ADVERTISEMENT

ರೈತರ ಹೆಸರಲ್ಲಿ ರಾಜಕೀಯ ಮಾಡಬೇಡಿ: ನಟ ಶ್ರೀಮುರಳಿಯ ಖಡಕ್‌ ಮಾತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 8:42 IST
Last Updated 23 ಸೆಪ್ಟೆಂಬರ್ 2020, 8:42 IST
ಶ್ರೀಮುರಳಿ
ಶ್ರೀಮುರಳಿ   

ಕೇಂದ್ರ ಸರ್ಕಾರ ಅಂಗೀಕರಿಸಿರುವ ಹೊಸ ಕೃಷಿ ಮಸೂದೆಗಳ ಬಗ್ಗೆ ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ. ಅಖಿಲ ಭಾರತ ರೈತ ಸಂಘಗಳ ಒ‌ಕ್ಕೂಟವು ಹೊಸದಾಗಿ ಅನುಮೋದನೆ ಪಡೆದಿರುವ ಈ ಮಸೂದೆಗಳಿಂದ ರೈತರಿಗೆ ಅನುಕೂಲವಿದೆ ಎಂದು ಹೇಳಿದೆ. ಮತ್ತೊಂದೆಡೆ ಕೇಂದ್ರದ ಕೃಷಿ ನೀತಿ ಖಂಡಿಸಿ ಇದೇ 28ರಂದು ‘ಕರ್ನಾಟಕ ಬಂದ್’‌ಗೆ ರಾಜ್ಯ ರೈತ ಸಂಘ ಕರೆ ನೀಡಿದೆ.

ಮಸೂದೆಗಳ ಬಗ್ಗೆ ಸದನದ ಒಳಗೂ, ಹೊರಗೂ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ನಡುವೆಯೇ ನಟ ಶ್ರೀಮುರಳಿ ರೈತರ ಬಗ್ಗೆ ಹೇಳಿರುವ ಮಾತುಗಳು ವೈರಲ್‌ ಆಗಿವೆ.

‘ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಹಿನ್ನೆಲೆಯಿಂದಲೇ ಬಂದವರು‌. ರಾಜಕಾರಣಿಯೋ, ಕಲಾವಿದರೋ ಅಥವಾ ಉದ್ಯಮಿಯೋ, ಅದು ಯಾರೇ ಆದರೂ ಸರಿ, ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳೆದರೆ ಮಾತ್ರ ನಾವೆಲ್ಲ ಅಚ್ಚುಕಟ್ಟಾಗಿ ಕುಳಿತು ಭೋಜನ ಸವಿಯುವುದು. ಹಾಗಾಗಿ ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಶ್ರೀಮುರಳಿ ಅವರ ಈ ಟ್ವೀಟ್‌ಗೆ ಹಲವು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ‘ಹೌದು ಅಣ್ಣ ನಿಜವಾದ ರೈತ ತನ್ನ ಲಾಭ–ನಷ್ಟ ಎಲ್ಲವನ್ನು ಸ್ವೀಕರಿಸುತ್ತಾನೆ. ಆದರೆ, ರೈತರ ಹೆಸರಲ್ಲಿ ಇವ್ರೆಲ್ಲಾ ರಾಜಕೀಯ ಮಾಡ್ತಿದ್ದಾರೆ. ರೈತರಿಗೆ ಅನ್ಯಾಯ ಹಿಂದಿನಿಂದಲೂ ಆಗುತ್ತಾ ಬಂದಿದೆ. ಆದ್ರೆ ಆಡಳಿತ ಪಕ್ಷದ ವಿರುದ್ಧ (ಯಾವುದೇ ಪಕ್ಷ ಇರಬೌದು) ವಿರೋಧ ಪಕ್ಷದವರು ತಮ್ಮ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಎಸ್‌.ಡಿ. ನಾಯಕ್‌ ಪ್ರತಿಕ್ರಿಯಿಸಿದ್ದಾರೆ.

ತೇಜಸ್ ಸಜ್ಜನ್‌ ಎಂಬುವರು, ‘ಕೃಷಿಕರು ದೇಶದ ಪ್ರಗತಿಕರು. ಅವರನ್ನು ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳು ಹಾಗೂ ಸಾಮಾನ್ಯ ಜನರು ಗೌರವಿಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಶ್ರೀಮುರಳಿ ಅವರು ಎಸ್‌. ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ಇದರ ಶೂಟಿಂಗ್‌ ನಡೆಯುತ್ತಿದೆ. ಆಶಿಕಾ ರಂಗನಾಥ್‌ ಇದರ ನಾಯಕಿ. ಉಮಾಪತಿ ಶ್ರೀನಿವಾಸ್‌ ಗೌಡ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.