ADVERTISEMENT

ಪ್ರತಿಭಾವಂತರನ್ನು ಗುರ್ತಿಸುವ ಪ್ರತಿಭೆ: ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 12:58 IST
Last Updated 18 ಜನವರಿ 2018, 12:58 IST
ಉಪೇಂದ್ರ,
ಉಪೇಂದ್ರ,   

ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಒಂದಿಷ್ಟು ಹಾಡುಗಳನ್ನು ಬರೆದುಕೊಂಡು, ನಾಟಕ ಬರೆದು ಆಡಿಸುತ್ತಾ ಇದ್ದೆ. ಒಂದು ದಿನ ಕಾಶಿನಾಥ್‌ ಅವರಿಗೆ ನಾನು ಬರೆದಿರುವುದನ್ನು ತೋರಿಸಿದೆ. ಅದನ್ನು ನೋಡಿದ ತಕ್ಷಣ ‘ನಾಳೆ ಬನ್ನಿ. ನನ್ನ ಜತೆ ಕೆಲಸ ಮಾಡಿ’ ಎಂದರು. ನಮ್ಮಿಬ್ಬರ ಒಡನಾಟ ಶುರುವಾಗಿದ್ದು ಹೀಗೆ. ಆಗ ಅವರ ‘ಅನಂತನ ಅವಾಂತರ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ನಾನು ಪ್ರತಿದಿನ ಕಾಲೇಜು ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಒಂದು ದಿನ ಕರೆದು ಒಂದು ಹಾಡು ಬರೆದುಕೊಡುವಂತೆ ಹೇಳಿದರು. ಬರೆದೆ. ನಂತರ ನನ್ನಿಂದ ನಟನೆಯನ್ನೂ ಮಾಡಿಸಿದರು. ನಂತರ ಅವರ ಮನೆಯಲ್ಲಿ ಕಥೆ, ಚಿತ್ರಕಥೆ ಬರೆಯುವ ಕೆಲಸವೆಲ್ಲ ಆರಂಭವಾಯ್ತು.

ಆ ಸಮಯದಲ್ಲಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಪೂರ್ತಿ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿರುವುದಿದೆಯಲ್ಲ, ಅದು ತುಂಬ ದೊಡ್ಡ ವಿಷಯ. ಅವರಿಂದ ಕಲಿಯಲೇಬೇಕಾದ ವಿಷಯ ಏನೆಂದರೆ ಒಂದು ತಾಳ್ಮೆ, ಇನ್ನೊಂದು ಪ್ಲ್ಯಾನಿಂಗ್‌. ತುಂಬಾ ಪ್ಲ್ಯಾನ್‌ ಮಾಡುತ್ತಿದ್ದರು. ಒಂದು ಕಥೆಯ ಮೇಲೆ ಒಂದು ವರ್ಷ ಪ್ಲ್ಯಾನ್‌ ಮಾಡುತ್ತಿದ್ದರು. ಆಮೇಲೆ ಒಂದೂವರೆ ಎರಡು ತಿಂಗಳಿಗೆಲ್ಲ ಚಿತ್ರೀಕರಣ ಮುಗಿಸಿಬಿಡುತ್ತಿದ್ದರು.

ಈಗ ನಾವು ಹಾಲಿವುಡ್‌ನವರು ಹೇಗೆಲ್ಲ ಪ್ಲ್ಯಾನ್‌ ಮಾಡುತ್ತಾರೆ ಎಂದು ಹೇಳುತ್ತೇವಲ್ಲ, ಅಂಥ ಪ್ಲ್ಯಾನಿಂಗ್‌ ಅನ್ನು ಎಂಬತ್ತರ ದಶಕದಲ್ಲಿಯೇ ಮಾಡಿದವರು ಕಾಶಿನಾಥ್‌. ಅದು ನಮಗೆ ತುಂಬ ದೊಡ್ಡ ಪಾಠ. ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಮೂರು ಮೂರು ಕೆಲಸಗಳನ್ನು ಏಕಕಾಲದಲ್ಲಿ ಮಾಡಲು ಅವರಿಗೆ ಸಾಧ್ಯವಾಗಿದ್ದು ಈ ಪ್ಲ್ಯಾನಿಂಗ್‌ನಿಂದಲೇ.

