ಸ್ಟಾರ್ ನಟ, ನಟಿಯರು ಸಿನಿಮಾವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿರುವುದು ಸಹಜ. ಚಿತ್ರವೊಂದು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಾಗ ಅವರ ಸಂಭಾವನೆಯ ಮೊತ್ತವೂ ದುಪ್ಪಟ್ಟಾಗುತ್ತದೆ. ಸೋತಾಗ ದಿಢೀರನೇ ಪಾತಾಳಕ್ಕೂ ಇಳಿಯುತ್ತದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ‘ರೌದ್ರಂ ರಣಂ ರುಧಿರಂ’ ಸಿನಿಮಾದ ಬಜೆಟ್ ₹ 350 ಕೋಟಿಗೂ ಹೆಚ್ಚಿದೆ. ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಇದರಲ್ಲಿ ನಟಿಸುತ್ತಿದ್ದಾರೆ. ಅವರಿಗೆ ದುಬಾರಿ ಮೊತ್ತದ ಸಂಭಾವನೆ ನೀಡಲಾಗಿದೆ. ಬಾಲಿವುಡ್‌ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಆಲಿಯಾ ಭಟ್ ಅವರೂ ಇದರಲ್ಲಿ ಸೀತೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಕೆಗೆ ಎಷ್ಟು ಸಂಭಾವನೆ ನೀಡಲಾಗಿದೆ ಎನ್ನುವ ಕುತೂಹಲ ಎಲ್ಲರಿಗೂ ಕಾಡುತ್ತಿದೆ.
ಆಲಿಯಾ ಈ ಸಿನಿಮಾಕ್ಕೆ 10 ದಿನಗಳ ಡೇಟ್ ನೀಡಿದ್ದಾರಂತೆ. ಇದಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ ₹ 5 ಕೋಟಿ. ಅಂದರೆ ದಿನವೊಂದಕ್ಕೆ ಆಕೆಗೆ ನಿಗದಿಯಾಗಿರುವ ಮೊತ್ತ ₹ 50 ಲಕ್ಷ!
ಟಾಲಿವುಡ್‌ನಲ್ಲಿ ಅಗ್ರಪಂಕ್ತಿಯಲ್ಲಿರುವ ನಯನತಾರಾ, ಕಾಜಲ್ ಅಗರ್‌ವಾಲ್, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ಸಂಭಾವನೆಯ ₹ 2ರಿಂದ ₹ 3 ಕೋಟಿ ದಾಟಿಲ್ಲ. ತೆಲುಗು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಆಲಿಯಾಗೆ ಸಿಕ್ಕಿರುವ ದುಬಾರಿ ಸಂಭಾವನೆ ಕಂಡು ಅವರೆಲ್ಲರ ಕಣ್ಣು ಕೆಂಪಾಗಿದೆಯಂತೆ.
ಅಂದಹಾಗೆ ರಾಮ್ ಚರಣ್ ಅವರೊಟ್ಟಿಗೆ ಆಲಿಯಾ ಸೊಂಟ ಬಳುಕಿಸಲಿದ್ದಾರೆ. ಈ ಇಬ್ಬರು ನಟಿಸುವ ಸನ್ನಿವೇಶದ ಶೂಟಿಂಗ್ ಪುಣೆಯಲ್ಲಿ ಕಳೆದ ತಿಂಗಳೇ ಆರಂಭವಾಗಬೇಕಿತ್ತು. ಇದಕ್ಕೆ ಕೊರೊನಾ ಅಡ್ಡಿಪಡಿಸಿದೆ.
‘ರೌದ್ರ ರಣ ರುಧಿರ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ನನ್ನ ಮೊದಲ ಪ್ರವೇಶವಾಗುತ್ತದೆ. ರಾಜಮೌಳಿ ಅವರ ಜೊತೆಗೆ ಕೆಲಸ ಮಾಡಲು ಕಾತರಳಾಗಿದ್ದೇನೆ’ ಎಂದು ಖುಷಿ ಹಂಚಿಕೊಂಡಿದ್ದಾರೆಆಲಿಯಾ.
⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.