ADVERTISEMENT

ಕನ್ನಡ ಭಾಷೆಗಾಗಿ ಪ್ರಾಣ ನೀಡಲೂ ಸಿದ್ಧ: ನಟ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 7:50 IST
Last Updated 20 ಡಿಸೆಂಬರ್ 2021, 7:50 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ಬೆಂಗಳೂರು: ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆ ಕುರಿತಂತೆ ನಟ ಶಿವರಾಜ್‌ಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ‘ಮತಬ್ಯಾಂಕ್‌ಗಾಗಿ ಸರ್ಕಾರ ಸುಮ್ಮನೆ ಕುಳಿತುಕೊಳ್ಳಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನಮ್ಮ ಭಾಷೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧ’ ಎಂದಿದ್ದಾರೆ.

ನಟ ಧನಂಜಯ್‌ ಅವರು ನಟಿಸಿರುವ ‘ಬಡವ ರಾಸ್ಕಲ್‌’ ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ಧ್ವಜ ಸುಟ್ಟ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಟ್ವೀಟ್‌ ಮಾಡಿದೆ. ಟ್ವೀಟ್‌ ಮಾಡುವುದು ಈಗ ಫ್ಯಾಷನ್‌ ಆಗಿದೆ. ಕೇವಲ ಟ್ವೀಟ್‌ ಮಾಡುವುದರಿಂದ ಪ್ರಯೋಜನವಿಲ್ಲ. ನನಗೇನೂ ಸಾಯಬೇಕೆಂಬ ಆಸೆ ತಾಯಾಣೆಗೂ ಇಲ್ಲ. ಇನ್ನೂ ನೂರು ವರ್ಷ ಬದುಕಬೇಕೆಂದು ಆಸೆ ಪಡುತ್ತೇನೆ. ಜೀವ ಎನ್ನುವುದು ಒಂದು ಕೊಡುಗೆ. ಆದರೆ ನಮ್ಮ ಭಾಷೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧರಿದ್ದೇವೆ’ ಎಂದರು.

‘ಕರ್ನಾಟಕದಲ್ಲಿದ್ದಾಗ ಕರ್ನಾಟಕವನ್ನು ಪ್ರೀತಿಸಬೇಕು. ನಮಗೆ ಹೆಚ್ಚಿನ ಅಧಿಕಾರ ಇದೆ ಎಂದು ತುಳಿಯಲು ನೋಡಬಾರದು. ನಮಗೆ ಯಾರಿಗೂ ಧೈರ್ಯ, ಅಧಿಕಾರವಿಲ್ಲ ಅಂದುಕೊಳ್ಳಬೇಡಿ. ಮನುಷ್ಯನಿಗೆ ಕೋಪ ಬಂದರೆ, ಯಾವ ಮಟ್ಟಕ್ಕೂ ಹೋಗಬಹುದು. ಹೀಗಾಗಿ ಸರ್ಕಾರ ದಯವಿಟ್ಟು ಸರಿಯಾಗಿ ಯೋಚಿಸಿ, ಕ್ರಮ ಕೈಗೊಳ್ಳಲೇಬೇಕು. ಮತಬ್ಯಾಂಕ್‌ಗಾಗಿ ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮ ಭಾಷೆಗೆ ನಾವು ಹೋರಾಡಬೇಕು’ ಎಂದರು.

