ದೊಡ್ಡ ಸ್ಟಾರ್‌ಗಳ ಬಹುತೇಕ ಚಿತ್ರಗಳು ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿವೆ. ಹೀಗಾಗಿ ಬೇರೆ ಭಾಷೆಯ ಸ್ಟಾರ್ ನಟರು ಕರ್ನಾಟಕಕ್ಕೆ ಬಂದು ತಮ್ಮ ಸಿನಿಮಾ ಪ್ರಚಾರ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ತಮಿಳು, ತೆಲುಗು, ಮಲಯಾಳ ಚಿತ್ರೋದ್ಯಮದ ಸ್ಟಾರ್‌ಗಳು ಬೆಂಗಳೂರಿನಲ್ಲಿ ಕಡ್ಡಾಯವಾಗಿ ಪ್ರಚಾರ ನಡೆಸುತ್ತಾರೆ ಎಂಬಂತಾಗಿದೆ. ಇದೀಗ ಕನ್ನಡದ ನಟರು ಕೂಡ ಬೇರೆ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡುವ ಪರಿಪಾಟ ಶುರುವಾಗಿದೆ. ‘ಮಾರ್ಟಿನ್’ ಚಿತ್ರತಂಡ ವಿದೇಶಿ ಮಾಧ್ಯಮದವರನ್ನು ಕರೆಸಿ ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಸಿತ್ತು.
ಇದೀಗ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ‘45’ ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ಹೊರ ರಾಜ್ಯಗಳಿಗೆ ಹಾರಿದೆ. ಮಂಗಳವಾರ ಚಿತ್ರತಂಡ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿತು. ಸಂಜೆ ಹೈದರಾಬಾದ್‌ನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಯಿತು. ಬುಧವಾರ (ಏ.16) ಚೆನ್ನೈ ಮತ್ತು ಕೇರಳದ ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದೆ.
ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ಎಂ.ರಮೇಶ್ ರೆಡ್ಡಿ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಟೀಸರ್ ದಕ್ಷಿಣದ ಎಲ್ಲ ಪ್ರಮುಖ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಆಗಸ್ಟ್ 15 ರಂದು ಚಿತ್ರ ತೆರೆ ಕಾಣಲಿದ್ದು, ಈಗಿನಿಂದಲೇ ಪ್ರಚಾರ ಪ್ರಾರಂಭಿಸಿದೆ.
‘45 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಡಬ್ಬಿಂಗ್ ಸೇರಿದಂತೆ ಎಲ್ಲಾ ಕೆಲಸ ಮುಗಿದಿದೆ. ಚಿತ್ರದಲ್ಲಿ ವಿಎಫ್ಎಕ್ಸ್ ಕೆಲಸ ತುಂಬಾ ಇದ್ದು, ಕೆನಡಾದಲ್ಲಿ ಕೆಲಸ ನಡೆಯುತ್ತಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಗ್ರಾಫಿಕ್ ಕೆಲಸ ಮುಗಿಯಲಿದೆ. ಮೊದಲ ನಿರ್ದೇಶನದಲ್ಲೇ ಮಲ್ಟಿಸ್ಟಾರರ್ ಸಿನಿಮಾ ಮಾಡಿದ್ದೇನೆ ಎಂದು ಈಗಲೂ ನಂಬಲಾಗುತ್ತಿಲ್ಲ’ ಎಂದಿದ್ದಾರೆ ಅರ್ಜುನ್ ಜನ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.