ADVERTISEMENT

‘ಪ್ರತಿಭೆಯನ್ನು ಗುರ್ತಿಸುವುದು ಅತಿದೊಡ್ಡ ಪ್ರತಿಭೆ’ ಎಂದು ಯಾವಾಗಲೂ ಅವರು ಹೇಳುತ್ತಿದ್ದರು. ಅದಕ್ಕೆ ಅವರೇ ಸ್ವತಃ ನಿದರ್ಶನವಾಗಿದ್ದರು. ನಾನು ಅವರ ಜತೆ ಮೂರ್ನಾಲ್ಕು ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ನಿರ್ದೇಶಕ, ನಿರ್ಮಾಪಕ, ನಟ ಅಷ್ಟೇ ಅಲ್ಲದೇ ಸಾಮಾನ್ಯ ಮನುಷ್ಯನಾಗಿಯೂ ಅವರು ಹಲವು ಉದಾತ್ತ ಚಿಂತನೆಗಳನ್ನು ಇಟ್ಟುಕೊಂಡಿದ್ದರು. ಪ್ರತಿಯೊಂದನ್ನು ವಿಶ್ಲೇಷಿಸುತ್ತಿದ್ದರು. ಅಬ್ಸರ್ವೇಷನ್‌, ಅನಲೈಸೇಷನ್‌ ಮತ್ತು ಅಪ್ಲಿಕೇಷನ್‌ ಈ ಮೂರು ಅಂಶಗಳು ತುಂಬ ಮುಖ್ಯ ಎಂದು ಪದೆ ಪದೆ ಹೇಳುತ್ತಿದ್ದರು.

ಈವತ್ತಿಗೂ ಅವರು ಒಂದು ದಂತಕತೆ. ಹೊಸತಾಗಿ ಸಿನಿಮಾ ಮಾಡಬೇಕು ಎಂದು ಚಿತ್ರರಂಗಕ್ಕೆ ಬರುವವರು ಕಾಶಿನಾಥ್‌ ಅವರನ್ನು ಪಠ್ಯಪುಸ್ತಕದ ರೀತಿ ಅಭ್ಯಸಿಸಬೇಕು. ಒಳ್ಳೆಯ ಕಥೆ ಇಟ್ಟುಕೊಂಡು ಯಾರು ಬೇಕಾದರೂ ಸ್ಟಾರ್‌ ಆಗಬಹುದು ಎಂದು ತೋರಿಸಿಕೊಟ್ಟವರು ಅವರು. ಅವರೇ ಕಥೆಗಳನ್ನು ಬರೆದುಕೊಂಡು, ಅವರೇ ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡಿಕೊಂಡು ಸಿನಿಮಾ ಮಾಡಿರುವುದು ಸಾಹಸ.

ಸಿಕ್ಕಿದಾಗಲೆಲ್ಲ ಇಬ್ಬರೂ ಸೇರಿ ಒಂದು ಸಿನಿಮಾ ಮಾಡೋಣ ಎಂದು ಹೇಳುತ್ತಲೇ ಇದ್ದರು. ಅವರೂ ಬ್ಯುಸಿ ಇದ್ದರು, ನಾನೂ ಬ್ಯುಸಿ ಇದ್ದೆ. ಇಬ್ಬರಿಗೂ ಮತ್ತೆ ಒಟ್ಟಿಗೆ ಸೇರಿ ಸಿನಿಮಾ ಮಾಡಬೇಕು ಎಂಬ ಮನಸ್ಸಿತ್ತು. ಕೊನೆಗೂ ಅದು ಸಾಧ್ಯವಾಗಲೇ ಇಲ್ಲ.

ಕಾಶಿನಾಥ್‌ ಸಾವು ನನ್ನ ಜೀವನದಲ್ಲಿಯಂತೂ ತುಂಬ ದೊಡ್ಡ ನಷ್ಟ. ಯಾವುದೇ ವಿಷಯಕ್ಕಾದರೂ ಅವರ ಮಾರ್ಗದರ್ಶನ ತೆಗೆದುಕೊಳ್ಳುತ್ತಿದ್ದೆ, ಚರ್ಚಿಸುತ್ತಿದ್ದೆ. ಅವರು ನಮ್ಮೊಂದಿಗಿಲ್ಲ ಎಂಬುದನ್ನು ಈಗಲೂ ನಂಬಲಾಗುತ್ತಿಲ್ಲ. ನನ್ನ ಮನಸ್ಸಿನಲ್ಲಿ ಅವರು ತಮ್ಮ ವಿಚಾರಗಳ ಮೂಲಕ ಯಾವಾಗಲೂ ಚಿರಂಜೀವಿಯಾಗಿಯೇ ಇರುತ್ತಾರೆ.
-ಉಪೇಂದ್ರ, ನಟ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.