ADVERTISEMENT

ಏಡ್ಸ್‌ ವಿರುದ್ಧ ಜಾಗೃತಿ ಕಹಳೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ಮಾನಸಾ
ಮಾನಸಾ   

ಎಚ್‌.ಐ.ವಿ. ಸೋಂಕಿತರು ಮತ್ತು ಏಡ್ಸ್‌ ರೋಗಿಗಳು ಸಮಾಜದ ಅವಜ್ಞೆಗೆ ತುತ್ತಾಗಿದ್ದಾರೆ. ನೆರೆಹೊರೆಯವರ ಅಪಮಾನಕ್ಕೆ ಅಂಜಿ ಜೀವತೆತ್ತವರು ಇದ್ದಾರೆ. ಇದಕ್ಕೆ ಅರಿವಿನ ಕೊರತೆಯೇ ಕಾರಣ. ನಿರ್ದೇಶಕ ರಾಜು ಹಲಗೂರು ‘ಮದರ್‌ ಸವಿತಾ’ ಚಿತ್ರದ ಮೂಲಕ ಜನರಿಗೆ ಈ ರೋಗದ ಬಗ್ಗೆ ತಿಳಿವಳಿಕೆ ಮೂಡಿಸಲು ಹೊರಟಿದ್ದಾರೆ.

ಬಾಲಿವುಡ್‌ನಲ್ಲಿ ಹಲವು ನಟಿಯರು ಎಚ್‌.ಐ.ವಿ. ಸೋಂಕಿತ ಗೃಹಿಣಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಇಂತಹ ಪಾತ್ರ ನಿರ್ವಹಿಸುವಂತೆ ಹಲವು ನಟಿಯರ ಮನೆಗಳನ್ನು ಎಡತಾಕಿದ್ದರಂತೆ ನಿರ್ದೇಶಕರು. ಖ್ಯಾತ ನಟಿಯೊಬ್ಬರಿಗೆ ಚಿತ್ರದ ಕಥೆ ಹೇಳಿದಾಗ ಅಭಿನಯಿಸಲು ತಿರಸ್ಕರಿಸಿದರಂತೆ. ಕೊನೆಗೆ, ಆ ಪಾತ್ರ ನಿರ್ವಹಿಸಲು ಮಾನಸಾ ಒಪ್ಪಿಕೊಂಡರಂತೆ.

‘ಅಸುರಕ್ಷಿತ ಲೈಂಗಿಕತೆಯಿಂದ ಎಚ್.ಐ.ವಿ. ಸೋಂಕು ತಗಲುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುವುದೇ ಚಿತ್ರದ ಮೂಲ ಉದ್ದೇಶ. ಚಿತ್ರ ನಿರ್ಮಾಣಕ್ಕೂ ಮೊದಲು ಸೋಂಕಿತರು, ಲೈಂಗಿಕ ಕಾರ್ಯಕರ್ತೆಯರ ಜೊತೆಗೆ ಮಾತುಕತೆ ನಡೆಸಿ ಅವರ ಅನುಭವದ ಆಧಾರದ ಮೇಲೆ ಚಿತ್ರ ಕಟ್ಟಿಕೊಟ್ಟಿದ್ದೇನೆ’ ಎಂದರು ನಿರ್ದೇಶಕ ರಾಜು.

ADVERTISEMENT

ನಾಯಕ ದೀಪಕ್‌ಗೆ ಇದು ಮೊದಲ ಸಿನಿಮಾ. ಈ ಚಿತ್ರದಲ್ಲಿ ನಟಿಸಲು ನಿರ್ದೇಶಕರು ಕೇಳಿದಾಗ ಅವರ ಮನದಲ್ಲೂ ನಕಾರಾತ್ಮಕ ಚಿಂತನೆಗಳು ಮೂಡಿದವಂತೆ. ‘ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅಂಶಗಳು ಚಿತ್ರದಲ್ಲಿವೆ. ಹಾಗಾಗಿ, ಒಪ್ಪಿಕೊಂಡೆ. ಚಿತ್ರದಲ್ಲಿ ಭಾವನಾತ್ಮಕ ಸಂಬಂಧವೂ ಬೆಸೆದುಕೊಂಡಿದೆ’ ಎಂದರು.

ನಾಯಕಿ ಮಾನಸಾ ಅವರ ಮಾತುಗಳಲ್ಲಿ ದೃಢ ವಿಶ್ವಾಸ ಎದ್ದುಕಾಣುತ್ತಿತ್ತು. ಇಂತಹ ಚಿತ್ರದಲ್ಲಿ ನಟಿಸಿದರೆ ತಮ್ಮ ಮುಂದಿನ ಸಿನಿಮಾ ಪಯಣ ಹೇಗೆಂಬ ಗೊಂದಲದಲ್ಲೂ ಅವರು ಬಿದ್ದಿದ್ದರಂತೆ. ‘ಸಮಾಜಕ್ಕೆ ಅರಿವು ಮೂಡಿಸುವ ಸಿನಿಮಾವಾಗಿದ್ದರಿಂದ ಒಪ್ಪಿಕೊಂಡೆ’ ಎಂದರು ಮಾನಸಾ. ಆಸರೆ ಟ್ರಸ್ಟ್‌ ಮುಖ್ಯಸ್ಥ ಸಂಜೀವ್‌ ಉಡುಪಿ ಅವರ ಮಾತುಗಳಲ್ಲಿ ಸೋಂಕಿತರು ಬದುಕಿನ ಆಶಾಕಿರಣ ಕಂಡುಕೊಳ್ಳುವ ಭರವಸೆ ಇತ್ತು. ‘ನಾನು ಸೋಂಕಿಗೆ ತುತ್ತಾಗಿ ಹದಿನಾರು ವರ್ಷ ಕಳೆದಿವೆ. ಸಮಾಜದಲ್ಲಿ ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಬದುಕಿನಲ್ಲಿ ನಾನು ಸಾಕಷ್ಟು ಅಪಮಾನಕ್ಕೀಡಾಗಿದ್ದೇನೆ. ಎಲ್ಲವನ್ನೂ ಎದುರಿಸಿ ಸೋಂಕಿತರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಜೊತೆಗೆ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿದ್ದೇನೆ’ ಎಂದರು.

ಈಗಾಗಲೇ, ಚಿತ್ರ ಸೆನ್ಸಾರ್‌ ಮಂಡಳಿಯ ಮುಂದೆ ಹೋಗಿದೆ. ಮಂಡಳಿಯಿಂದ ಪ್ರಮಾಣ ಪತ್ರ ಸಿಕ್ಕಿದ ತಕ್ಷಣ ಜನರ ಮುಂದೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.