇ ರಾಜ’ -ತೆರೆ ಕಾಣುತ್ತಿರುವ ಕನ್ನಡ ಸಿನಿಮಾಗಳಾಗಿವೆ.

ಉಳಿದಂತೆ ತೆಲುಗು 8, ಬೆಂಗಾಳಿ ಮತ್ತು ಹಿಂದಿಯ ತಲಾ 6, ಮಲಯಾಳ 4, ತಮಿಳು ಮತ್ತು ಇಂಗ್ಲಿಷ್‌ನ ತಲಾ 3, ಗುಜರಾತಿ, ಮರಾಠಿಯ ತಲಾ 2 ಹಾಗೂ ಪಂಜಾಬಿ, ಭೋಜಪುರಿ ಭಾಷೆಯ ತಲಾ ಒಂದು ಸಿನಿಮಾ ತೆರೆ ಕಾಣುತ್ತಿದೆ. ಬಿಹಾರದಿಂದ ಇಲ್ಲಿಗೆ ವಲಸೆ ಬಂದಿರುವ ಜನರು ಭೋಜಪುರಿ ಸಿನಿಮಾ ವೀಕ್ಷಿಸುತ್ತಾರೆ. ಉದ್ಯಾನ ನಗರಿಯ ಸಿನಿಪ್ರಿಯರಿಗೆ ಈ ವಾರಾಂತ್ಯವು ಹಬ್ಬದ ವಾತಾವರಣ ಸೃಷ್ಟಿಸಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಜಪಾನಿ ಮತ್ತು ಅಸ್ಸಾಂ ಭಾಷೆಯ ಸಿನಿಮಾಗಳೂ ಬೆಂಗಳೂರಿನಲ್ಲಿ ತೆರೆ ಕಾಣುತ್ತಿವೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿರುವ ಸಿನಿಮಾಗಳು ಆಯಾ ವರ್ಷದ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುವುದು ಸರ್ವೇ ಸಾಮಾನ್ಯ.ಆ ವರ್ಷದ ಸಬ್ಸಿಡಿ ಪಡೆಯಲು ನಿರ್ಮಾಪಕರು ಸಿನಿಮಾಗಳ ಬಿಡುಗಡೆಗಾಗಿ ಪೈಪೋಟಿಗೆ ಇಳಿಯುತ್ತಾರೆ.

ಮತ್ತೊಂದೆಡೆ ಪರಭಾಷೆಯ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಕಾಣುತ್ತಿರುವ ಪರಿಣಾಮ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ. ಥಿಯೇಟರ್ ಪಡೆಯಲು ಅನ್ಯಭಾಷೆಯ ಸಿನಿಮಾಗಳೊಟ್ಟಿಗೆ ಪೈಪೋಟಿಗಿಳಿಯುವುದು ಸವಾಲಾಗಿದೆ. ಇನ್ನೊಂದೆಡೆ ಭಾರತೀಯ ಸ್ಪರ್ಧಾ ಆಯೋಗದ ನಿಯಮದನ್ವಯ ಪರಭಾಷೆಯ ಸಿನಿಮಾಗಳು ಇಂತಿಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕು ಎಂಬ ನಿಯಮ ವಿಧಿಸುವ ಅಧಿಕಾರ ಸ್ಥಳೀಯ ಚಲನಚಿತ್ರ ವಾಣಿಜ್ಯ ಮಂಡಳಿಗಳಿಗೆ ಇಲ್ಲ.

2018ನೇ ಸಾಲಿನಡಿ ದೇಶದಲ್ಲಿ ನಿರ್ಮಾಣವಾದ ಸಿನಿಮಾಗಳ ಸಂಖ್ಯೆ 1,776. ಈ ಪೈಕಿ 243 ಸಿನಿಮಾಗಳನ್ನು ನಿರ್ಮಿಸಿದ ಕನ್ನಡ ಚಿತ್ರರಂಗವು ಸಂಖ್ಯೆಯ ದೃಷ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.

