ADVERTISEMENT

ಅಕ್ಷಯ್‌ಗೆ ತಿರುಗುಬಾಣವಾದ ಹಳೆ ಟ್ವೀಟ್‌!‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 11:03 IST
Last Updated 26 ಜೂನ್ 2020, 11:03 IST
ನಟ ಅಕ್ಷಯ್‌ ಕುಮಾರ್‌ 
ನಟ ಅಕ್ಷಯ್‌ ಕುಮಾರ್‌    

ಪೆಟ್ರೋಲ್‌ ಮತ್ತು ಡೀಸೆಲ್‌ ಏರಿಕೆ ವಿರುದ್ಧ ಹತ್ತು ವರ್ಷಗಳ ಹಿಂದೆ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಮಾಡಿದ್ದ ಹಳೆಯ ಟ್ವೀಟ್‌ಗಳು ಈಗ ಅವರಿಗೆ ತಿರುಗುಬಾಣವಾಗುತ್ತಿವೆ! ‌

ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆ ಏರಿಕೆ ವಿರುದ್ಧ ಅಕ್ಷಯ್‌ ಕುಮಾರ್ ಸರಣಿ ಟ್ವೀಟ್‌ ಮಾಡಿದ್ದರು. ಅಲ್ಲದೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. 2011 ಮತ್ತು 2012 ರಲ್ಲಿ ಅಕ್ಷಯ್‌ ಮಾಡಿದ್ದ ಸರಣಿ ಟ್ವೀಟ್‌ಗಳನ್ನು ಹೆಕ್ಕಿ ತೆಗೆದಿರುವ ಮಹಾರಾಷ್ಟ್ರ ಸಚಿವರೊಬ್ಬರು ಆ ಎಲ್ಲ ಟ್ವೀಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.‌

‘ನೀವು ಪತ್ರಿಕೆಗಳನ್ನು‌ ಓದುವುದಿಲ್ಲವೇ. ಒಂದೇ ಸಮನೆ ಏರುತ್ತಿರುವ ಪೆಟ್ರೋಲ್‌, ಡೀಸೆಲ್‌‌ ದರಗಳ ಬಗ್ಗೆ ನಿಮ್ಮ ಮೌನ ಅರ್ಥವಾಗುತ್ತಿಲ್ಲ‘ ಎಂದು ಮಹಾರಾಷ್ಟ್ರ ಸಚಿವ ಜೀತೆಂದ್ರ ಅವಾದ್ ಅವರು ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ.

ADVERTISEMENT

‘ಬಹುಶಃ ನೀವೀಗ ಟ್ವಿಟರ್‌ನಲ್ಲಿ ಸಕ್ರಿಯರಾಗಿಲ್ಲ ಎಂದು ಕಾಣುತ್ತದೆ. ಪೆಟ್ರೋಲ್‌ ದರ ಏರಿಕೆಯಿಂದ ಕಾರುಗಳನ್ನು ಬಳಸುವುದನ್ನು ಬಿಟ್ಟಿರಬಹುದು. ನೀವು ಮೌನವಾಗಿರುವುದನ್ನು ನೋಡಿದರೆ ಈಗೀಗ ಪತ್ರಿಕೆಗಳನ್ನು ಓದುವುದನ್ನೂ ಬಿಟ್ಟಿರಬಹುದೆಂದು ಕಾಣುತ್ತದೆ’ ಎಂದು ಸಚಿವರು ಕುಹಕವಾಡಿದ್ದಾರೆ. ಇದು ನಿಮ್ಮ ಗಮನಕ್ಕೆ... ಎಂದು ಪೆಟ್ರೋಲ್‌, ಡೀಸೆಲ್‌‌ ದರ ಪಟ್ಟಿಯನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ನಡುವೆ, 2012ರಲ್ಲಿ ಪೆಟ್ರೋಲ್, ಡೀಸೆಲ್‌‌ ದರ ಏರಿಕೆ ಸಂದರ್ಭದಲ್ಲಿ ಮಾಡಿದ್ದ ಟ್ವೀಟ್ ಅನ್ನು‌ಅಕ್ಷಯ್‌ ಕುಮಾರ್‌ ಡಿಲೀಟ್‌ ಮಾಡಿದ್ದಾರೆ. ಅಂದು ಅಕ್ಷಯ್‌ ‘ಮತ್ತೊಮ್ಮೆ ಪೆಟ್ರೋಲ್‌ ದರಗಳು ಹೆಚ್ಚುವ ಮೊದಲೇ ನಿಮ್ಮ ಬೈಸಿಕಲ್‌ಗಳನ್ನು ಕ್ಲೀನ್‌ ಮಾಡಿಟ್ಟುಕೊಳ್ಳಿ. ಸದ್ಯದಲ್ಲಿಯೇ ಮತ್ತೊಮ್ಮೆ ಪೆಟ್ರೋಲ್‌ ಬೆಲೆ ಹೆಚ್ಚಾಗಲಿದೆ ಎಂಬ ಸುದ್ದಿ ಸಿಕ್ಕಿದೆ’ ಎಂದು ಟ್ವೀಟ್‌ ಮಾಡಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.