ADVERTISEMENT

ಐಟಿ ಜಗತ್ತಿನ ‘ಪ್ರೇಮ ಯುದ್ಧ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
ಪ್ರಗ್ಯಾ ನಯ್ಯರ್
ಪ್ರಗ್ಯಾ ನಯ್ಯರ್   

ನಟ ವಿನೋದ್‌ ಆಳ್ವಾ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು 80ರ ದಶಕದಲ್ಲಿ. ಕನ್ನಡದ ನೆಲದಿಂದ ಅವರು ತೆಲುಗಿಗೂ ಹೆಜ್ಜೆಇಟ್ಟರು. ಅವಕಾಶ ಸಿಕ್ಕಿದಾಗಲೆಲ್ಲಾ ಕನ್ನಡ ಚಿತ್ರಗಳಲ್ಲೂ ನಟಿಸುತ್ತಿದ್ದರು. ಆದರೆ, ಅವರು ಭದ್ರನೆಲೆಯೂರಿದ್ದು ಮಾತ್ರ ಟಾಲಿವುಡ್‌ನಲ್ಲಿ. ಹಲವು ವರ್ಷಗಳಿಂದ ದೂರವಿದ್ದ ಅವರು ಮತ್ತೆ ‘ಪ್ರೇಮ ಯುದ್ಧ’ ಚಿತ್ರದ ಮೂಲಕ ಚಂದನವನದಲ್ಲಿ ಹೊಸ ಇನ್ಸಿಂಗ್‌ ಆರಂಭಿಸಿದ್ದಾರೆ.

ಈ ಚಿತ್ರ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ತೆಲುಗಿನಲ್ಲಿ ಇದಕ್ಕೆ ‘ಸಮರಂ’ ಎಂದು ಹೆಸರಿಡಲಾಗಿದೆ. ಅಲ್ಲಿಯೂ ವಿನೋದ್‌ ಆಳ್ವಾ ಅವರದ್ದು ಪೊಲೀಸ್‌ ಅಧಿಕಾರಿಯ ಪಾತ್ರ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘1986ರಲ್ಲಿ ಅಬ್ಬಯ್ಯ ನಾಯ್ಡು ಅವರು ನನಗೆ ಕನ್ನಡದಲ್ಲಿ ನಟಿಸಲು ಅವಕಾಶ ನೀಡಿದರು. ಇದರಿಂದ ನಾನು ನಟನಾಗಿ ಬೆಳೆಯಲು ಸಾಧ್ಯವಾಯಿತು’ ಎಂದು ನೆನಪಿನಬುತ್ತಿ ಬಿಚ್ಚಿಟ್ಟರು ವಿನೋದ್‌ ಆಳ್ವಾ.

ADVERTISEMENT

ಖಳನಟ ಸತ್ಯಪ್ರಕಾಶ್‌ ಚಿತ್ರದ ಬಗ್ಗೆ ಮಾಹಿತಿ ನೀಡುವ ಮೊದಲು ವೇದಿಕೆಯಲ್ಲಿ ಹನುಮಾನ್‌ ಚಾಲೀಸಾ ಹೇಳಿದರು. ಚಿತ್ರದಲ್ಲಿ ನಿಮ್ಮ ಪಾತ್ರವೇನು ಎಂಬ ಪ್ರಶ್ನೆಗೆ ‘ನಾನು ಯಾವಾಗಲೂ ವಿಲನ್‌’ ಎಂದು ಚಟಾಕಿ ಹಾರಿಸಿದರು.

‘ಕನ್ನಡ, ಗುಜರಾತಿ, ಭೋಜಪುರಿ, ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದೇನೆ. ಏರ್‌ಪೋರ್ಟ್‌ನಲ್ಲಿ ನನ್ನನ್ನು ನೋಡಿದ ಜನರು ವಿಲನ್‌ ಬರುತ್ತಿದ್ದಾನೆ; ನೋಡಿ ಎನ್ನುತ್ತಾರೆ. ನನ್ನ ಹೆಸರು ಹೇಳಿದರೂ ಅವರು ಕೇಳಲು ಸಿದ್ಧರಿರುವುದಿಲ್ಲ’ ಎಂದರು.

‘ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿತು. ನಾನು ಇಷ್ಟು ದೊಡ್ಡ ನಟನಾಗಿ ಬೆಳೆಯಲು ಎಲ್ಲರ ಸಹಕಾರವಿದೆ. ನನ್ನ ಮಗನ ಸಿನಿಮಾದ ‍ಪ್ರವೇಶವೂ ಚಂದನವನದ ಮೂಲಕವೇ ಆಗಿರುವುದು ಖುಷಿ ಕೊಟ್ಟಿದೆ’ ಎಂದರು.

ಸಾಫ್ಟ್‌ವೇರ್‌ ಜಗತ್ತಿನಲ್ಲಿ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಮಸ್ಯೆ, ಸಂಕಷ್ಟದ ಸುತ್ತ ಕಥೆ ಹೆಣೆಯಲಾಗಿದೆ. ಕಾಮಿಡಿ, ಸಸ್ಪೆನ್ಸ್‌ ಇರುವ ಈ ಚಿತ್ರದ ಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವುದು ಬಷೀರ್‌ ಆಲೂರಿ. ಈಗಾಗಲೇ, ಚಿತ್ರದ ತೆಲುಗು ಅವತರಣಿಕೆಯ ಶೂಟಿಂಗ್‌ ಆರಂಭವಾಗಿದೆ. ಮಡಿಕೇರಿ, ಬೆಂಗಳೂರು, ಹೈದರಾಬಾದ್‌ನಲ್ಲಿ ಉಳಿದ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಸಾಗರ್‌ ಈ ಚಿತ್ರದ ನಾಯಕ. ಅವರದ್ದು ಸಾಫ್ಟ್‌ವೇರ್ ಉದ್ಯೋಗಿಯ ಪಾತ್ರ. ನಾಯಕಿ ಪ್ರಗ್ಯಾ ನಯ್ಯರ್ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಲೋಕೇಶ್‌ ಚಿತ್ರದಲ್ಲಿ ಸಾಫ್ಟ್‌ವೇರ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾಗಿ ನಟಿಸುತ್ತಿದ್ದಾರೆ. ಸುಮನ್, ಸಹನಾ, ಜಹೀದಾ ತಾರಾಬಳಗದಲ್ಲಿದ್ದಾರೆ. ಶ್ರೀನಿವಾಸ್‌ ವೀರಂಶೆಟ್ಟಿ ಬಂಡವಾಳ ಹೂಡಿದ್ದಾರೆ. ರಾಜ್‌ ಕಿರಣ್‌ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ನಾಗಬಾಬು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.