ADVERTISEMENT

5 ಸಾವಿರದಿಂದ 25 ಕೋಟಿಗೆ ಏರಿದ ಬಚ್ಚನ್‌ ಸಂಭಾವನೆ!

ಸಿನಿ ಯಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:00 IST
Last Updated 18 ಫೆಬ್ರುವರಿ 2019, 20:00 IST
ಅಮಿತಾಭ್‌ ಬಚ್ಚನ್‌ (ಟ್ವಿಟರ್‌ ಚಿತ್ರ)
ಅಮಿತಾಭ್‌ ಬಚ್ಚನ್‌ (ಟ್ವಿಟರ್‌ ಚಿತ್ರ)   

ಬಾಲಿವುಡ್‌ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿವೆ. ಈಗ ಬಾಲಿವುಡ್‌ನ ಸೂರ್ಯನಂತೆ ಬೆಳಗುತ್ತಿರುವ ಈ ಮಹಾನ್ ನಟನ ಆರಂಭಿಕ ದಿನಗಳು ಹಾಗಿರಲಿಲ್ಲ. ಸಿನಿಮಾದಲ್ಲಿ ನನಗೊಂದು ಅವಕಾಶ ಕೊಡಿಸಿ ಎಂದು ಅವರಿವರಲ್ಲಿ ತಮ್ಮ ಫೋಟೊ ಕೊಟ್ಟಿದ್ದರಂತೆ! ಚಿತ್ರರಂಗದ ಸಹವಾಸ ಬೇಡ, ಶೆಫ್‌ ಆಗು ಎಂದು ತಂದೆ ಹರಿವಂಶರಾಯ್‌ ಬಚ್ಚನ್‌, ಕಾಲೇಜಿಗೆ ಸೇರಿಸಿದರೆ ಮಗ ಅಲ್ಲಿ ಇಲ್ಲಿ ಅಲೆದಾಡಿ ಸಂಜೆ ಮನೆ ಸೇರುತ್ತಿದ್ದನಂತೆ!

***

ಅಮಿತಾಭ್‌ ಬಚ್ಚನ್‌... ಪ್ರತಿ ಸಿನಿಮಾಕ್ಕೆ 25 ಕೋಟಿಯಿಂದ 30 ಕೋಟಿ ರೂಪಾಯಿ ಸಂಭಾವನೆ; ‘ಕೌನ್‌ ಬನೇಗಾ ಕರೋಡ್‌ಪತಿ’ಯ ಕಳೆದ ಸೀಸನ್‌ನ ಪ್ರತಿ ಸಂಚಿಕೆಗೆ ಅವರು ವಿಧಿಸಿದ ಶುಲ್ಕ ಹೆಚ್ಚುಕಮ್ಮಿ 3 ಕೋಟಿ ರೂಪಾಯಿ! ಬಾಲಿವುಡ್‌ನಲ್ಲಿ 50 ವರ್ಷಗಳ ಪಯಣವನ್ನು ಪೂರೈಸಿದ ಈ ದಿನಗಳಲ್ಲಿ ಬಿಗ್ ಬಿ ಒಂದು ಅಚ್ಚರಿಯಾಗಿ, ದಂತಕತೆಯಾಗಿ ಕಾಣುತ್ತಾರೆ.

ADVERTISEMENT

ಆದರೆ ನಿಮಗೆ ಗೊತ್ತೇ? 50 ವರ್ಷಗಳ ಹಿಂದೆ, ‘ಸಾತ್ ಹಿಂದುಸ್ತಾನಿ’ ಸಿನಿಮಾಕ್ಕೆ ಅವರಿಗೆ ಸಿಕ್ಕಿದ್ದ ಸಂಭಾವನೆ ಕೇವಲ 5,000 ರೂಪಾಯಿ! ಹೌದು, ನಟನೆಯ ವಿಶ್ವವಿದ್ಯಾಲಯವೆಂಬಂತೆ ಈಗ ಬೆಳೆದುನಿಂತಿರುವ ಈ ಮಹಾನ್‌ ನಟ, ಆರಂಭಿಕ ದಿನಗಳಲ್ಲಿ ಕಲ್ಲುಮುಳ್ಳಿನ ಹಾದಿಯಲ್ಲೇ ಸಾಗಿಬಂದವರು.

ಮೊದಲ ಚಿತ್ರ ‘ಸಾತ್‌ ಹಿಂದುಸ್ತಾನಿ’ ಅಲ್ಲ!

