ADVERTISEMENT

'ಮಿಲನ' ನಟಿ ಪಾರ್ವತಿ ಮೆನನ್: ಕ್ಯಾಮೆರಾ ಹುಟ್ಟಿಸಿದ ಭೀತಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:30 IST
Last Updated 26 ಏಪ್ರಿಲ್ 2020, 19:30 IST
ಪಾರ್ವತಿ ಮೆನನ್
ಪಾರ್ವತಿ ಮೆನನ್   

‘ಟೇಕ್‌ ಆಫ್‌’ ಮಲಯಾಳದ ಸೂಪರ್‌ ಹಿಟ್‌ ಚಿತ್ರ. ಇದನ್ನು ನಿರ್ದೇಶಿಸಿದ್ದು ಮಹೇಶ್‌ ನಾರಾಯಣನ್‌. 2017ರ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(ಇಫಿ) ದೊಡ್ಡಮಟ್ಟದಲ್ಲಿ ಗಮನ ಸೆಳೆದಿದ್ದು ಇದರ ಹೆಗ್ಗಳಿಕೆ. ಈ ಸಿನಿಮಾದ ನಾಯಕಿ ಪಾರ್ವತಿ ಮೆನನ್‌ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. ಇಫಿಯ ಇತಿಹಾಸದಲ್ಲಿ ಭಾರತೀಯ ನಟಿಯೊಬ್ಬರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಬಂದದ್ದು ಅದೇ ಮೊದಲು.

ಪಾರ್ವತಿ ಮೆನನ್‌ ಕನ್ನಡಿಗರಿಗೆ ಅಪರಿಚಿತರೇನಲ್ಲ. ಆಕೆ ಚಂದನವನ ಪ್ರವೇಶಿಸಿದ್ದು, ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಮಿಲನ’ ಚಿತ್ರದ ಮೂಲಕ. ಬಳಿಕ ‘ಮಳೆ ಬರಲಿ, ಮಂಜೂ ಇರಲಿ..’, ‘ಪೃಥ್ವಿ’, ‘ಅಂದರ್‌ ಬಾಹರ್’ ಚಿತ್ರಗಳಲ್ಲಿ ನಟಿಸಿ ಕನ್ನಡದ ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡರು. ಈ ಬಟ್ಟಲುಗಣ್ಣಿನ ಚೆಲುವೆಯದ್ದು ನೇರ ಹಾಗೂ ದಿಟ್ಟ ನುಡಿ. ಮಲಯಾಳದ ಮೇರುನಟಯೊಬ್ಬರ ತಪ್ಪಿನ ವಿರುದ್ಧ ನೇರವಾಗಿ ಬೊಟ್ಟು ಮಾಡಿದ ಆಕೆಯ ವಿರುದ್ಧ ಆ ನಟನ ಅಭಿಮಾನಿಗಳು ಸೈಬರ್‌ ಯುದ್ಧ ಸಾರಿದ್ದು ಈಗ ಹಳೆಯ ಸುದ್ದಿ. ಆದರೆ, ಆಕೆ ಮಾತ್ರ ಎದೆಗುಂದಲಿಲ್ಲ. ಹಾಗೆಂದು ಮಾಲಿವುಡ್‌ನಲ್ಲಿ ಈ ಸಹಜ ನಟನೆಯ ನಟಿಗೆ ಬೇಡಿಕೆಯೂ ಕಡಿಮೆಯಾಗಲಿಲ್ಲ. ‘ಉಯರೆ’ಯಂತಹ ಸಿನಿಮಾ ಮೂಲಕ ಮತ್ತೆ ಮಾಲಿವುಡ್‌ನಲ್ಲಿ ಪುಟಿದೆದ್ದಿದ್ದು ಆಕೆಯ ಹಿರಿಮೆ. ಇದರಲ್ಲಿ ಆಕೆ ಪೈಲಟ್ ಹಾಗೂ ಆಸಿಡ್ ಸಂತ್ರಸ್ತೆಯ ಪಾತ್ರ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಆಕೆ ನಟಿಸಿದ ಆಶಿಕ್ ಅಬು ನಿರ್ದೇಶನದ ‘ವೈರಸ್’ ಸಿನಿಮಾವೂ ಸೂಪರ್‌ ಹಿಟ್‌ ಆಯಿತು. ನಿಫಾ ವೈರಸ್‌ ಸುತ್ತ ಇದರ ಕಥೆ ಹೆಣೆಯಲಾಗಿತ್ತು.

