ADVERTISEMENT

ನನ್ನ ಅಪ್ಪ ನಿಜವಾದ ಸಿಂಗಂ: ಅಪ್ಪ ವೀರೂ ದೇವಗನ್ ನೆನೆದ‌ ಅಜಯ್ ದೇವಗನ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 8:44 IST
Last Updated 21 ಜೂನ್ 2020, 8:44 IST
ವೀರೂ ದೇವಗನ್
ವೀರೂ ದೇವಗನ್   

‘ನಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರು, ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಲ್ಲ. ಆ ಜೀವ ನಮಗೆ ಕಾಣದಂತೆ ನಮ್ಮ ಸುತ್ತಮುತ್ತಲೇ ಇರುತ್ತದೆ. ರಕ್ಷಾ ಕವಚದಂತೆ ಸದಾ ನಮ್ಮನ್ನು ಕಾಯುತ್ತಿರುತ್ತದೆ. #ಹ್ಯಾಪಿ ಫಾದರ್ಸ್‌ ಡೇ ಪಪ್ಪಾ’

– ಕಳೆದ ವರ್ಷ ಅಗಲಿದ ತಮ್ಮ ತಂದೆ ವೀರೂ ದೇವಗನ್‌ ಅವರನ್ನು ಬಾಲಿವುಡ್ ನಟ ಅಜಯ್ ದೇವಗನ್‌ ‘ಅಪ್ಪಂದಿರ ದಿನ’ದಂದು ನೆನಪಿಸಿಕೊಂಡ ರೀತಿ ಇದು.

ಬಾಲಿವುಡ್‌ನ 80ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ‌ಸ್ಟಂಟ್‌ ಮಾಸ್ಟರ್‌ ವೀರೂ ದೇವಗನ್‌ ಅವರನ್ನು ಅಜಯ್, ಅಪ್ಪನಿಗಿಂತ ಹೆಚ್ಚಾಗಿ‌ ಗುರುವಿನಂತೆ ಕಂಡವರು.ಶಿಕ್ಷಕರ ದಿನಾಚರಣೆ ದಿನದಂದೂ ಅಜಯ್‌, ಜೀವನದ ಪಾಠ ಕಲಿಸಿದ ಗುರು ಎಂದು ತಂದೆಯನ್ನು ನೆನಪಿಸಿಕೊಂಡಿದ್ದರು.

ADVERTISEMENT

90ರ ದಶಕದ ಸೂಪರ್ ಹಿಟ್‌ ಚಲನಚಿತ್ರ ‘ಫೂಲ್‌ ಔರ್‌ ಕಾಂಟೆ’ ಮೂಲಕ ವೀರೂ ದೇವಗನ್‌ ತಮ್ಮ ಪುತ್ರ ಅಜಯ್‌ ದೇವಗನ್‌ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದರು.

‘ನನ್ನ ಪಾಲಿನ ನಿಜವಾದ ‘ಸಿಂಗಂ’ ಎಂದರೆ ಅದು ನನ್ನ ಅಪ್ಪ ಮಾತ್ರ. ಜೇಬಿನಲ್ಲಿ ಕೇವಲ ನಾಲ್ಕು ರೂಪಾಯಿ ಇಟ್ಟುಕೊಂಡು ಮುಂಬೈ ಮಹಾನಗರಕ್ಕೆ ಬಂದಿದ್ದ ಅಪ್ಪ ಟ್ಯಾಕ್ಸಿ ಓಡಿಸಿದ್ದಾರೆ. ಹಣವಿಲ್ಲದೆ ವಾರಗಟ್ಟಲೇ ಉಪವಾಸ ಬಿದ್ದರೂ ಛಲ ಬಿಡದೆ ಇಂಡಸ್ಟ್ರಿಯಲ್ಲಿ ನೆಲೆ ನಿಂತರು. ಇಂಡಸ್ಟ್ರಿ ಕಂಡ ಅತ್ಯುತ್ತಮ ಸಾಹಸ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ’ ಎಂದು ಅಜಯ್‌, ಅಪ್ಪನ ಸಾಹಸಗಳನ್ನು ಬಣ್ಣಿಸಿದ್ದಾರೆ.

ಮಗನಿಗಾಗಿ ವೀರೂ ದೇವಗನ್‌, ಇಷ್ಕ್‌, ಜಾನ್‌, ದಿವ್ಯಶಕ್ತಿ, ಹಕೀಕತ್‌, ದಿಲ್‌ವಾಲೆ, ಜಿಗರ್‌ ಚಿತ್ರಗಳನ್ನು ನಿರ್ಮಿಸಿದ್ದರು. ಅಮಿತಾಭ್ ಬಚ್ಚನ್‌,ಅಜಯ್, ಸುಶ್ಮಿತಾ ಸೇನ್‌ ಮತ್ತು ಮೋನಿಷಾ ಕೊಯಿರಾಲ್ ಅವರಂತಹ ಬಹು ತಾರಾಗಣದ ಚಿತ್ರವನ್ನು ನಿರ್ದೇಶಿಸಿದ್ದರು.‌

‘ದೇಶದ ದೊಡ್ಡ ನಟ, ನಟಿಯರು ಅಪ್ಪನ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಪ್ಪ ಇಂಡಸ್ಟ್ರಿಯಲ್ಲಿ ಅಷ್ಟೊಂದು ಗೌರವ ಗಳಿಸಿದ್ದರು. ಪ್ರತಿಯೊಬ್ಬ ನಟರೂ ಅವರೊಂದಿಗೆ ಕೆಲಸ ಮಾಡಲು ತುದಿಗಾಲ ಮೇಲೆ ನಿಲ್ಲುತ್ತಿದ್ದರು. ಅವರ ತಲೆಯಲ್ಲಿ 50 ಹೊಲಿಗೆಗಳಿದ್ದವು. ಅವರ ದೇಹದಲ್ಲಿ ಅದೆಷ್ಟೊ ಮೂಳೆಗಳು ಮುರಿದುಹೋಗಿದ್ದವು. ನನ್ನ ಜೀವನದಲ್ಲಿ ಅವರ ಜಾಗವನ್ನು ಯಾರೂ ತುಂಬಲಾರವು. ಅವರೇ ನನ್ನ ನಿಜವಾದ ‘ಸಿಂಗಂ’ ಎಂದು ಅಜಯ್‌ ತಮ್ಮ ತಂದೆಯ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.