ಅಮಿತಾಭ್‌ ಬಚ್ಚನ್‌ ಅವರ ನಟನೆಯ ಇತಿಹಾಸ ತೆರೆದುಕೊಳ್ಳುವುದು,1969ರ ‘ಸಾತ್‌ ಹಿಂದುಸ್ತಾನಿ’ ಚಿತ್ರದಿಂದ. ಬಿಗ್‌ ಬಿ ನಟಿಸಿದ್ದ ಮೊದಲ ಚಿತ್ರ ಅದು. ಆದರೆ ಅದಕ್ಕೂ ಮೊದಲೇ ಅವರು ಬಾಲಿವುಡ್‌ಗೆ ಪರಿಚಯಗೊಂಡಿದ್ದರು!

ಹೌದು. ಮೃಣಾಲ್‌ ಸೇನ್‌ ನಿರ್ದೇಶನದ ‘ಭುವನ್‌ ಶೋಮ್‌’ ಚಿತ್ರದಲ್ಲಿ ಅಮಿತಾಭ್‌ ಮಹತ್ವದ ಪಾತ್ರ ವಹಿಸಿದ್ದರು.ಹೆಂಡತಿಯನ್ನು ಕಳಕೊಂಡ ವಿಧುರನೊಬ್ಬ ರಜೆಯ ದಿನದಂದು ಹಳ್ಳಿಗೆ ಹೋಗಿ ಹಕ್ಕಿ ವೀಕ್ಷಣೆ ಮಾಡುವುದು, ಅದೇ ಹಳ್ಳಿಯ ಯುವತಿಯೊಂದಿಗೆ ಒಡನಾಟ ಬೆಳೆಸುವುದು ಚಿತ್ರದ ಮುಖ್ಯ ವಸ್ತು.ಚಿತ್ರದ ನಾಯಕ ಭುವನ್‌ ಶೋಮ್‌ ಸ್ವಗತವೆಂಬಂತೆ ಚಿತ್ರದುದ್ದಕ್ಕೂ ಮಾತನಾಡುತ್ತಾನೆ. ಉತ್ಪಲ್‌ ದತ್‌ ನಾಯಕನಟನಾಗಿ ಅಭಿನಯಿಸಿದ್ದರು. ಆದರೆ ಉತ್ಪಲ್‌ಗೆ ಕಂಠದಾನ ಮಾಡಿದವರು ಅಮಿತಾಭ್‌!

ಭಾರತೀಯ ಚಿತ್ರರಂಗಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಮೈಲಿಗಲ್ಲಿನಂತಹ ಚಿತ್ರ ಎಂದೇ ‘ಭುವನ್‌ ಶೋಮ್‌’ ಇಂದಿಗೂ ಗುರುತಿಸಿಕೊಳ್ಳುತ್ತದೆ. ಅದು ಮೃಣಾಲ್‌ ಸೇನ್‌ ಅವರ ಚಿಂತನಾಶಕ್ತಿಯ ಫಲ. ಈ ಚಿತ್ರದ ಬಗ್ಗೆ ಮಾತನಾಡುವಾಗಲೆಲ್ಲ ಅಮಿತಾಭ್‌ ಅವರ ಸ್ವರ ಶಕ್ತಿಯನ್ನೂ ಜಗತ್ತು ಸ್ಮರಿಸುತ್ತದೆ.

ಅದೇ ವರ್ಷ ಅವರು ಒಂದಷ್ಟು ಮಂದಿಯ ಕೈಯಲ್ಲಿ ತಮ್ಮ ಭಾವಚಿತ್ರವನ್ನು ನೀಡಿದ್ದರು. ನಟನಾಗುವ ಅದಮ್ಯ ಆಸೆ ಅವರದಾಗಿತ್ತು. ಅದಕ್ಕಾಗಿ ಬಯೊಡೇಟಾ ಕೊಡುವುದಕ್ಕಿಂತ ತಮ್ಮ ದಿವಿನಾದ ಮುಖದ ಫೋಟೊ ಕೊಡುವುದೇ ಸೂಕ್ತ ಎಂಬುದು ಅವರ ಇಂಗಿತವಾಗಿತ್ತು.

ಟೀನು ಆನಂದ್ ಬರೆದ ಭವಿಷ್ಯ!

