ADVERTISEMENT

Sandalwood: ಎಐ ಬಳಸಿ ಕನ್ನಡ ಸಿನಿಮಾ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 23:30 IST
Last Updated 16 ಏಪ್ರಿಲ್ 2025, 23:30 IST
film
film   

ಸದ್ಯ ಎಲ್ಲಿ ನೋಡಿದರೂ ಎಐ (ಕೃತಕ ಬುದ್ಧಿಮತ್ತೆ) ಟ್ರೆಂಡ್‌. ಸಿನಿಮಾದ ಧ್ವನಿ, ಗ್ರಾಫಿಕ್ಸ್‌ ಮೊದಲಾದ ವಿಭಾಗಗಳಲ್ಲಿ ಎಐ ಈಗಾಗಲೇ ಕಾಲಿಟ್ಟಿದೆ. ಇದೀಗ ಪೂರ್ತಿ ಸಿನಿಮಾವೇ ಎಐನಲ್ಲಿ ನಿರ್ಮಾಣಗೊಂಡಿದೆ. ಅದೂ ಕನ್ನಡದ ಸಿನಿಮಾ!

‘ಲವ್ ಯು’ ಎಂಬ ಕನ್ನಡದ ಸಿನಿಮಾ ನಟ, ನಟಿಯರು, ತಂತ್ರಜ್ಞರ ಸಹಾಯವಿಲ್ಲದೆ ಪ್ರಾರಂಭದಿಂದ ಅಂತ್ಯದವರೆಗೂ ಎಐ ತಂತ್ರಜ್ಞಾನ ಬಳಸಿಕೊಂಡು ಸಿದ್ಧವಾದ ಚಿತ್ರ. ಈ ಹಿಂದೆ ‘ಗರುಡಾಕ್ಷ’, ‘ಕಂಟೈನರ್‌’ ಸಿನಿಮಾಗಳನ್ನು ಮಾಡಿದ್ದ ಎಸ್.ನರಸಿಂಹಮೂರ್ತಿ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

‘ಈಗಾಗಲೇ ಜಗತ್ತಿನ ಚಿತ್ರರಂಗದಲ್ಲಿ ಸಿನಿಮಾಗಳ ವಿವಿಧ ವಿಭಾಗಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಆದರೆ ಸಂಪೂರ್ಣವಾಗಿ ಎಐ ಮೂಲಕವೇ ಸಿನಿಮಾವನ್ನು ನಿರ್ಮಿಸುವ ಸಾಹಸ ಎಲ್ಲಿಯೂ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನಾವು ಆ ಸಾಹಸ ಮಾಡಿದ್ದೇವೆ. ಈ ಸಿನಿಮಾದ ನಿರ್ದೇಶಕರು, ನಿರ್ಮಾಪಕರನ್ನು ಹೊರತುಪಡಿಸಿದರೆ ಮತ್ತೆಲ್ಲ ಕೆಲಸಗಳನ್ನೂ ಈ ತಂತ್ರಜ್ಞಾನವೇ ನಿಭಾಯಿಸಿದೆ. ಬೇರೆ ಬೇರೆ ವಿಭಾಗಕ್ಕೆ ಬೇರೆ ಬೇರೆ ಎಐ ಸಾಫ್ಟ್‌ವೇರ್‌ ಬಳಸಿದ್ದೇವೆ. ಸುಮಾರು 20 ಎಐ ಸಾಫ್ಟ್‌ವೇರ್‌ ಬಳಸಿ ಸಿದ್ಧಗೊಂಡ ಚಿತ್ರ. ಕಥೆಯನ್ನು ಎಐಗೆ ಪ್ರಾಂಪ್ಟ್‌ ಮಾಡಿದರೆ ಉಳಿದೆಲ್ಲವನ್ನೂ ಅದೇ ಸಿದ್ಧಮಾಡಿಕೊಳ್ಳುತ್ತದೆ. ನಟ, ನಟಿಯರೂ ಬೇಕಿಲ್ಲ. ಅಷ್ಟರಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಕಥೆ, ಸಂಕಲನ ಎರಡೂ ಮಾತ್ರ ನಮ್ಮದು’ ಎನ್ನುತ್ತಾರೆ ಎಸ್.ನರಸಿಂಹಮೂರ್ತಿ.

ADVERTISEMENT

95 ನಿಮಿಷಗಳ ‘ಲವ್ ಯು’ ಸಿನಿಮಾದಲ್ಲಿ ಒಟ್ಟು 12 ಹಾಡುಗಳಿದ್ದು, ಅವೆಲ್ಲವನ್ನೂ ಎಐ ಸಂಯೋಜಿಸಿ, ಸಿದ್ಧಪಡಿಸಿದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದ್ದು, ಸದ್ಯದಲ್ಲಿಯೇ ಚಿತ್ರ ತೆರೆಗೂ ಬರಲಿದೆ. ನೂತನ್, ಎಐ ಇಂಜಿನಿಯರ್ ತಾಂತ್ರಿಕ ವಿಭಾಗಗಳನ್ನು ನಿಭಾಯಿಸಿದ್ದಾರೆ. 

‘ಇದು ಕೇವಲ ಸಿನಿಮಾ ಅಲ್ಲ, ಇದೊಂದು ಕ್ರಾಂತಿ. ಕಥೆ ಹೇಳುವ ಮತ್ತು ತಂತ್ರಜ್ಞಾನವನ್ನು ಸರಾಗವಾಗಿ ಬೆಸೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ತಂತ್ರಜ್ಞಾನದ ಟೂಲ್‌ಗಳಿಗೆ ಸುಮಾರು ₹10 ಲಕ್ಷ ಖರ್ಚು ಮಾಡಿದ್ದೇವೆ. ಒಟ್ಟಾರೆ ₹20 ಲಕ್ಷ ಬಜೆಟ್‌ನಲ್ಲಿ ಸಿನಿಮಾ ಸಿದ್ಧಗೊಂಡಿದೆ. ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಈ ಬದಲಾವಣೆಗೆ ಹೊಂದಿಕೊಂಡು ಚಿತ್ರರಂಗ ಅಭಿವೃದ್ಧಿ ಕಾಣಬೇಕಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.