ADVERTISEMENT

ಯಶಸ್ಸು ಕಂಡಿದ್ದಾರಂತೆ ವಿನಮ್ರ ರಾಜಕಾರಣಿ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
ದಾನಿಶ್ ಸೇಠ್
ದಾನಿಶ್ ಸೇಠ್   

ಕಳೆದ ಶುಕ್ರವಾರದಿಂದ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ವಿನಮ್ರ ರಾಜಕಾರಣಿ ನಾಗರಾಜ್‌ ಅಲಿಯಾಸ್ ನೊಗ್‌ರಾಜ್‌ ಖುಷಿ ಕೊಟ್ಟಿರುವುದು ವೀಕ್ಷಕರಿಗೆ ಮಾತ್ರವೇ ಅಲ್ಲ, ಆತ ನಿರ್ಮಾಪಕರಿಗೂ ಖುಷಿ ತಂದಿದ್ದಾನೆ! ಅಂದರೆ, ಸಿನಿಮಾ ವೀಕ್ಷಿಸಲು ಜನ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ, ಹೂಡಿದ ಬಂಡವಾಳ ವಾಪಸ್ ಬಂದು, ಲಾಭ ಕೂಡ ಸಿಗುವ ಭರವಸೆ ನಿರ್ಮಾಪಕರಲ್ಲಿ ಮೂಡಿದೆ.

‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್‌’ ಚಿತ್ರ ಯಶಸ್ಸು ಕಂಡಿದೆ ಎಂದು ಹೇಳಿಕೊಳ್ಳಲು ನಿರ್ಮಾಪಕರಾದ ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಸುದ್ದಿಗೋಷ್ಠಿ ಕರೆದಿದ್ದರು. ಅವರ ಜೊತೆ ನೊಗ್‌ರಾಜ್‌ ಪಾತ್ರಧಾರಿ ದಾನಿಶ್ ಸೇಠ್, ನಿರ್ದೇಶಕ ಸಾದ್ ಖಾನ್ ಮತ್ತು ನಟ ವಿಜಯ್ ಚೆಂಡೂರ್ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.

‘ಮೊದಲ ಸಿನಿಮಾದಲ್ಲಿ ಯಶಸ್ಸು ಸಿಕ್ಕಿದ್ದು ಸಂತಸ ನೀಡಿದೆ. ವೀಕ್ಷಕರಿಗೆ ಮತ್ತು ನನ್ನನ್ನು ನಂಬಿ ಹಣ ಹೂಡಿದ ನಿರ್ಮಾಪಕರಿಗೆ ಧನ್ಯವಾದ’ ಎಂದರು ದಾನಿಶ್.

ADVERTISEMENT

‘ನೊಗ್‌ರಾಜ್‌ ಸಿನಿಮಾ ಈಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ದಾನಿಶ್ ಅವರು ಕನ್ನಡ ವೀಕ್ಷಕರ ಪಾಲಿಗೆ ಹೊಸಬರೇನೂ ಅಲ್ಲ. ಇಂಟರ್ನೆಟ್‌ ಮೂಲಕ ಅವರು ಪರಿಚಿತರಾಗಿದ್ದರು. ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ನಿರ್ದಿಷ್ಟ ಮೊತ್ತ ಖಂಡಿತ ವಾಪಸ್ ಬರುತ್ತದೆ ಎಂಬ ನಂಬಿಕೆ ನಮಗಿತ್ತು’ ಎಂದರು ರಕ್ಷಿತ್.

ಬೆಂಗಳೂರಿನಲ್ಲಿ ಸಿನಿಮಾ ಹಿಟ್ ಆಗಿದ್ದರೂ, ಉತ್ತರ ಕರ್ನಾಟಕ ಭಾಗದ ಜನ ಇದನ್ನು ಇನ್ನೂ ಸರಿಯಾಗಿ ವೀಕ್ಷಿಸಿಲ್ಲ ಎಂದರು ಪುಷ್ಕರ. ‘ಮಲ್ಟಿಪ್ಲೆಕ್ಸ್‌ಗಳು ಇರುವ ಹುಬ್ಬಳ್ಳಿ, ಕಲಬುರ್ಗಿಯಂತಹ ಊರುಗಳ ಜನ ಈ ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಏಕಪರದೆಯ ಚಿತ್ರ ಮಂದಿರ ಇರುವ ಊರುಗಳಲ್ಲಿ ಜನರ ಸ್ಪಂದನೆ ಅಷ್ಟೊಂದು ಇಲ್ಲ’ ಎಂದು ಪುಷ್ಕರ ಹೇಳಿದರು.

ಸಿನಿಮಾದ ಡಿಜಿಟಲ್‌ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಅದರ ಮೂಲಕ ಸಿನಿಮಾ ಬಂಡವಾಳದ ಶೇಕಡ 70ರಷ್ಟು ಹಣ ವಾಪಸ್ ಸಿಗುತ್ತದೆ. ಟಿ.ವಿ. ಮತ್ತು ಸಾಗರೋತ್ತರ ಹಕ್ಕುಗಳ ಮಾರಾಟದಿಂದ ಇನ್ನಷ್ಟು ಹಣ ಬರುತ್ತದೆ. ಸಿನಿಮಾ ಲಾಭ ಮಾಡಿಕೊಳ್ಳುವುದು ಖಂಡಿತ ಎಂಬ ವಿಶ್ವಾಸದ ಮಾತುಗಳನ್ನು ಆಡಿದರು ಪುಷ್ಕರ.

ಅಮೆರಿಕ, ಬ್ರಿಟನ್, ಐರೋಪ್ಯ ರಾಷ್ಟ್ರಗಳು, ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಸಿನಿಮಾ ಪ್ರದರ್ಶನ ಜನವರಿ 25ರಿಂದ ಆರಂಭವಾಗಲಿದೆ ಎಂದು ಅವರು ತಿಳಿಸಿದರು. ಅಂದಹಾಗೆ, ವಿಜಯ್ ಅವರಿಗೆ ತಮ್ಮ ಮುಂದಿನ ಚಿತ್ರಗಳಲ್ಲೂ ಅವಕಾಶ ಕೊಡುವುದಾಗಿ ಸಾದ್ ಖಾನ್ ಮಾತು ಕೊಟ್ಟಿದ್ದಾರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.