ADVERTISEMENT

Interview| ನಟನೆಯಿಂದ ನಿರ್ದೇಶನದೆಡೆಗೆ ಶೀತಲ್ ಹೆಜ್ಜೆ

ಪ್ರಜಾವಾಣಿ ವಿಶೇಷ
Published 28 ನವೆಂಬರ್ 2020, 8:07 IST
Last Updated 28 ನವೆಂಬರ್ 2020, 8:07 IST
ಶೀತಲ್‌ ಶೆಟ್ಟಿ
ಶೀತಲ್‌ ಶೆಟ್ಟಿ   

ಆಕೆ ರಾಜ್ಯದ ಸುದ್ದಿವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಹೆಸರು ಗಳಿಸಿದ್ದವರು. ಅವರನ್ನು ಸಿನಿಮಾ ನಟಿಯಾಗಿ ತೆರೆ ಮೇಲೆ ಕಾಣುತ್ತೇವೆ ಅಂದುಕೊಂಡವರು ಕಡಿಮೆಯೇ. ಬಹುಶಃ ಸ್ವತಃ ಆಕೆಯೂ ಅಂದುಕೊಂಡಿರಲಿಕ್ಕಿಲ್ಲ. ಆದರೆ ಮುಂದೊಂದು ದಿನ ಆಕೆ ನಟಿಯಾಗುತ್ತಾರೆ, ನಾಯಕಿಯಾಗುತ್ತಾರೆ, ಅಷ್ಟೇ ಅಲ್ಲದೇ ನಿರ್ದೇಶಕಿಯೂ ಆಗಿ ಚಂದವವನದಲ್ಲಿ ಹೆಸರು ಗಳಿಸುತ್ತಾರೆ. ಅವರೇ ಶೀತಲ್ ಶೆಟ್ಟಿ. ‘ಉಳಿದವರು ಕಂಡಂತೆ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಬೆಡಗಿ ಇಲ್ಲಿಯವರೆಗೆ ಸುಮಾರು ಹದಿನೈದು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ನಟನೆಯ ‘ಗಡಿಯಾರ’ ಸಿನಿಮಾ ಇಂದು ತೆರೆ ಕಂಡಿದೆ. ಅವರ ನಿರ್ದೇಶನದ ‘ವಿಂಡೋ ಸೀಟ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇಂತಿಪ್ಪ ಶೀತಲ್ ‘ಪ್ರಜಾಪ್ಲಸ್’ ಜೊತೆ ತಮ್ಮ ಸಿನಿ ಪಯಣದ ಕಹಾನಿಯನ್ನು ಹಂಚಿಕೊಂಡಿದ್ದಾರೆ.

ನಿರೂಪಕಿಯಾಗಿದ್ದೂ ನಟನೆಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ನಟನೆಯನ್ನು ಆಯ್ಕೆ ಮಾಡಿಕೊಳ್ಳಲು ಇಂತಹದ್ದೇ ನಿರ್ದಿಷ್ಟ ಕಾರಣ ಎಂಬುದೇನಿಲ್ಲ. ಆದರೆ ಅವಕಾಶಗಳು ಬಂದಾಗ ಸ್ವೀಕರಿಸಿದ್ದೆ. ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಟಿಸುವ ಮೊದಲೂ ನನಗೆ ಅವಕಾಶಗಳು ಬಂದಿದ್ದವು. ಆದರೆ ಆಗ ನಟನೆಯನ್ನು ಆಯ್ಕೆ ಮಾಡುವ ಪ್ರೌಢತೆ ಬಹುಶಃ ನನ್ನಲ್ಲಿ ಇರಲಿಲ್ಲ. ‘ಉಳಿದವರು ಕಂಡಂತೆ’ ಅವಕಾಶವನ್ನು ಒಪ್ಪಿಕೊಂಡು ನಟಿಸಿದೆ. ಹೀಗೆ ನಟನೆಯ ಹಾದಿಯಲ್ಲಿ ಸಾಗಿ ಈಗ ನಿರ್ದೇಶಕಿಯೂ ಆಗಿದ್ದೇನೆ.

ADVERTISEMENT

ನಟಿಯಾಗುವ ಕನಸಿತ್ತಾ?

ಖಂಡಿತಾ ಇಲ್ಲ. ನಾನು ಟಿವಿ ಪರದೆ ಮೇಲೆ ನಿರೂಪಕಿಯಾಗುತ್ತೇನೆ ಎಂದೂ ಅಂದುಕೊಂಡಿರಲಿಲ್ಲ. ಮುಂದೊಂದು ದಿನ ನಟಿಯಾಗುತ್ತೇನೆ ಎಂದೂ ಅಂದುಕೊಂಡವಳಲ್ಲ. ಈ ಎರಡೂ ಅವಕಾಶಗಳು ನನಗೆ ಆಕಸ್ಮಿಕವಾಗಿಯೇ ಸಿಕ್ಕಿದ್ದು.

