ADVERTISEMENT

ರೌಡಿ ಜಯರಾಜ್‌ ಪಾತ್ರದಲ್ಲಿ ಡಾಲಿ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 19:30 IST
Last Updated 17 ಫೆಬ್ರುವರಿ 2020, 19:30 IST
ಧನಂಜಯ್‌
ಧನಂಜಯ್‌   

ಅಗ್ನಿ ಶ್ರೀಧರ್ ಅವರು ‘ನನಗೆ ಬರವಣಿಗೆ ಹಾಗೂ ಸಾಮಾಜಿಕ ಕಾರ್ಯಕರ್ತನ ಕೆಲಸವೇ ಬಹಳಷ್ಟಿದೆ. ಸಿನಿಮಾ ಸಹವಾಸ ಸಾಕು’ ಎಂದು ತೀರ್ಮಾನಿಸಿದ್ದರು. ಆದರೆ, ಈಗ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಭೂಗತ ಪಾತಕಿ ಜೈರಾಜ್ ಕಥೆಯನ್ನು ಶ್ರೀಧರ್ ಅವರು ತೆರೆಯ ಮೇಲೆ ಹೇಳಲಿದ್ದಾರೆ. ಅಂದಹಾಗೆ, ಜೈರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ಅಶು ಬೆದ್ರ ಅವರು ಬಂಡವಾಳ ಹೂಡಿಕೆ ಮಾಡಲಿದ್ದು, ಶೂನ್ಯ ಅವರು ನಿರ್ದೇಶನದ ಹೊಣೆ ಹೊರಲಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಧರ್ ಅವರು ಬರೆಯಲಿದ್ದಾರೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಧರ್, ‘ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆಯುವಂತೆ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಹಾಗೆಯೇ, ಪ್ರತಿ ವರ್ಷವೂ ಒಂದೊಂದು ಸಿನಿಮಾ ಮಾಡುತ್ತ, ಸಿನಿಮಾ ರಂಗದಲ್ಲಿ ಇನ್ನು ಹತ್ತು ವರ್ಷ ಸಕ್ರಿಯವಾಗಿರುವ ತೀರ್ಮಾನ ಕೂಡ ಮಾಡಿದ್ದೇನೆ’ ಎಂದು ತಿಳಿಸಿದರು.

‘ಶ್ರೀಧರ್ ಸರ್ ಬರೆದ ಪುಸ್ತಕ ಆಧರಿಸಿ ಕಥೆಯನ್ನು ಸಿದ್ಧಪಡಿಸಲಾಗುತ್ತದೆ’ ಎಂದರು ಶೂನ್ಯ. ಸಿನಿಮಾ ಲೋಕಕ್ಕೆ ಮರಳಬಾರದು ಎಂದು ತೀರ್ಮಾನಿಸಿದ್ದ ಶ್ರೀಧರ್ ಅವರ ಮನವೊಲಿಸಿದ್ದು ಶೂನ್ಯ ಅವರು.

ADVERTISEMENT

‘ನಾನು ಅಗ್ನಿ ಸರ್ ಬರಹಗಳ ಅಭಿಮಾನಿ. ಜೈರಾಜ್ ಪಾತ್ರವನ್ನು ನಿಭಾಯಿಸುವುದು ದೊಡ್ಡ ಸವಾಲಿನ ಕೆಲಸ’ ಎನ್ನುವುದು ಧನಂಜಯ್ ಅವರ ಮಾತು. ಈ ಚಿತ್ರದ ಕೆಲಸಗಳು ಇನ್ನು ಎರಡು ತಿಂಗಳುಗಳಲ್ಲಿ ಆರಂಭವಾಗಲಿವೆ ಎಂದು ಸಿನಿತಂಡ ಹೇಳಿದೆ.

ಇದು ಜೈರಾಜ್ ಕಾಲದ ಸಿನಿಮಾ ಆಗಿದ್ದರೂ, ಎಲ್ಲವನ್ನೂ ಸೆಟ್ ಹಾಕಿ ಚಿತ್ರೀಕರಿಸುವ ಮನಸ್ಸು ಚಿತ್ರತಂಡಕ್ಕೆ ಇಲ್ಲ. ಸಾಧ್ಯವಾದಷ್ಟು ದೃಶ್ಯಗಳನ್ನು ಸೆಟ್ ಹಾಕದೆಯೇ ಚಿತ್ರೀಕರಿಸುವ ಉದ್ದೇಶ ತಂಡಕ್ಕೆ ಇದೆ. ಜೈರಾಜ್ ಪಾತ್ರ ನಿಭಾಯಿಸಲು ಧನಂಜಯ್ ಅವರು ಸಾಕಷ್ಟು ವರ್ಕೌಟ್‌ ಮಾಡಬೇಕಾಗುತ್ತದೆ ಎಂಬುದು ಚಿತ್ರತಂಡದ ಅಂಬೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.