ADVERTISEMENT

ಅಳಿದು ಉಳಿದವರು: ಥ್ರಿಲ್‌ ಇದೆ, ಕುತೂಹಲವೂ ಇದೆ

ಕೆ.ಎಂ.ಸಂತೋಷ್‌ ಕುಮಾರ್‌
Published 6 ಡಿಸೆಂಬರ್ 2019, 10:33 IST
Last Updated 6 ಡಿಸೆಂಬರ್ 2019, 10:33 IST
‘ಅಳಿದು ಉಳಿದವರು’ ಚಿತ್ರದಲ್ಲಿ ಅಶು ಬೆದ್ರ
‘ಅಳಿದು ಉಳಿದವರು’ ಚಿತ್ರದಲ್ಲಿ ಅಶು ಬೆದ್ರ   

ನಂಬಿಕೆ ಮತ್ತು ಮೂಢನಂಬಿಕೆಯ ಕಾರಣಗಳನ್ನು ಬಿಚ್ಚಿಡಲು ಥ್ರಿಲ್ಲರ್‌, ಪ್ರೀತಿ, ಕುತೂಹಲ, ಸಾಹಸದಂತಹ ಅಂಶಗಳನ್ನು ನಿರ್ದೇಶಕ ಅರವಿಂದಶಾಸ್ತ್ರಿ ‘ಅಳಿದು ಉಳಿದವರು’ ಚಿತ್ರದಲ್ಲಿ ಹದವಾಗಿ ಮಿಳಿತಗೊಳಿಸಿದ್ದಾರೆ.ಕಥೆಯನ್ನು ಪ್ರೇಕ್ಷಕನ ಕುತೂಹಲ ಕ್ಷಣಕ್ಷಣಕ್ಕೂ ಕೆರಳುವಂತೆ ತೆರೆ ಮೇಲೆ ನಿರೂಪಿಸಿದ್ದಾರೆ. ಟಿಆರ್‌ಪಿ ಹಿಂದೆ ಹುಚ್ಚು ಕುದುರೆಯಂತೆ ಓಡುವ ಟಿ.ವಿ ಮಾಧ್ಯಮಗಳ ನಾನಾ ಮುಖಗಳನ್ನು ಪರಿಚಯಿಸಲು ಯತ್ನಿಸಿದ್ದಾರೆ. ಆದರೆ, ಒಂದುಮುಖದ ಕಿರುಪರಿಚಯವನ್ನಷ್ಟೇ ಕಟ್ಟಿಕೊಡಲು ಅವರಿಂದ ಸಾಧ್ಯವಾಗಿದೆ.

ಹುಟ್ಟಿಗೂ, ಸಾವಿಗೂ, ನೋವಿಗೂ, ನಲಿವಿಗೂ ಒಂದು ಕಾರಣ ಇದ್ದೇ ಇದೆ. ಕಾಣಿಸುವುದರ ಬಗ್ಗೆ ಯಾರಿಗೂ ಚಿಂತೆ ಇರುವುದಿಲ್ಲ, ಆದರೆ, ಕಾಣದೆ ಇರುವುದರ ಬಗ್ಗೆ ಭ್ರಮೆ, ಭಯ ಇದ್ದೇ ಇರುತ್ತದೆ. ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನವಿಶೇಷ ಕಾರಣಗಳನ್ನು ಶೋಧಿಸುತ್ತಾ ಖಾಸಗಿ ಟಿ.ವಿ ವಾಹಿನಿಗಾಗಿ ‘ಕಾರಣ..?’ ಎನ್ನುವ ಸರಣಿ ಕಾರ್ಯಕ್ರಮ ನಡೆಸಿಕೊಡುವ ನಿರೂಪಕ ಶೀಲಂ (ಅಶು ಬೆದ್ರ)ಚಿತ್ರದ ನಾಯಕ. 99ನೇ ಎಪಿಸೋಡಿನಲ್ಲೂ ದೆವ್ವ ಇಲ್ಲ ಎನ್ನುವುದನ್ನು ಆತ ನಿರೂಪಿಸುತ್ತಾನೆ.ನೂರನೇ ಎಪಿಸೋಡನ್ನು ವಿಶೇಷವಾಗಿ ರೂಪಿಸಲು ಹೊರಡುವ ನಾಯಕನಿಗೆ ಸಾರ್ವಜನಿಕನೊಬ್ಬ (ಪವನ್‌ಕುಮಾರ್‌) ಮಾರಾಟವಾಗದೇ ಉಳಿದಿರುವ ತನ್ನ ಮನೆಯಲ್ಲಿ ದೆವ್ವ ಇಲ್ಲ ಎನ್ನುವುದನ್ನು ನಿರೂಪಿಸಲು ಸವಾಲೊಡ್ಡುತ್ತಾನೆ. ದೆವ್ವ ಇಲ್ಲವೆಂದು ನಿರೂಪಿಸಲು ಹೊರಡುವ ಶೀಲಂಗೆ ನಿಜವಾಗಿಯೂ ದೆವ್ವದ ದರ್ಶನವಾಗುತ್ತದೆಯೇ? ನೂರನೇ ಎಪಿಸೋಡ್‌ ಜೀವಕ್ಕೆ ಎರವಾದಾಗ ನಿಜಕ್ಕೂ ಆತ ಸಾವು ಗೆಲ್ಲುತ್ತಾನಾಎನ್ನುವ ಕುತೂಹಲವೇ ಚಿತ್ರದ ಕಥಾಹಂದರ.

