ADVERTISEMENT

ಮತ್ತೆ ತೆರೆ ಮೇಲೆ ಬರಲಿದೆ ‘ಯುದ್ಧಕಾಂಡ’!

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 10:27 IST
Last Updated 27 ನವೆಂಬರ್ 2022, 10:27 IST
ಅಜಯ್‌ ರಾವ್‌
ಅಜಯ್‌ ರಾವ್‌   

‘ಯುದ್ಧಕಾಂಡ’ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಹಿಟ್‌ ಚಿತ್ರ. ಇದೀಗ ಇದೇ ಶೀರ್ಷಿಕೆ ಹೊತ್ತ ಸಿನಿಮಾವೊಂದು ಮತ್ತೆ ತೆರೆಗೆ ಬರಲಿದೆ. ‘ಯುದ್ಧಕಾಂಡ’ಕ್ಕೆ ಇಳಿಯಲು ನಟ ಅಜಯ್‌ ರಾವ್‌ ಸಜ್ಜಾಗಿದ್ದಾರೆ.

‘ತಾಜ್ ಮಹಲ್’, ‘ಕೃಷ್ಣ ಲೀಲಾ’, ‘ಕೃಷ್ಣ ರುಕ್ಮಿಣಿ’ ಸಿನಿಮಾ ಖ್ಯಾತಿಯ ಅಜಯ್ ರಾವ್, ಚಂದನವನದ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ.‘ಯುದ್ಧಕಾಂಡ’ ಸಿನಿಮಾವನ್ನು ‘ಕಟಿಂಗ್ ಶಾಪ್’ ಸಿನಿಮಾ ನಿರ್ದೇಶಿಸಿದ್ದ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುದ್ಧಕಾಂಡ’ ಎಂಬ ಶೀರ್ಷಿಕೆ ಇಡಲಾಗಿದೆ. ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳಲಿದ್ದಾರೆ. ‘ಯುದ್ಧಕಾಂಡ’ ಚಿತ್ರದಲ್ಲಿ ರವಿಚಂದ್ರನ್‌ ಅವರೂ ಲಾಯರ್‌ ಪಾತ್ರದಲ್ಲಿ ನಟಿಸಿದ್ದರು.

ಈ ಚಿತ್ರವನ್ನು ಅಜಯ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಆ್ಯಂಡ್‌ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ‘ಕೃಷ್ಣ ಲೀಲಾ’ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಅವರು ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.

ADVERTISEMENT

‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗುವುದು ರವಿಚಂದ್ರನ್‌ ಅವರ ಹಿಟ್‌ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ.ವಿ.ರಾಜು ಅವರ ಜೊತೆ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ ಎನ್ನುವುದು ನನ್ನ ಅದೃಷ್ಟ. ಶೀರ್ಷಿಕೆ ಘೋಷಣೆಗೂ ಮೊದಲೇ ರವಿಚಂದ್ರನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಆದರೆ, ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ಮಾಹಿತಿ ಹಂಚಿಕೊಂಡರು.

‘ಚಿತ್ರರಂಗಕ್ಕೆ ಪ್ರವೇಶಿಸಿ 20 ವರ್ಷ ಆಯಿತು. ನಟನಾಗಿ ಯಶಸ್ಸು, ಸೋಲು ಎರಡನ್ನೂ ಅನುಭವಿಸಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದೇನೆ. ‘ಕೃಷ್ಣ ಲೀಲಾ’ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ’ ಎಂದರು.

ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.