‘ಉಳಿದವರು ಕಂಡಂತೆ’ ಸಿನಿಮಾ ತಂದ ತಿರುವು?

ಈ ಸಿನಿಮಾ ನನ್ನ ವೃತ್ತಿಬದುಕಿಗೆ ಒಂದು ಒಳ್ಳೆಯ ತಿರುವು ನೀಡಿತು. ಆ ಸಿನಿಮಾದಿಂದ ಸಾಕಷ್ಟು ಹೆಸರು ಗಳಿಸಿದೆ. ಚೊಚ್ಚಲ ಸಿನಿಮಾದಲ್ಲೇ ನನಗೆ ಒಂದು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂತು.

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ನೀವು ನಟಿಸಿರುವ ಸಿನಿಮಾಗಳು?

‘ಗಡಿಯಾರ’ ಸಿನಿಮಾ ಇಂದು ಬಿಡುಗಡೆಯಾಗಿದೆ. ‘ಚೇಸ್‌’, ‘96’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಸಿನಿಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೊದಲೇ ನಿರ್ದೇಶನದ ಕನಸಿತ್ತೇ?

ಇಲ್ಲ. ನಾನು ಸಿನಿಮಾರಂಗಕ್ಕೆ ಬರುವ ಮೊದಲು ನಿರ್ದೇಶನದ ಕನಸು ಕಂಡವಳಲ್ಲ. ಈ ಕ್ಷೇತ್ರಕ್ಕೆ ಪ್ರವೇಶ ಪಡೆದ ಮೇಲೆ ನಿರ್ದೇಶನದ ಕನಸು ನನ್ನೊಳಗೆ ಚಿಗುರೊಡೆದಿದ್ದು. ಮೊದಲಿನಿಂದಲೂ ನನಗೆ ತೆರೆ ಹಿಂದೆ ನಡೆಯುವ ಕೆಲಸಗಳ ಮೇಲೆ ಆಸಕ್ತಿ ಹೆಚ್ಚಿತ್ತು. ಆ ಕಾರಣಕ್ಕೆ ನಿರ್ದೇಶನದ ಮೇಲೆ ಒಲವು ಮೂಡಿತು.

‘ವಿಂಡೋ ಸೀಟ್’ ಸಿನಿಮಾ ಬಗ್ಗೆ ಹೇಳಿ?

‘ವಿಂಡೋ ಸೀಟ್’ ಸಿನಿಮಾ ನನ್ನ ಕನಸಿನ ಕೂಸು. ಅದನ್ನು ನಾನು ಅತಿಯಾಗಿ ಪ್ರೀತಿಸುತ್ತೇನೆ, ಅದರೊಂದಿಗೆ ಉಸಿರಾಡುತ್ತಿದ್ದೇನೆ. ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಇದನ್ನು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ನನಗೂ ಸಂಪೂರ್ಣ ಕಥೆ ಬರೆದಾದ ಮೇಲೆ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಅನ್ನಿಸಿದ್ದು. ಇದೊಂದು ಕೊಲೆಯ ಸುತ್ತ ನಡೆಯುವ ಕಥೆಯಾಗಿದ್ದು, ಆ ಸುಳಿಯೊಳಗೆ ವ್ಯಕ್ತಿಯೊಬ್ಬ ಅನಾವಶ್ಯಕವಾಗಿ ಹೇಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂಬುದು ವಿಷಯ.

ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ನಿರೀಕ್ಷೆಗಳು?

ನಾನು ಎಂದಿಗೂ ಎವರೇಜ್‌ ನಿರೀಕ್ಷೆ ಇರಿಸಿಕೊಳ್ಳುವುದೂ ಇಲ್ಲ, ಎವರೇಜ್ ಆಗಿ ಕೆಲಸ ಮಾಡುವುದೂ ಇಲ್ಲ. ನಾನು ಮಾಡುವ ಕೆಲಸ ಮೊದಲು ತೃಪ್ತಿಕೊಡಬೇಕು. ನನಗೆ ಸಿನಿಮಾದ ಮೇಲೆ ತುಂಬಾನೇ ನಿರೀಕ್ಷೆಗಳಿವೆ. ಅದಕ್ಕೆ ಸರಿಯಾಗಿ ಅದನ್ನು ಜನರ ಮನಸ್ಸಿಗೆ ಇಷ್ಟವಾಗುವಂತೆ ರೂಪಿಸಲು ನಮ್ಮ ಇಡೀ ಚಿತ್ರತಂಡ ಪ್ರಯತ್ನ ಪಟ್ಟಿದೆ. ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೇನೆ. ಇರುವುದನ್ನೇ ಬಳಸಿಕೊಂಡು ದಿ ಬೆಸ್ಟ್ ಸಿನಿಮಾ ಕೊಡಲು ಪ್ರಯತ್ನ ಮಾಡಿದ್ದೇವೆ.