ಯಾವುದೇ ಪಾತ್ರಗಳನ್ನೂ ವೈಭವೀಕರಿಸದಿದ್ದರೂ ಕಥಾವಸ್ತುವನ್ನೇ ನಾಯಕ ಪ್ರಧಾನವಾಗಿಸಲು ಪ್ರಯತ್ನಿಸಿರುವುದು ಎದ್ದು ಕಾಣಿಸುತ್ತದೆ. ಪ್ರಮುಖ ಪಾತ್ರದಲ್ಲಿ ನಟಿಸಿರುವಅಶು ಬೆದ್ರ ಸಹಜ ನಟನೆಯಿಂದ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸುತ್ತಾರೆ. ಇವರಿಗೆ ನಾಯಕಿಯಾಗಿ ಅಮೃತಾ ಪಾತ್ರದಲ್ಲಿ ಸಂಗೀತಾ ಭಟ್‌ ನಟನೆಯೂ ಇಷ್ಟವಾಗುತ್ತದೆ. ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಅತುಲ್‌ ಕುಲಕರ್ಣಿಯವರ ನಟನೆ, ಅವರ ಮ್ಯಾನರಿಸಂ ಪ್ರೇಕ್ಷಕರ ಮನಸಿನಲ್ಲಿ ಉಳಿಯುತ್ತದೆ.ಪವನ್‌ ಕುಮಾರ್‌, ಧರ್ಮಣ್ಣ ಕಡೂರು,ಅರವಿಂದ್ ರಾವ್,ಬಿ.ಸುರೇಶ್,ದಿನೇಶ್ ಮಂಗಳೂರು ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ADVERTISEMENT

ಒಂದು ಫೈಟಿಂಗ್‌ ದೃಶ್ಯ ಹೊರತುಪಡಿಸಿ, ಚಿತ್ರದಲ್ಲಿ ಹೊಡಿಬಡಿ ದೃಶ್ಯಗಳಿಲ್ಲ. ಹಾಡು, ಸಂಗೀತದ ಅಬ್ಬರವೂ ಇಲ್ಲ. ಮಸಾಲ ದೃಶ್ಯ, ನೃತ್ಯವಂತೂ ಇಲ್ಲವೇ ಇಲ್ಲ. ಚಿತ್ರವು ಪ್ರೇಕ್ಷಕನನ್ನುತಣ್ಣಗೆ ಕುಳ್ಳಿರಿಸಿ ನೋಡಿಸಿಕೊಳ್ಳುವಂತಿದೆ. ಆದರೆ,ಹೊರಗೆಲ್ಲೂ ಕಾಣಿಸದ ದೆವ್ವವು ವ್ಯಕ್ತಿಯ ಅಂತರಂಗದೊಳಗೆ ಕಾಣಿಸಿಕೊಂಡಿದ್ದೇಗೆ ಎನ್ನುವುದುಕ್ಲೈಮ್ಯಾಕ್ಸ್‌ನಲ್ಲಿ ಕಾಡುತ್ತದೆ. ತರ್ಕವಿಲ್ಲದ ಪ್ರಶ್ನೆಗಳನ್ನು ಹುಟ್ಟಿಸಿ, ಅವುಗಳಿಗೆಉತ್ತರ ನೀಡುವ ಗೋಜಿಗೆ ನಿರ್ದೇಶಕರು ಹೋಗಿಲ್ಲ. ಅದು ನಿರ್ದೇಶಕನ ಜಾಣ್ಮೆಯಾದರೂ ಪ್ರೇಕ್ಷಕನ ಗೊಂದಲ ಮಾತ್ರ ಪರಿಹಾರವಾಗುವುದಿಲ್ಲ.

ಅರವಿಂದ್ ಕಶ್ಯಪ್ ಹಾಗೂ ಅಭಿನ್ ರಾಜೇಶ್ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ. ಡ್ರೋಣ್‌ ಕ್ಯಾಮೆರಾ ಬಳಸಿ ತೆಗೆದಿರುವ ಕೆಲವು ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.