ADVERTISEMENT

ಹಿಂದಿ ಹೇರಿಕೆ ವಿರುದ್ಧ ನಟ ಪ್ರಕಾಶ್ ರಾಜ್‌ ಹೇಳಿದ್ದೇನು?

‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದ ನಟನಿಗೆ ನೆಟ್ಟಿಗರು ನೀಡಿದ ಉತ್ತರವೇನು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 8:55 IST
Last Updated 13 ಸೆಪ್ಟೆಂಬರ್ 2020, 8:55 IST
ಪ್ರಕಾಶ್‌ ರಾಜ್‌
ಪ್ರಕಾಶ್‌ ರಾಜ್‌   

ತ್ರಿಭಾಷಾ ಸೂತ್ರ ಪಾಲನೆಯ ಪರಿಣಾಮ ರಾಜ್ಯದ ಶಾಲಾ ಪಠ್ಯದಲ್ಲಿ ಹಿಂದಿ ಕಲಿಕೆಗೆ ಅವಕಾಶ ಸಿಕ್ಕಿದೆ. ಹಾಗಾಗಿ, ಪ್ರಾಥಮಿಕ ಶಾಲಾ ಹಂತದಲ್ಲಿಯೇ ಒಂದು ವಿಷಯವಾಗಿ ಮಕ್ಕಳಿಗೆ ಹಿಂದಿ ಕಲಿಸಲಾಗುತ್ತಿದೆ. ಮತ್ತೊಂದೆಡೆ ಬ್ಯಾಂಕಿಂಗ್‌ ವ್ಯವಹಾರ ಸೇರಿದಂತೆ ಹಲವು ವಿಷಯಗಳಲ್ಲಿ ಸದ್ದಿಲ್ಲದೇ ಹಿಂದಿ ಹೇರಿಕೆ ನಡೆಯುತ್ತಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂಬ ಕನ್ನಡಿಗರ ಕೂಗಿಗೆ ಬೆಲೆ ಸಿಕ್ಕಿಲ್ಲ. ಹಿಂದಿ ಹೇರಿಕೆಯನ್ನು ಕನ್ನಡಿಗರು ವಿರೋಧಿಸುತ್ತಲೇ ಬಂದಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್‌ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ ವಿರುದ್ಧ ಧ್ವನಿ ಎತ್ತಿದ್ದಾರೆ. ಕರ್ನಾಟಕದ ಭೂಪಟದೊಳಗೆ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂಬ ಸಂದೇಶ ಮುದ್ರಿಸಿರುವ ಟೀ ಶರ್ಟ್‌ ಧರಿಸಿರುವ ಅವರು, ನಮಗೆ ಹಿಂದಿ ಹೇರಿಕೆ ಬೇಡ ಎಂದು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.

‘ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ, ನನ್ನ ಕಲಿಕೆ... ನನ್ನ ಗ್ರಹಿಕೆ... ನನ್ನ ಬೇರು... ನನ್ನ ಶಕ್ತಿ... ನನ್ನ ಹೆಮ್ಮೆ... ನನ್ನ ಮಾತೃಭಾಷೆ ಕನ್ನಡ. #ಹಿಂದಿ ಹೇರಿಕೆ ಬೇಡ... NO #HindiImposition #justasking’ ಎಂದು ಟ್ವೀಟ್‌ ಮಾಡಿದ್ದಾರೆ. ಅವರ ಈ ಟ್ವೀಟ್‌ಗೆ ನೆಟ್ಟಿಗರಿಂದ ಪರ– ವಿರೋಧ ಅಭಿ‍ಪ್ರಾಯ ವ್ಯಕ್ತವಾಗಿದೆ.

ADVERTISEMENT

‘I Love prakash sir, ನಿಮ್ಮ ಕನ್ನಡದ ಅಭಿಮಾನಕ್ಕೆ ನನ್ನ ಅಭಿನಂದನೆಗಳು. ‘ನಾಗಮಂಡಲ’ದಲ್ಲಿ ಆಹಾ ಎಂಥ ಅಭಿನಯ. ನನ್ನ ನಿಜವಾದ ನಟ ಅಪ್ಪಾಜಿ (ಅಣ್ಣಾವ್ರು) ಅವರ ಸಾಲಿನಲ್ಲಿ ನೀವು ಒಬ್ಬರು. ನಿಮ್ಮ ಮೇಲೆ ನಿಜವಾದ ಭಾರತೀಯರ ಮತ್ತು ನಿಜವಾದ ಕನ್ನಡಿಗರ ಪ್ರೀತಿ ಯಾವತ್ತೂ... ಸದಾಕಾಲ ನಿಮ್ಮ ಜೊತೆಯಲ್ಲಿಯೇ ಇದ್ದು ನಿಮ್ಮ ಈ ಯಶಸ್ಸಿಗೆ ಕೈಜೋಡಿಸುತ್ತಾರೆ– ವಂದನೆಗಳು’ ಎಂದು ಪ್ರದೀಪ್‌ ಇ.ವಿ. ಎಂಬುವರು ಪ್ರತಿಕ್ರಿಯಿಸಿದ್ದಾರೆ.

ಮತ್ತೆ ಕೆಲವರು ಪ್ರಕಾಶ್‌ ರಾಜ್‌ ಟ್ವೀಟ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಗಾಮಡ್ ಹಿಂದಿ ಹೇರಿಕೆ ಬೇಡ ಅಂತೀಯ, ನಿನ್ನ profile picture ನಲ್ಲೇ ಹಿಂದಿ ರಾರಾಜಿಸುತ್ತಿದೆ. ನಿಂದನ್ನು ಮೊದಲು ಸರಿಯಾಗಿ ತೊಳಕೊಳಪ್ಪ. ಆಮೇಲೆ ಬೇರೆಯವರಿಗೆ ಹೇಳುವಂತೆ’ ಎಂದು ಕುಬೇರಪ್ಪ ಪಿ.ಎಚ್‌. ಎಂಬುವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.