ಅಮಿತಾಭ್‌ ಬಾಲಿವುಡ್‌ನಲ್ಲಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ, ಬಾಲಿವುಡ್‌ನ ಹೆಸರಾಂತ ನಿರ್ದೇಶಕ, ಸಂಭಾಷಣೆಕಾರ, ನಟ ಟೀನೂ ಆನಂದ್‌ ಹೇಳಿದ ಕತೆ ಕೇಳಿದರೆ ನೀವೂ ಬೆರಗಾಗುತ್ತೀರಿ.

1969ರಲ್ಲಿ,ನಿರ್ದೇಶಕ ಖ್ವಾಜಾ ಅಹಮದ್ ಅಬ್ಬಾಸ್‌ ಅವರು ‘ಸಾತ್‌ ಹಿಂದುಸ್ತಾನಿ’ ಚಿತ್ರಕ್ಕೆ ತಾರಾಗಣವನ್ನು ಆಯುತ್ತಿದ್ದ ದಿನಗಳ ಕತೆ ಅದು. ಟೀನೂ ಆನಂದ್‌ಗೆ ನಾಯಕ ಪಾತ್ರ ಮಾಡುವಂತೆ ಅಬ್ಬಾಸ್‌ ಆಫರ್‌ ಮಾಡಿದ್ದರು. ಕತೆ ಕೇಳಿದ ಮೇಲೆ ಆ ಪಾತ್ರ ಮಾಡುವುದು ತಮ್ಮಿಂದಾಗದು ಎಂದು ಟೀನೂಗೆ ಸ್ಪಷ್ಟವಾಯಿತು. ಅಬ್ಬಾಸ್‌ ಪಟ್ಟು ಬಿಡಲಿಲ್ಲ. ಕೊನೆಗೂ ‘ಆ ಪಾತ್ರಕ್ಕೆ ಸೂಕ್ತ ವ್ಯಕ್ತಿಯನ್ನು 48 ಗಂಟೆಯೊಳಗೆ ತರುತ್ತೀಯಾದರೆ ನಿನ್ನನ್ನು ಬಿಡುತ್ತೇನೆ’ ಎಂದರು.

ನಯವಾದ ಮುಖದ ಲಂಬೂ ಯುವಕನ ಫೋಟೊ ತನ್ನ ಜೇಬಿನಲ್ಲಿರುವುದು ನೆನಪಾಯಿತು. ಅದನ್ನು ಕೊಟ್ಟಿದ್ದು ಟೀನೂ ಗೆಳತಿ. ಇನ್ಯಾರದೋ ಮೂಲಕ ಕೈಸೇರಿದ್ದ ಆ ಫೋಟೊವನ್ನು ಟೀನೂಗೆ ಕೊಟ್ಟಿದ್ದಳಾಕೆ. ಜೇಬು ತಡಕಾಡಿ ಫೋಟೊವನ್ನು ನಿರ್ದೇಶಕರ ಕೈಲಿಟ್ಟರು. ಆ ಯುವಕನನ್ನು ಕರೆತರುವಂತೆ ನಿರ್ದೇಶಕರು ಅಪ್ಪಣೆ ಕೊಟ್ಟರು. ಟೀನೂ ಆ ಯುವಕನನ್ನು ಕರೆತಂದು ಅಬ್ಬಾಸ್ ಮುಂದೆ ನಿಲ್ಲಿಸಿದರು. ಒಂದಷ್ಟು ತಾಲೀಮು ಮಾಡಿ ತೋರಿಸಿದ ಬಳಿಕ ಯುವಕನನ್ನು ಅಬ್ಬಾಸ್‌ ಒಪ್ಪಿಕೊಂಡರು.

ಹಿಂದಿ ಚಿತ್ರರಂಗದಲ್ಲಿಅಮಿತಾಭ್‌ ಬಚ್ಚನ್‌ ಶಕೆ ಆರಂಭವಾದದ್ದು ಹಾಗೆ!

ಅಂದ ಹಾಗೆ, ‘ಸಾತ್‌ ಹಿಂದುಸ್ತಾನಿ’ಯಲ್ಲಿ ಬಚ್ಚನ್‌ಗೆ ಸಿಕ್ಕಿದ ಸಂಭಾವನೆ ಕೇವಲ 5,000 ರೂಪಾಯಿ.

