ADVERTISEMENT

‘ಬೆಟ್ಟದ ದಾರಿ’ಯಲ್ಲಿ ಹರಿಯುವ ನೀರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
‘ಬೆಟ್ಟದ ದಾರಿ’ಯಲ್ಲಿ ಹರಿಯುವ ನೀರು
‘ಬೆಟ್ಟದ ದಾರಿ’ಯಲ್ಲಿ ಹರಿಯುವ ನೀರು   

‘ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಒಳ್ಳೆಯ ಕಥೆಯೂ ಇತ್ತು. ನಿರ್ಮಾಪಕರಿಗಾಗಿ ಹುಡುಕುತ್ತಿದ್ದೆ. ನನ್ನ ಕಥೆಯನ್ನು ಕೇಳಿ ಚಂದ್ರಕಲಾ ಮತ್ತು ಮಂಜುನಾಥ್‌ ಎಚ್‌. ನಾಯಕ ಅವರು ಹಣ ಹೂಡಲು ಮುಂದೆ ಬಂದಿದ್ದಾರೆ’ ಹೀಗೆಂದ ಮಾ. ಚಂದ್ರು ಅವರ ಮಾತಿನಲ್ಲಿ ಬಹುದಿನದ ಕನಸೊಂದು ನನಸಾಗುತ್ತಿರುವ ಧನ್ಯತೆಯಿತ್ತು.

ನೀರಿನ ಸಮಸ್ಯೆ ಇಟ್ಟುಕೊಂಡು ಅವರು ಮಗು ಮನಸ್ಸಿಗೆ ಇಷ್ಟವಾಗುವಂಥ ಕಥೆ ಹೆಣೆದಿದ್ದಾರೆ. ‘ಉತ್ತರ ಕರ್ನಾಟಕದ ಕಡೆಗೆ ನೀರಿನ ಸಮಸ್ಯೆ ತುಂಬ ಇದೆ. ಹೀಗೆ ಕುಡಿಯಲೂ ನೀರಿಲ್ಲದೆ ಪರದಾಡುತ್ತಿದ್ದ ಹಳ್ಳಿಯೊಂದರ ಕಥೆ ಇದು. ಸರ್ಕಾರದಿಂದ, ಊರಿನ ಗಣ್ಯರಿಂದ ಸಾಧ್ಯವಾಗದ ಸಮಸ್ಯೆಯೊಂದನ್ನು ಮಕ್ಕಳೇ ಸೇರಿಕೊಂಡು ಹೇಗೆ ಪರಿಹರಿಸುತ್ತಾರೆ ಎನ್ನುವುದುನ್ನು ಈ ಸಿನಿಮಾದಲ್ಲಿ ಹೇಳಹೊರಟಿದ್ದೇನೆ’ ಎಂದು ಅವರು ಕಥನದ ಎಳೆಯನ್ನು ಬಿಚ್ಚಿಟ್ಟರು. ಅಂದ ಹಾಗೆ ಅವರ ಸಿನಿಮಾದ ಹೆಸರು ‘ಬೆಟ್ಟದ ದಾರಿ’. ಇದಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವನ್ನೂ ಮಾ. ಚಂದ್ರು ಅವರೇ ಮಾಡಿದ್ದಾರೆ.

ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ವೀರ ಸಮರ್ಥ್‌ ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್‌ ಮತ್ತು ಕೆ. ಕಲ್ಯಾಣ್‌ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಉಳಿದ ಎರಡು ಹಾಡುಗಳನ್ನು ವಿಜಯ್ ಭರಮಸಾಗರ ರಚಿಸಿದ್ದಾರೆ. ‘ನಾಲ್ಕು ಹಾಡುಗಳಲ್ಲಿ ಒಂದು ಹಾಡು ಹಳ್ಳಿಸೊಗಡಿನಿಂದ ಕೂಡಿದೆ. ಇನ್ನೊಂದು ಮಕ್ಕಳ ನಡುವಿನ ಸ್ನೇಹದ ಕುರಿತಾಗಿರುವ ಹಾಡಿದೆ. ಮಕ್ಕಳ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರುವುದು ಖುಷಿ ನೀಡಿದೆ’ ಎಂದರು ವೀರ ಸಮರ್ಥ್‌.

ADVERTISEMENT

ಈ ಮೊದಲು ‘ಮೂಕಹಕ್ಕಿ’ ಸಿನಿಮಾ ನಿರ್ಮಾಣ ಮಾಡಿ ನಷ್ಟ ಅನುಭವಿಸಿದ್ದ ಚಂದ್ರಕಲಾ ಈ ಚಿತ್ರದ ಮೂಲಕ ಆ ನಷ್ಟವನ್ನು ತುಂಬಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ವಿಜಯಪುರ, ದೊಡ್ಡಬಳ್ಳಾಪುರ, ಬೆಂಗಳೂರಿನಲ್ಲಿ ಮೂವತ್ತು ದಿನಗಳಲ್ಲಿ ಚಿತ್ರೀಕರಿಸಲು ತಂಡ ಯೋಜನೆ ಹಾಕಿಕೊಂಡಿದೆ.

ನಾಗೇಶ ಎಂಬ ಹೊಸ ಪ್ರತಿಭೆಯನ್ನೂ ಈ ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ಹಳ್ಳಿ ಉದ್ಧಾರಕ್ಕಾಗಿ ವಿದ್ಯಾಭ್ಯಾಸ ತಂದುಕೊಳ್ಳುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ನಂದಕುಮಾರ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಿಶಾಂತ್‌ ಟಿ. ರಾಠೋಡ್‌, ಅಂಕಿತ್‌ ನವನಿಧಿ, ಬೇಬಿ ಲಕ್ಷ್ಮೀಶ್ರೀ, ರಂಗಸ್ವಾಮಿ, ರೋಹಿತ್‌ ಗೌಡ, ರಮೇಶ್‌ ಭಟ್‌ ಬ್ಯಾಂಕ್‌ ಜನಾರ್ದನ್‌, ಉಮೇಶ್‌ ತಾರಾಗಣದಲ್ಲಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ನಿರ್ದೇಶಕರ ಯೋಚನೆ.


ಮಾ. ಚಂದ್ರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.