ADVERTISEMENT

ಯಕ್ಷಗಾನ ವೇಷದಲ್ಲಿ ಮಿಂಚಿದ ನಟ ರಮೇಶ್‌ ಅರವಿಂದ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2022, 9:37 IST
Last Updated 12 ಅಕ್ಟೋಬರ್ 2022, 9:37 IST
ಫೋಕಸ್‌ ರಾಘು ಕ್ಲಿಕ್ಕಿಸಿರುವ ರಮೇಶ್‌ ಅರವಿಂದ್‌ ಚಿತ್ರಗಳು
ಫೋಕಸ್‌ ರಾಘು ಕ್ಲಿಕ್ಕಿಸಿರುವ ರಮೇಶ್‌ ಅರವಿಂದ್‌ ಚಿತ್ರಗಳು   

ಈ ವರ್ಷದ ಕಾರಂತ ಹುಟ್ಟೂರ ಪ್ರಶಸ್ತಿಗೆ ಭಾಜನರಾದ ಪ್ರಸಿದ್ಧ ನಟ, ನಿರ್ದೇಶಕ ರಮೇಶ್ ಅರವಿಂದ್ ಯಕ್ಷಗಾನ ವೇಷ ಧರಿಸಿರುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

"ಮೊತ್ತ ಮೊದಲ ಬಾರಿಗೆ ಯಕ್ಷಗಾನದ ವೇಷ ತೊಟ್ಟ ನಾನೀಗ ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ ಅನ್ನುವಷ್ಟು ಆತ್ಮ ವಿಶ್ವಾಸ ಬೆಳೆಯುತ್ತಿದೆ" ಎಂದು ರಮೇಶ್‌ ಅರವಿಂದ್‌ ಹೇಳಿದ್ದಾರೆ.

ಉಡುಪಿಯ ಜನಪ್ರಿಯ ಛಾಯಾಗ್ರಾಹಕ ಫೋಕಸ್ ರಾಘು ಯಕ್ಷಗಾನದ ವೇಷದಲ್ಲಿ ರಮೇಶ್‌ ಅರವಿಂದ್‌ ಅವರನ್ನು ಸೆರೆ ಹಿಡಿದಿದ್ದಾರೆ. ಬ್ರಹ್ಮಾವರ ತಾಲ್ಲೂಕಿನ ಕೋಟ ಗಿಳಿಯಾರು ಶಾಂಭವಿ ಶಾಲೆಯ ಆವರಣದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್‌, ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಕೋಟತಟ್ಟು ಪಂಚಾಯಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರಮೇಶ್‌ ಅರವಿಂದ್‌ಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಮೇಶ್‌, ‘ಕಾರಂತರ ಕುತೂಹಲ ಭರಿತ, ವೈಜ್ಞಾನಿಕ ಚಿಂತನೆ ಅದ್ಭುತ. ಎಲ್ಲರಲ್ಲೂ ಅಗಾಧ ಶಕ್ತಿಯಿದ್ದು ಹೊರಗೆಳೆಯುವ ಪ್ರಯತ್ನ ಮಾಡಬೇಕು’ ಎಂದಿದ್ದರು.

ವೇಷದ ಕುರಿತು ಪ್ರತಿಕ್ರಿಯಿಸಿರುವ ರಮೇಶ್‌, "ಮಂಗಳೂರಿನಿಂದ ಕಾರವಾರದವರೆಗೂ, ಕನ್ನಡ ಕರಾವಳಿಯಾದ್ಯಂತ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ಆ ಹೊತ್ತಿಗೆಲ್ಲ, ಯಕ್ಷಗಾನವನ್ನು ಗಮನಿಸುತ್ತಿದ್ದೆ. ಆರೇಳು ಗಂಟೆ ಏರು ಧ್ವನಿಯಲ್ಲಿ ಹಾಡುವ ಭಾಗವತರ ಶಕ್ತಿಯ ಬಗ್ಗೆ ಆಶ್ಚರ್ಯವಾಗುತ್ತದೆ. ಕಲಾವಿದರನ್ನು ಕಂಡು ನಾನೂ ಒಮ್ಮೆ ಯಕ್ಷಗಾನದ ಬಣ್ಣ ಹಚ್ಚಬೇಕೆಂಬ ಆಸೆ ಇತ್ತು’ ಎಂದು ರಮೇಶ್‌ ಸ್ಥಳೀಯ ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.