ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕುಮಾರ್
ಚಿತ್ರಕೃಪೆ: ಇನ್ಸ್ಟಾಗ್ರಾಂ
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸ ಹೊಸ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಇರುತ್ತಾರೆ.
ಇದೀಗ ತಮ್ಮ ಮುಂದಿನ ಚಿತ್ರ ‘ಕೇಸರಿ ಚಾಪ್ಟರ್–2’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಥಕ್ಕಳಿ ವೇಷ ಧರಿಸಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
‘ಇದು ಕೇವಲ ವೇಷ ಭೂಷಣವಲ್ಲ, ನನ್ನ ದೇಶದ ಸಂಪ್ರದಾಯ, ಪ್ರತಿರೋಧ, ಸತ್ಯದ ಪ್ರತೀಕವಾಗಿದೆ. ಏಪ್ರಿಲ್ 18ರಂದು ಚಿತ್ರ ಬಿಡುಗಡೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.
ಕೇಸರಿ ಚಾಪ್ಟರ್–2 ಚಿತ್ರವನ್ನು ಕರಣ್ ಸಿಂಗ್ ತ್ಯಾಗಿ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಜತೆಗೆ ಅನನ್ಯಾ ಪಾಂಡೆ, ಆರ್. ಮಾಧವನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕೇಸರಿ ಚಾಪ್ಟರ್–2 ಚಿತ್ರವು ರಘು ಪಾಲಟ್ ಮತ್ತು ಪುಷ್ಪಾ ಪಾಲಟ್ ಅವರ ಪುಸ್ತಕ - ‘ದಿ ಕೇಸ್ ದಟ್ ಶೂಕ್ ದಿ ಎಂಪೈರ್’ ಅನ್ನು ಆಧರಿಸಿದೆ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಕುರಿತು ಹೇಳಲಾಗದ ಕಥೆ ಮತ್ತು ವಕೀಲ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸಿ. ಶಂಕರನ್ ನಾಯರ್ ನೇತೃತ್ವದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದ ಸುತ್ತ ಸಿನಿಮಾದ ಕಥೆ ಸುತ್ತುತ್ತದೆ ಎಂದು ಚಿತ್ರ ತಂಡ ಹೇಳಿದೆ.
ಧರ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ. ಇದು 2019ರಲ್ಲಿ ಬಿಡುಗಡೆಯಾದ ಕೇಸರಿ ಸಿನಿಮಾದ ಸೀಕ್ವೆಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.