‘ಗಡಿಯಾರ’ ಸಿನಿಮಾ ಹಾಗೂ ನಿಮ್ಮ ಪಾತ್ರದ ಬಗ್ಗೆ?

‘ಗಡಿಯಾರ’ದಲ್ಲಿ ನನ್ನದು ಪತ್ರಿಕೋದ್ಯಮಿಯ ಪಾತ್ರ. ಒಂದು ಘಟನೆ ನಡೆದಿರುತ್ತದೆ, ಆ ಘಟನೆಯ ಬಗ್ಗೆ ಇಬ್ಬರು– ಮೂವರು ತನಿಖೆ ನಡೆಸುತ್ತಿರುತ್ತಾರೆ, ಅದರಲ್ಲಿ ನಾನೂ ಒಬ್ಬಳು. ಈ ಸಿನಿಮಾ ಲಾಕ್‌ಡೌನ್ ಬಳಿಕ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾವನ್ನು ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನಮ್ಮದು.

ಲಾಕ್‌ಡೌನ್ ಬಳಿಕ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಬಗ್ಗೆ ನಿಮ್ಮ ಮಾತು?‌

ಕನ್ನಡ ಸಿನಿಕ್ಷೇತ್ರವನ್ನು ಬೆಳೆಸಬೇಕು ಎಂಬ ಪ್ರೀತಿ, ಅಭಿಮಾನ ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಆದರೆ ಇಂತಹ ಸಮಯದಲ್ಲಿ ಆ ಅಭಿಮಾನ, ಪ್ರೀತಿಯನ್ನು ತೋರುವ ಅವಶ್ಯಕತೆ ಇದೆ. ಯಾಕೆಂದರೆ ಸಿನಿಮಾ ಅಂದರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ. ಸಿನಿಮಾ ಪರದೆಯ ಹಿಂದೆ ಅದೆಷ್ಟೋ ಕಾಣದ ಕೈಗಳ ಪರಿಶ್ರಮ ಇರುತ್ತದೆ. ಆ ಕಾರಣಕ್ಕೆ ಕನ್ನಡ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ನೋಡಿ ಜನ ಪ್ರೋತ್ಸಾಹಿಸಬೇಕು. ಕೋವಿಡ್ ಪರಿಸ್ಥಿತಿ ಮಾರುಕಟ್ಟೆ, ಬಸ್ಸು, ಮೆಟ್ರೊಗಳಲ್ಲಿ ಜನರನ್ನು ಹೆದರಿಸುತ್ತಿಲ್ಲ. ಹಾಗೆಯೇ ಥಿಯೇಟರ್‌ಗೆ ಬರುವಾಗಲೂ ಜನ ಹೆದರಬಾರದು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಥಿಯೇಟರ್‌ನಲ್ಲಿ ಸಿನಿಮಾ ನೋಡಬೇಕು. ಮುಂದೆ ಬಿಡುಗಡೆಯಾಗುವ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು.

ನೀವು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಟಿಸುವ ಯೋಚನೆ ಇದೆಯೇ?

ನಾನು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಾನು ಖಂಡಿತಾ ನಟಿಸುವುದಿಲ್ಲ. ನನ್ನ ಸ್ಪಷ್ಟ ಯೋಚನೆ ಏನು ಎಂದರೆ ನಾನು ನಿರ್ದೇಶನ ಮಾಡಿಕೊಂಡು ನಟಿಸುವಷ್ಟು ಸಮರ್ಥಳಲ್ಲ. ನಾನು ನಟನೆಯಲ್ಲಿ ಏನೋ ಸಾಧಿಸಲು ನಿರ್ದೇಶನಕ್ಕೆ ಬಂದಿಲ್ಲ. ನಾನು ನಿರ್ದೇಶನಕ್ಕೆ ತುಂಬಾ ಪ್ರೀತಿಯಿಂದ ಬಂದವಳು. ಇವತ್ತು ನನಗೆ ನಟನೆನಾ ಅಥವಾ ನಿರ್ದೇಶನನಾ ಎಂದು ಕೇಳಿದರೆ ನಾನು ನಿರ್ದೇಶನ ಎಂದೇ ಹೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.