ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರು
ಮುಂಬೈ: ಚಾಕು ಇರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆನ್ನು ಮೂಳೆ ಬಳಿ ಚಾಕುವಿನಿಂದ ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಖಾನ್ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಖಾನ್ ಅವರ ದೇಹಕ್ಕೆ ಆರು ಬಾರಿ ಇರಿಯಲಾಗಿದೆ, ಎರಡು ಭಾಗಗಳಲ್ಲಿ ಆಳವಾಗಿ ಗಾಯಗಳಾಗಿವೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ, ಜೀವಕ್ಕೆ ಯಾವುದೇ ಅಪಾಯವಿಲ್ಲ. ಬೆನ್ನುಮೂಳೆಯಿಂದ ಚಾಕುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಖಾನ್ ಅವರ ಆರೋಗ್ಯ ಈಗ ಸ್ಥಿರವಾಗಿದೆ. ನಾಳೆ ಬೆಳಿಗ್ಗೆ ಅವರನ್ನು ಐಸಿಯುನಿಂದ ಹೊರತರುತ್ತೇವೆ’ ಎಂದು ಆಸ್ಪತ್ರೆಯ ಡಾ. ನಿತಿನ್ ಡಾಂಗೆ ತಿಳಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಖಾನ್ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಆರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗುರುವಾರ ಬೆಳಗಿನ ಜಾವ 2.30ರ ಹೊತ್ತಿಗೆ ಘಟನೆ ನಡೆದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.
‘ಈ ಸಂದರ್ಭದಲ್ಲಿ ಮಾಧ್ಯಮದವರು ಮತ್ತು ಅಭಿಮಾನಿಗಳು ಶಾಂತ ರೀತಿಯಲ್ಲಿ ವರ್ತಿಸಿ, ಉಳಿದ ಕುಟುಂಬ ಸದಸ್ಯರು ಸುರಕ್ಷಿತವಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಸೈಫ್ ಅಲಿ ಖಾನ್ ಪತ್ನಿ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.
ಸದ್ಯ ಈ ಘಟನೆಯಿಂದ ಬಾಲಿವುಡ್ ಮಂದಿ ಬೆಚ್ಚಿಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.