ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪ್ರತಿಭಾನ್ವಿತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಅಮೆರಿಕದ ನಿಕ್ ಜೋನಸ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕವೂ ಆಕೆಯ ಬೇಡಿಕೆ ಕಡಿಮೆಯಾಗಿಲ್ಲ. ಹಿಂದಿಯ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಆಕೆ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದು ತೀರಾ ಕಡಿಮೆ.
ಕಳೆದ ಎರಡು ವರ್ಷಗಳ ಹಿಂದೆ ಪ್ರಿಯಾಂಕಾ ತನ್ನ ಆತ್ಮಕಥೆಯಾದ ‘ಅನ್‌ಫಿನಿಷ್ಡ್’ ಪುಸ್ತಕ ಬರೆಯುವುದಾಗಿ ಘೋಷಿಸಿದ್ದರು. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇದರ ಪ್ರಕಟಣೆಯ ಹೊಣೆ ಹೊತ್ತಿತ್ತು. ಸುದೀರ್ಘ ಅವಧಿಯ ಬಳಿಕ ಆಕೆ ಪುಸ್ತಕವನ್ನು ಈಗ ಬರೆದು ಮುಗಿಸಿದ್ದಾರಂತೆ. ‘ಅನ್‌ಫಿನಿಷ್ಡ್ ಈಸ್ ಫಿನಿಷ್ಡ್’ ಎಂದು ಟ್ವೀಟ್ ಮಾಡಿದ್ದಾರೆ. ಪುಸ್ತಕಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ತೊಡಗಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.
ಪ್ರಿಯಾಂಕಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಕಡಿಮೆಯೇ. ಆಕೆ ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಿದ್ದೇ ಇದಕ್ಕೆ ಕಾರಣ. ಆಕೆ ವೈಯಕ್ತಿಕ ಬದುಕಿನ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಾಗಾಗಿಯೇ, ಈ ಪುಸ್ತಕದ ಮೇಲೆ ಎಲ್ಲರೂ ಕುತೂಹಲದ ಕಣ್ಣು ನೆಟ್ಟಿದ್ದಾರೆ. ಮಹಿಳೆಯರು ತಮ್ಮ ಜೀವನದಲ್ಲಿ ದೊಡ್ಡ ಕನಸು ಕಂಡು, ಗುರಿ ಈಡೇರಿಸಿಕೊಳ್ಳಲು ಈ ಪುಸ್ತಕ ಅವರಿಗೆ ಪ್ರೇರಣೆಯಾಗಲಿದೆ ಎಂಬುದು ಆಕೆಯ ನಂಬಿಕೆ.
‘ಸಿನಿಮಾ ಚಟುಚಟಿಕೆಯಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದೆ. ಹಾಗಾಗಿ, ಬರವಣಿಗೆಯ ಬಗ್ಗೆ ಆಸಕ್ತಿ ಇದ್ದರೂ ಅದು ಕಾರ್ಯಸಾಧುವಾಗಿರಲಿಲ್ಲ’ ಎಂದಿದ್ದಾರೆ ಪ್ರಿಯಾಂಕಾ.
ಆಕೆಯ ವೃತ್ತಿಬದುಕಿನ ಸಣ್ಣ ಕಥನಗಳನ್ನು ಈ ಪುಸ್ತಕ ಒಳಗೊಂಡಿದೆಯಂತೆ. ‘ನಾನು ಪ್ರಾಮಾಣಿಕವಾಗಿ ಪುಸ್ತಕ ಬರೆದಿರುವೆ. ಪ್ರಾಮಾಣಿಕವಾಗಿಯೇ ನನ್ನ ಅನುಭವಗಳನ್ನು ದಾಖಲಿಸಿದ್ದೇನೆ. ನನ್ನೊಳಗಿನ ಫನ್, ಬೋಲ್ಡ್‌ನೆಸ್ ಸೇರಿದಂತೆ ಕ್ರಾಂತಿಕಾರಿಕ ಗುಣಗಳೆಲ್ಲವೂ ಈ ಪುಸ್ತಕದಲ್ಲಿ ಮೇಳೈಸಿವೆ. ನಾನು ಯಾವಾಗಲೂ ಖಾಸಗಿಯಾಗಿಯೇ ಇರುತ್ತಿದ್ದೆ. ನನ್ನ ಭಾವನೆಗಳನ್ನು ಎಲ್ಲಿಯೂ ಹಂಚಿಕೊಳ್ಳುತ್ತಿರಲಿಲ್ಲ. ಈ ಪುಸ್ತಕದಲ್ಲಿ ಅವುಗಳನ್ನು ಹಂಚಿಕೊಂಡಿದ್ದೇನೆ’ ಎಂದಿದ್ದಾರೆ.
‘ನಾನಿಂದು ಚಿತ್ರರಂಗದಲ್ಲಿ ಮಾಡಿರುವ ಸಾಧನೆ ಬಗ್ಗೆ ಹೆಮ್ಮೆಯಿದೆ. ನಾವು ಕಠಿಣ ಹಾದಿಯಲ್ಲಿ ಸಾಗುವಾಗಲೇ ಬದುಕಿನ ದೊಡ್ಡ ಪಾಠಗಳ ಅನುಭವವಾಗುತ್ತದೆ’ ಎಂದು ಭಾವುಕವಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.