ಮೂಲೆಗೆ ಸರಿದ ನಿಯಮಾವಳಿ

ಪ್ರತಿವಾರ ಸಿನಿಮಾಗಳ ಬಿಡುಗಡೆಗೆ ಮಿತಿ ನಿಗದಿಪಡಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಎಂಟು ವರ್ಷದ ಹಿಂದೆ ನಿಯಮಾವಳಿ ರೂಪಿಸಿತ್ತು. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ಸಿನಿಮಾಗಳ ಜ್ಯೇಷ್ಠತೆಯ ಅನುಸಾರ ಬಿಡುಗಡೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಬಹಳಷ್ಟು ನಿರ್ಮಾಪಕರು ತಮಗೆ ಅನುಕೂಲಕರವಾದ ದಿನದಂದು ಚಿತ್ರ ಬಿಡುಗಡೆಗೆ ಮುಂದಾಗುತ್ತಿದ್ದಾರೆ. ಹಾಗಾಗಿ, ಈ ನಿಯಮವು ಮೂಲೆಗೆ ಸರಿದಿದೆ.

‘ಸಿನಿಮಾದ ಶೀರ್ಷಿಕೆಯ ನೋಂದಣಿ ವೇಳೆಯಷ್ಟೇ ನಿರ್ಮಾಪಕರು ಮಂಡಳಿಯನ್ನು ಎಡತಾಡುತ್ತಾರೆ. ನಂತರ ಅವರು ನಮ್ಮ ಸಂಪರ್ಕಕ್ಕೆ ಸಿಗುವುದಿಲ್ಲ. ರಾಜ್ಯದಲ್ಲಿ ಸುಮಾರು 700 ಚಿತ್ರಮಂದಿರಗಳಿವೆ. ಆಯಾ ವಾರ ಬಿಡುಗಡೆಯಾಗುವ ಬಿಗ್‌ಬಜೆಟ್‌ ಸಿನಿಮಾಗಳು ಶೇಕಡ 90ರಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತವೆ. ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಉಳಿದ ಚಿತ್ರಗಳು ಪ್ರದರ್ಶನ ಕಾಣುತ್ತವೆ. ಇದರಿಂದ ಬಹಳಷ್ಟು ನಿರ್ಮಾಪಕರು ನಷ್ಟ ಅನುಭವಿಸುತ್ತಾರೆ’ ಎಂಬುದು ಮಂಡಳಿಯ ಅಧ್ಯಕ್ಷ ಜೈರಾಜ್‌ ಡಿ.ಆರ್‌. ಅವರ ವಿವರಣೆ.

‘ಕನ್ನಡಿಗರಿಗೆ ಯಾವ ಸ್ಥಾನಮಾನ ಲಭಿಸಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಕರ್ನಾಟಕದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಪ್ರಾಧಾನ್ಯ ನೀಡಬೇಕು. ಆಯಾ ರಾಜ್ಯದವರಿಗೆ ಅವರ ಭಾಷೆಯೇ ಪ್ರಧಾನ. ಪರಭಾಷೆಯ ಸಿನಿಮಾಗಳ ಹಾವಳಿಯಿಂದ ಕನ್ನಡಕ್ಕೆ ಅನ್ಯಾಯವಾಗುತ್ತಿರುವುದು ಸ್ಪಷ್ಟ’ ಎಂದು ನಿರ್ದೇಶಕ ಪಿ. ಶೇಷಾದ್ರಿ ಪ್ರತಿಕ್ರಿಯಿಸಿದರು.

‘ಕನ್ನಡ ಭಾಷೆ, ನೆಲಕ್ಕಾಗಿ ನಾವು ಪೈಪೋಟಿ ಮಾಡುತ್ತಿದ್ದೇವೆ. ಈಗ ಸಿನಿಮಾದ ಉಳಿವಿಗೂ ಹೋರಾಟ ಅನಿವಾರ್ಯ. ಕನ್ನಡಿಗರು ಇರುವ ತಮಿಳುನಾಡು, ಆಂಧ್ರಪ್ರದೇಶ, ಮುಂಬೈ ಪ್ರದೇಶಗಳಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ. ಇಂತಹ ಸ್ಥಿತಿಗೆ ನಾವೇ ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.