‘ಈ ವಿಷಯದಲ್ಲಿ ನಾನು ನಾಯಕತ್ವ ತೆಗೆದುಕೊಳ್ಳಬೇಕು ಎಂದು ಕೇಳುತ್ತಿದ್ದಾರೆ. ನಾವೆಲ್ಲರೂ ಜೊತೆಯಾಗಿ ಹೋಗೋಣ. ನಾನು ಸರ್ಕಾರದಲ್ಲಿ ಕೇಳಿಕೊಳ್ಳುವುದು ಇಷ್ಟೇ, ‘ನೀವು ಬದ್ಧತೆ ತೋರಿಸಿ. ಯಾರೇ ತಪ್ಪು ಮಾಡಿರಲಿ ಶಿಕ್ಷೆ ಆಗಲಿ’. ಕನ್ನಡಿಗರು ಎಲ್ಲರಿಗೂ ಜಾಗ ಕೊಡುತ್ತೇವೆ. ಕನ್ನಡಿಗರು ಬೇರೆ ಭಾಷೆಯವರನ್ನು ಯಾವತ್ತೂ ದ್ವೇಷಿಸಿಲ್ಲ. ‘ಅಖಂಡ’ ಎಂಬ ಸಿನಿಮಾಗೆ ನಾನು ಮೊದಲ ದಿನವೇ ಹೋಗುತ್ತೇನೆ. ಏಕೆ ಹೋಗುತ್ತೇನೆ ಎಂದರೆ ಬಾಲಕೃಷ್ಣ ಅವರ ಮೇಲಿರುವ ಗೌರವಕ್ಕೆ. ಎಲ್ಲ ಸಿನಿಮಾಗಳನ್ನೂ ನೋಡಿ. ಆದರೆ ಜಾಸ್ತಿ ಕನ್ನಡ ಸಿನಿಮಾವನ್ನು ನೋಡಬೇಕು’ ಎಂದರು.

ನಾನೂ ತಮಿಳು ಕಲಿತಿದ್ದೇನೆ, ಓದಿದ್ದೇನೆ: ‘ಭಾರತದಲ್ಲಿ ಎಲ್ಲರಿಗೂ ಎಲ್ಲರ ಭಾಷೆಯೂ ಮುಖ್ಯ. ನಾವೆಲ್ಲರೂ ಒಂದೇ ಎಂದು ತೋರಿಸಿಕೊಳ್ಳಲು ನಮ್ಮನ್ನು ನಾವು ಭಾರತೀಯರು ಎನ್ನುತ್ತೇವೆ. ಆದರೆ ಆಯಾ ರಾಜ್ಯದಲ್ಲಿ ಇರಬೇಕಾದರೆ ಆ ರಾಜ್ಯಕ್ಕೆ, ಭಾಷಗೆ ಗೌರವ, ಮರ್ಯಾದೆ ಕೊಡುವುದು ಎಲ್ಲರ ಧರ್ಮ. ಯಾವುದೇ ರಾಜ್ಯದಲ್ಲಾಗಲಿ ಬೇರೆಯವರ ಧ್ವಜವನ್ನು ಸುಟ್ಟು, ಅದನ್ನು ಕಡೆಗಾಣಿಸಬಾರದು. ಯಾವತ್ತೂ ಅದಕ್ಕೆ ಆದ ಮರ್ಯಾದೆ ನೀಡಬೇಕು. ನಾನು ಹುಟ್ಟಿರುವುದು ಚೆನ್ನೈನಲ್ಲಿ. ನಾನೂ ತಮಿಳು ಓದಿದ್ದೇನೆ, ಕಲಿತಿದ್ದೇನೆ. ಅನಿವಾರ್ಯವಾಗಿ ಮೂರನೇ ಭಾಷೆಯಾಗಿ ಅದನ್ನು ಕಲಿಯಲೇಬೇಕಾಯಿತು. ನಾನು ಅದನ್ನು ಬೇಡ ಎಂದು ಬಿಡಲು ಸಾಧ್ಯವೇ ಇರಲಿಲ್ಲ. ಖಂಡಿತಾ ಭಾಷೆ ಕಲಿಯಬೇಕು. ನನಗೆ ಆಗ ತಮಿಳು ಮಾತನಾಡುವ ಗೆಳೆಯರಿದ್ದರು. ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ, ಮರಾಠಿ, ಗುಜರಾತಿ ಹೀಗೆ ಎಲ್ಲ ಭಾಷೆಯ ಸಿನಿಮಾಗಳನ್ನು ನಾನು ನೋಡುತ್ತೇನೆ. ಏಕೆಂದರೆ, ಅದನ್ನು ಕಲಿಯಲು ನಾನು ನೋಡುತ್ತೇನೆ. ಅದಕ್ಕೆ ಮರ್ಯಾದೆ ಕೊಡಬೇಕು’ ಎಂದು ಶಿವರಾಜ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.