ಮಲಯಾಳದ ‘ಔಟ್‌ ಆಫ್ ಸಿಲೆಬಸ್‌’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಆಕೆಯ ವೃತ್ತಿಬದುಕಿಗೆ ಹದಿನಾಲ್ಕು ವರ್ಷ ತುಂಬಿದೆ. ಮಲಯಾಳ, ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲಿ ನಟಿಸಿರುವ ಆಕೆಗೆ ಚಿಕ್ಕಂದಿನಲ್ಲಿ ಕ್ಯಾಮೆರಾ ಕಂಡರೆ ಭಯವಾಗುತ್ತಿತ್ತಂತೆ. ಬಾಲ್ಯದ ಅನುಭವಗಳನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ನನಗೆ ಬಾಲ್ಯದಲ್ಲಿ ಕ್ಯಾಮೆರಾ ಕಂಡರೆ ನಿಜಕ್ಕೂ ಭಯವಾಗುತ್ತಿತ್ತು. ಅದರ ಮುಂದೆ ನಿಂತಾಗ ನನಗೆ ಗೊತ್ತಿಲ್ಲದೆಯೇ ಅಳು ಬರುತ್ತಿತ್ತು. ಅಳುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಕ್ಯಾಮೆರಾದ ದೊಡ್ಡ ಮಸೂರ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದೆ ಎಂದು ಭಯಪಡುತ್ತಿದ್ದೆ. ಅದನ್ನು ಎದುರಿಸಲು ಹಲವು ಬಾರಿ ಸೋತು ಹೋಗಿದ್ದೇನೆ. ಪಕ್ಕದಲ್ಲಿ ಅಮ್ಮ ನಿಂತಾಗ ಭಯ ಓಡಿಹೋಗುತ್ತಿತ್ತು. ಕ್ಯಾಮೆರಾದ ಮುಂದೆ ನಿಂತು ನಗು ಚೆಲ್ಲಿದರೆ ಮಸೂರದಿಂದ ಚಾಕೊಲೇಟ್‌ಗಳು ಉದುರುತ್ತವೆ ಎಂದು ಹೇಳುತ್ತಿದ್ದರು. ಆಗ ಕಣ್ಣರಳಿಸಿ ನಿಂತು ನಗುತ್ತಿದ್ದೆ. ಆಗಲೇ ಕ್ಯಾಮೆರಾದ ಮುಂದೆ ಧೈರ್ಯದಿಂದ ನಿಲ್ಲುವುದನ್ನು ಕಲಿತೆ. ಆ ಆತ್ಮವಿಶ್ವಾಸವೇ ಇಂದಿಗೂ ನನ್ನೊಟ್ಟಿಗಿದೆ’ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಪ್ರಸ್ತುತ ಪಾರ್ವತಿ ನಟಿಸಿರುವ ಜಕಾರಿಯಾ ಮಹಮ್ಮದ್‌ ನಿರ್ದೇಶಿಸಿರುವ ಮಲಯಾಳದ ‘ಹಲಾಲ್‌ ಲವ್‌ ಸ್ಟೋರಿ’ ಬಿಡುಗಡೆಗೆ ಸಿದ್ಧವಾಗಿದೆ. ‘ವರ್ತಮಾನಂ’ ಮತ್ತು ‘ರಾಚಿಯಮ್ಮ’ ಚಿತ್ರದಲ್ಲೂ ಆಕೆ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.