ಟೀನೂ ಕೈಬಿಟ್ಟ ಅವಕಾಶ ತಮ್ಮದಾದರೂ ಚಿತ್ರರಂಗಕ್ಕೆ ಪರಿಚಯಿಸಿದವರು ಅವರೇ ಎಂಬ ಕೃತಜ್ಞತೆ ಇಂದಿಗೂ ಬಚ್ಚನ್‌ ಅವರಿಗಿದೆ. ಒಂದು ಭಾವಚಿತ್ರದ ಹಸ್ತಾಂತರದ ಮೂಲಕ ಆರಂಭವಾದ ಗೆಳೆತನ ಇಂದಿಗೂ ಬೆಚ್ಚಗೆ ಉಳಿದಿದೆ.

ಒಂದೆರಡಲ್ಲ 12 ಫ್ಲಾಪ್‌ ಚಿತ್ರಗಳು!

ಅಮಿತಾಭ್ ಬಚ್ಚನ್‌ ಸೂಪರ್‌ ಸ್ಟಾರ್‌ ಆದ ಮೇಲೆ, ನಟಿಸಿದ ಚಿತ್ರಗಳೆಲ್ಲವೂ ಹಿಟ್‌ ಆಗಿರಬಹುದು ಇಲ್ಲವೇ ಅವರ ಪಾತ್ರವಾದರೂ ಬೆಳಗಿರಬಹುದು. ಆದರೆ ಆರಂಭದ ವರ್ಷಗಳಲ್ಲಿ ಬಚ್ಚನ್‌ ಅವರನ್ನು‘ಫ್ಲಾಪ್‌ ಚಿತ್ರಗಳ ನಟ’ ಎಂದೇ ಬಾಲಿವುಡ್‌ ಗುರುತಿಸುತ್ತಿತ್ತು. ನೆಲಕಚ್ಚಿದ ಚಿತ್ರಗಳ ಸಂಖ್ಯೆ 12! ನಾಯಕನಟನಾಗಿ ನಟಿಸಿದ ‘ಬಾಂಬೆ ಟು ಗೋವಾ’ ಮತ್ತು ಪೋಷಕ ಪಾತ್ರದ ‘ಆನಂದ್‌’ ಮಾತ್ರ ಗೆದ್ದಿತ್ತು.ಬಚ್ಚನ್‌ ಗೆಲುವಿನ ಓಟ ಶುರುವಾದುದು 1973ರಲ್ಲಿ ತೆರೆ ಕಂಡ ‘ಜಂಜೀರ್‌’ ಮೂಲಕ.

‘ಬಾಲಿವುಡ್‌ ಶೆಹನ್‌ಶಾ’,‘ಆ್ಯಂಗ್ರಿ ಯಂಗ್‌ಮ್ಯಾನ್‌’, ‘ಮಿಲೇನಿಯಂ ಸ್ಟಾರ್‌’, ‘ಬಿಗ್‌ ಬಿ’ ಎಂದೆಲ್ಲಾ ಭಾರತೀಯ ಚಿತ್ರರಂಗ ಬಚ್ಚನ್‌ ಅವರನ್ನು ಇಂದು ಹಾಡಿ ಹೊಗಳುತ್ತದೆ. ಆದರೆ ಅನುಭವಿಸಿದ ಅವಮಾನಕ್ಕೇ ಸಡ್ಡುಹೊಡೆದು ಮರಳಿ ಯತ್ನವ ಮಾಡಿದ ಕಾರಣ ಈ ಮಹಾನ್‌ ತಾರೆ ಸಿಕ್ಕಿದ್ದಾರೆ.

ಟ್ವಿಟರ್‌ನಲ್ಲಿ ಅಮಿತಾಭ್‌ ಅಭಿಮಾನಿಯೊಬ್ಬರು ಒಮ್ಮೆ ಹೀಗೆ ಬರೆದಿದ್ದರು: ‘ಈಗಿನ ನಟರು ಒಂದು ಚಿತ್ರ ಹಿಟ್‌ ಆದರೂ ‘ಸೂಪರ್‌ ಸ್ಟಾರ್‌’ ಎಂದು ಕರೆಸಿಕೊಳ್ಳುತ್ತಾರೆ. ಒಂದೇ ವರ್ಷ ಆರು ಹಿಟ್ ಚಿತ್ರಗಳನ್ನು ಕೊಟ್ಟ ನಮ್ಮ ಬಿಗ್‌ ಬಿ ಮಾತ್ರ ಆ ಗೌರವಕ್ಕೆ ಅರ್ಹರು’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.